Advertisement

ಕೊನೆಗೂ ದೇಗುಲ ಬಾಗಿಲು ತೆರೆಯಿತು! ಬರೋಬ್ಬರಿ 7 ತಿಂಗಳ ಬಳಿಕ ಭಕ್ತರಿಗೆ ದೇವರ ದರ್ಶನ 

06:54 PM Nov 15, 2020 | sudhir |

ಮುಂಬೈ: ಬರೋಬ್ಬರಿ 7 ತಿಂಗಳು… ದೇಗುಲದಲ್ಲಿದ್ದ ದೇವರು ಭಕ್ತರ ಮುಖ ನೋಡಿರಲಿಲ್ಲ. ಮನೆಯಲ್ಲಿದ್ದ ಭಕ್ತ, ದೇವಳದ ಭಗವಂತನನ್ನು ಕಂಡಿರಲಿಲ್ಲ… ಕೊನೆಗೂ ಸೋಮವಾರದಿಂದ ದೇಗುಲದ ಬಾಗಿಲು ತೆರೆಯಲು ಮಹಾರಾಷ್ಟ್ರ ಸರ್ಕಾರ ಅನುಮತಿಸಿದ್ದು, ಭಕ್ತಾದಿಗಳಲ್ಲಿ ಪುಳಕ ಹೆಚ್ಚಿಸಿದೆ.

Advertisement

ದೇಗುಲ ಆವರಣದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಲು ಸೂಚಿಸಲಾಗಿದೆ. ಎಲ್ಲ ರಾಜ್ಯಗಳಲ್ಲಿ ದೇಗುಲ ತೆರೆಯಲು ಅನುಮತಿ ನೀಡಿದ್ದರೂ, “ಮಹಾ’ ಸರ್ಕಾರ ಕೊರೊನಾದ ನೆಪವೊಡ್ಡಿ, ನಿರ್ಬಂಧವನ್ನು ವಿಸ್ತರಿಸಿದ್ದಕ್ಕೆ ರಾಜಕೀಯ ಆಕ್ಷೇಪಗಳೂ ಕೇಳಿಬಂದಿದ್ದವು. ಆ ಗಲಾಟೆಗಳೆಲ್ಲ ಈಗ ತಣ್ಣಗಾಗಿ, ದೇಗುಲ ಗಂಟೆಯ ಸದ್ದೊಂದೇ ಕೇಳುವಂತಾಗಿದೆ.

ನಿಯಮಗಳೇನೇನು?: ವಿಗ್ರಹ ಅಥವಾ ಧರ್ಮ ಗ್ರಂಥಗಳನ್ನು ಸ್ಪರ್ಶಿಸುವಂತಿಲ್ಲ. ಪ್ರಸಾದ ವಿತರಣೆಗೆ ಅನುಮತಿ ಇಲ್ಲ. ತೀರ್ಥ ನೀಡುವುದು, ಚಿಮುಕಿಸುವುದಕ್ಕೆ ಅವಕಾಶವಿಲ್ಲ. ಪ್ರಾರ್ಥನೆ ಮಾಡುವ ಭಕ್ತಾದಿಗಳು, ಅವರೇ ಸ್ವತಃ ಮ್ಯಾಟ್‌ ಅಥವಾ ಶುಚಿ ಬಟ್ಟೆಗಳನ್ನು ತರತಕ್ಕದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಇದನ್ನೂ ಓದಿ:ಮೈಸೂರು: ಪ್ರೀತಿಯ ನಾಟಕವಾಡಿ ಯುವತಿಯನ್ನು ಬೆಂಕಿಹಚ್ಚಿ ಕೊಂದ ಹಂತಕ ಅರೆಸ್ಟ್

ನೋ ಎಂಟ್ರಿ: 65 ವರ್ಷ ಮೇಲ್ಪಟ್ಟವರು, ಅನಾರೋಗ್ಯಪೀಡಿತರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ದೇಗುಲ ಪ್ರವೇಶಕ್ಕೆ ಸರ್ಕಾರ ಅನುಮತಿ ಕಲ್ಪಿಸಿಲ್ಲ.

Advertisement

ನಿಯಮ ಪಾಲಿಸಿದರಷ್ಟೇ ದೇವರ ಆಶೀರ್ವಾದ: ಉದ್ಧವ್‌
“ದೇಗುಲ ಆವರಣದಲ್ಲಿ ನೀವು ಶಿಸ್ತಿನಿಂದ, ಆರೋಗ್ಯ ಮಾರ್ಗಸೂಚಿ ಪಾಲಿಸಿದರಷ್ಟೇ ದೇವರು ನಮಗೆ, ನಮ್ಮ ನಾಡಿಗೆ ಆಶೀರ್ವದಿಸುತ್ತಾನೆ. ಕೊರೊನಾ ನಮ್ಮ ಸುತ್ತಮುತ್ತ ಇನ್ನೂ ಜೀವಂತವಿದೆಯೆಂಬ ವಾಸ್ತವವನ್ನು ನಾವು ಮರೆಯಬಾರದು. ಸ್ವ-ನಿಯಮ ಅಳವಡಿಸಿಕೊಂಡು ನಾವು ಈ ಬಾರಿ ಹಬ್ಬಗಳನ್ನು ಆಚರಿಸಬೇಕಾಗಿದೆ’ ಎಂದು ಸಿಎಂ ಉದ್ಧವ್‌ ಠಾಕ್ರೆ ಕರೆನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next