ಮುಂಬಯಿ: ಸಮ ಸಮಾಜದ ನಿರ್ಮಾಣಕ್ಕೆ ಮತ್ತು ಸಮುದಾಯದ ಸಮಗ್ರ ಬೆಳವಣಿಗೆಗೆ ತೊಡಕಾಗಿರುವ ಜಾತಿ ವ್ಯವಸ್ಥೆಯನ್ನು ಕಿತ್ತೂಗೆದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂಬ ಸರ್ವಶ್ರೇಷ್ಠ ಸಂದೇಶವನ್ನು ತಮ್ಮ ಕೀರ್ತನೆಗಳಲ್ಲಿ ತಿಳಿಸಿ ಕೊಡುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕ ಶ್ರೇಷ್ಠ ಎಂದು ಮಹಾರಾಷ್ಟ್ರ ಪಶುಸಂಗೋಪನೆ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಅಭಿವೃದ್ಧಿ ಸಚಿವ ಮಹಾದೇವ್ ಜಾನ್ಕರ್ ಅವರು ಹೇಳಿದರು.
ಇತ್ತೀಚೆಗೆ ನಗರದ ಮಸ್ಜಿದ್‌ಬಂದರ್‌ನ ದರಿಯಸ್ತಾನ್ ಮಂದಿರದಲ್ಲಿ ಮಹಾರಾಷ್ಟ್ರ ಕುರುಬರ ಸಂಘದ ಅಧ್ಯಕ್ಷ ಮಂಜೇ ಚಿಕ್ಕೇಗೌಡ ಅವರ ಅಧ್ಯಕ್ಷತೆ ಹಾಗೂ ಚೆಂಬೂರ್ ಶ್ರೀ ಶನೇಶ್ವರ ದೇಗುಲದ ಧರ್ಮಾಧಿಕಾರಿ ಕೆ.ಎಂ ರಾಮಸ್ವಾಮಿ ಆಶೀರ್ವಚನದೊಂದಿಗೆ ಕುರುಬರ ಸಂಘವು 531ನೇ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಆಚರಿಸಿದ್ದು ಈ ಕಾರ್ಯಕ್ರಮ ಉದ್ಘಾಟಿಸಿ ಸಚಿವ ಜಾನ್ಕರ್ ಮಾತನಾಡಿದರು.
ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯ ದಬ್ಟಾಳಿಕೆ ವಿರುದ್ಧ ತಮ್ಮ ವಚನಗಳ ಮೂಲಕ ಹೋರಾಟ ಮಾಡಿ ದರು. ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡಿದರು. ಅಲ್ಲದೆ ಜಗಜ್ಯೋತಿ ಬಸವಣ್ಣನಂತೆಯೇ ಕನಕದಾಸರೂ ಸಹ ಜಾತಿ ಪದ್ಧತಿಯ ವಿರುದ್ಧ ತಮ್ಮ ವೈಚಾರಿಕ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವ ಮೂಲಕ ಸಮಾಜ ಅಭಿವೃದ್ಧಿಯಾಗಲು ಜಾತಿಗಳು ನಾಶವಾಗಬೇಕು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿರುವ ಸಾಮಾಜಿಕ ಕ್ರಾಂತಿಯ ಹರಿಕಾರ ಕನಕದಾಸರು. ಕನಕದಾಸರು ಕೇವಲ ಒಂದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಹಾಗಾಗಿ ಕನಕದಾಸರ ತತ್ವಾದರ್ಶಗಳು ಹಾಗೂ ಸಂದೇಶಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸುವ ಮೂಲಕ ಕನಕದಾಸರ ಆಶಯದಂತೆ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ನಮ್ಮ ಕುರುಬ ಸಮಾಜವು ದೇಶಾದ್ಯಂತ ಸುಮಾರು 18 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದೆ. ನಮ್ಮ ಸಮಾಜಕ್ಕೆ ರಾಜಕೀಯ ಸ್ಥಾನ ಮಾನಗಳು ಇನ್ನೂ ಹೆಚ್ಚು ಸಿಗಬೇಕು. ನಮ್ಮ ಸಮಾಜವು ಅಖೀಲ ಭಾರತ ಮಟ್ಟದಲ್ಲಿ ಸಂಘಟಿತರಾಗುವ ಮೂಲಕ ನಮ್ಮ ಸಮಾಜದ ಹಿರಿಯ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ಮಟ್ಟದಲ್ಲಿ ನಾಯಕನನ್ನಾಗಿ ರೂಪಿಸಿದರೆ ನಮ್ಮ ಸಮಾಜವು ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಂದು ನೆಲೆ ನಿಂತಿರುವ ಕನ್ನಡಿಗರು ಸಂಘಟಿತರಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಇದು ಅಭಿವೃದ್ಧಿಯ ದಿಕ್ಕಿನತ್ತ ಸಾಗಲು ದಾರಿಯಾಗಿದೆ ಎಂದು ಸಚಿವ ಮಹಾದೇವ್ ಜಾನ್ಕರ್ ಹೇಳಿದರು.
ಸಂಘಟಿತ ರಾಗಬೇಕು
ಹಿಂದುಳಿದ ವರ್ಗಗಳು ಅಭಿವೃದ್ಧಿ ಯಾಗಬೇಕಾದರೆ ಮೊದಲು ಸಂಘಟಿತ ರಾಗಬೇಕು ಹಾಗೂ ಕಡ್ಡಾಯವಾಗಿ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂಘಟಿತರಾಗಿ ತಮಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದು ರಾಮಸ್ವಾಮಿ ನುಡಿದರು.
ಆರ್‌ಎಸ್‌ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಕ್ಕಿಸಾಗರ್, ಮಸ್ಜಿದ್ ಬಂದರ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನೋದ್ ದೇವಿಚ್ಚಾ, ವಲ್ಲಿ ಎಂ. ಶೇಖ್, ಅಮಾನ್ ಬಾಯಿ, ಮಂಡ್ಯ ಜಿಲ್ಲಾ ಪಂಚಾಯತ್ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಕೆ.ಆರ್. ಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ರವೀಂದ್ರಬಾಬು, ರಾಷ್ಟ್ರೀಯ ಭಾರತ್ ಜ್ಯೋತಿ ಸರ್ವೋತ್ಕƒಷ್ಟ ಪ್ರಶಸ್ತಿ ಪುರಸ್ಕೃತ ಕೆ.ಆರ್. ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಡಾ| ಮೀನಾಕ್ಷಿ ರಮೇಶ್, ಕೆ.ಆರ್. ಪೇಟೆ ತಾಲೂಕು ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಹಾಗೂ ತಾಲೂಕು ಪಂಚಾಯತ್ ಸದಸ್ಯ ಸಣ್ಣನಿಂಗೇ ಗೌಡ, ಕೆ.ಆರ್. ಪೇಟೆ ಪುರಸಭೆಯ ಮಾಜಿ ಸದಸ್ಯ ಸ್ನೇಹಿತ್‌ರಮೇಶ್, ಮಹಾರಾಷ್ಟ್ರ ಕುರುಬರ ಸಂಘದ ಉಪಾಧ್ಯಕ್ಷ ಯೋಗೇಶ್ ಸಣ್ಣಪ್ಪಗೌಡ, ಶಿವ ಪುಟ್ಟೇಗೌಡ, ಕೋಶಾಧಿಕಾರಿ ಗಂಗಾಧರ ಕಾಳೇಗೌಡ, ಎಚ್.ಕೆ ಮಂಜೇಗೌಡ, ಸಲಹೆಗಾರ ಉಮೇಶ್ ಕಾಳೇಗೌಡ, ನಿರ್ದೇಶಕರಾದ ದೇವರಾಜು ಬೀರೇಗೌಡ, ಮಂಜೇಗೌಡ, ರಮೇಶ್ ನಂಜೇಗೌಡ, ಉಮೇಶ್ ಅಣ್ಣಪ್ಪ ಗೌಡ, ಷಣ್ಮುಖ (ಮುತ್ತಣ್ಣ) ದೊಡ್ಡೇಗೌಡ, ರವಿ ಜವರೇಗೌಡ, ಉದ್ಯಮಿ ರಮೇಶ್‌ಗೌಡ, ಅಣ್ಣೇ ಚೌಡೇನಹಳ್ಳಿ ರವಿಗೌಡ, ಉಪಾಧ್ಯಕ್ಷೆ ರತ್ನಮ್ಮ ಆರ್. ಗೌಡ, ಕಾರ್ಯದರ್ಶಿ ಸರಸ್ವತಿ ಆರ್.ಮಂಡಲ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಧ ಸಂಘ ಸಂಸ್ಥೆಗಳ ಹಾಗೂ ಸಮಾಜದ ಮುಖಂಡರುಮತ್ತು ಗಣ್ಯರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಭಾವಚಿತ್ರವನ್ನು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ವೇದಿಕೆಗೆ ತರಲಾಯಿತು. ಗೌರವ ಕಾರ್ಯದರ್ಶಿ ರವಿಕುಮಾರ್ ಕಾಳೇಗೌಡ ಸ್ವಾಗತಿಸಿದರು. ಅಮೃತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪಿ.ಗೌಡ ವಂದಿಸಿದರು. ಬೆಂಗಳೂರಿನ ಹೆಸರಾಂತ ಗಾಯಕರಾದ ಶಿವಕುಮಾರ್‌ಎಂ. ಮೌರ್ಯ ಮತ್ತು ಸಂಗಡಿಗರು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.
ಜಾತಿ ವ್ಯವಸ್ಥೆ ದೂರವಾಗದೆ ಇರುವುದು ಸರಿಯಲ್ಲ
ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕದಾಸರ ಅದ್ಭುತ ಕೀರ್ತನೆಯ ಸಾಲು ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಲು ಸಹಕಾರಿಯಾಗುತ್ತದೆ. ಹುಟ್ಟುವಾಗ ನಾವೆಲ್ಲರೂ ಬರಿಗೈಯಲ್ಲಿ ಬರುತ್ತೇವೆ. ಹೋಗುವಾಗಲು ಬರಿಗೈಯ್ಯಲ್ಲಿ ಹೋಗುತ್ತೇವೆ. ಆದರೆ ಇರುವ ಮಧ್ಯೆ ಜಾತಿ, ಮತ, ಪಂಥ, ಧರ್ಮ ಏಕೆ ಬೇಕು ಎಂದು ಕನಕದಾಸರು ಜಾತಿ ಜಾತಿ ಎಂದು ಬಡಿದಾಡುವವರಿಗೆ 500 ವರ್ಷಗಳ ಹಿಂದೆ ಕಿವಿ ಮಾತು ಹೇಳಿದ್ದರು. ಆದರೆ ಇಂದಿಗೂ ಜಾತಿ ವ್ಯವಸ್ಥೆ ದೂರವಾಗದೆ ಇರುವುದು ಸರಿಯಲ್ಲ ಎಂದು ಸಚಿವ ಜಾನ್ಕರ್ ನುಡಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್