ಮಹಾರಾಷ್ಟ್ರದಲ್ಲಿ ಸತತ 3 ದಿನಗಳಿಂದ 50 ಸಾವಿರ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ವಾರಾಂತ್ಯ ಲಾಕ್‌ಡೌನ್, ರಾತ್ರಿ ಕರ್ಫ್ಯೂ, ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಸಿಎಂ ಉದ್ಧವ್ ಠಾಕ್ರೆ ಆದೇಶ ಹೊರಡಿಸಿದ್ದಾರೆ. ಸೋಮವಾರದಿಂದಲೇ ಈ ನಿಯಮಗಳು ಅನ್ವಯವಾಗಲಿದ್ದು, ಎ. 30ರ ವರೆಗೂ ಜಾರಿಯಲ್ಲಿ ಇರಲಿವೆ.
Advertisement
ರವಿವಾರ ನಡೆದ ಸಂಪುಟ ಸಭೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಬೇಡ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ “ಭಾಗಶಃ ನಿರ್ಬಂಧ’ ಹೇರಲಾಗಿದೆ.
ಸಿಎಂ ಉದ್ಧವ್ ಠಾಕ್ರೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮತ್ತು ಉದ್ದಿಮೆಗಳ ಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರವಿವಾರ ಬೆಳಗ್ಗೆವರೆಗೆ ಸಮಾಲೋಚನೆ ನಡೆಸಿ ಸಂಜೆ ತೀರ್ಮಾನ ಘೋಷಿಸಿದ್ದಾರೆ. ಶನಿವಾರ ಮಲ್ಟಿಪ್ಲೆಕ್ಸ್, ಜಿಮ್, ಪತ್ರಿಕೆಗಳ ಮಾಲಕರೊಂದಿಗೆ ಸಿಎಂ ಠಾಕ್ರೆ ವರ್ಚುವಲ್ ಸಭೆ ನಡೆಸಿ ಕೊರೊನಾಕ್ಕೆ ಕಡಿವಾಣ ಹಾಕುವ ಪ್ರಯತ್ನದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದರು.
Related Articles
ಇತ್ತ ಹೊಸದಿಲ್ಲಿಯಲ್ಲಿ ಪ್ರಧಾನಿ ಮೋದಿ ರವಿವಾರ ಉನ್ನತ ಮಟ್ಟದ ಸಭೆ ನಡೆಸಿ, ಕೊರೊನಾ ಸ್ಥಿತಿ ಮತ್ತು ಲಸಿಕೆ ಅಭಿಯಾನದ ಕುರಿತು ಚರ್ಚಿಸಿದ್ದಾರೆ. ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, ಮಾರ್ಗಸೂಚಿ ಪಾಲನೆ ಮತ್ತು ಲಸಿಕೆ ಸ್ವೀಕಾರ – ಈ 5 ಅಂಶಗಳ ಕಾರ್ಯತಂತ್ರ ಅನುಸರಿಸಿದರೆ ಸೋಂಕಿಗೆ ಕಡಿವಾಣ ಹಾಕಲು ಸಾಧ್ಯ ಎಂದಿದ್ದಾರೆ. ಮಾಸ್ಕ್ ಬಳಕೆ, ವೈಯಕ್ತಿಕ ನೈರ್ಮಲ್ಯ, ಸಾರ್ವಜನಿಕ ಸ್ಥಳ, ಕೆಲಸದ ಸ್ಥಳ, ಆರೋಗ್ಯ ಕೇಂದ್ರಗಳಲ್ಲಿ ಸ್ಯಾನಿಟೇಶನ್ ಹೆಚ್ಚಿಸುವ ವಿಶೇಷ ಅಭಿಯಾನವನ್ನು ಎ. 6ರಿಂದ 14ರ ವರೆಗೆ ನಡೆಸುವ ಘೋಷಣೆ ಮಾಡಿದ್ದಾರೆ. ಸೋಂಕು ಹೆಚ್ಚಿರುವ ಮಹಾರಾಷ್ಟ್ರ, ಪಂಜಾಬ್, ಛತ್ತೀಸ್‌ಗಢಕ್ಕೆ ತಂಡ ರವಾನಿಸಲು ಸೂಚಿಸಿದ್ದಾರೆ.
Advertisement
ಜಿಮ್: ಶೇ. 50 ಅನುಮತಿಕರ್ನಾಟಕದಲ್ಲಿ ಜಿಮ್‌ಗಳ ಮೇಲೆ ರಾಜ್ಯ ಸರಕಾರ ವಿಧಿಸಿದ್ದ ಕಠಿನ ನಿರ್ಬಂಧವನ್ನು ಸಡಿಲಗೊಳಿಸಲಾಗಿದ್ದು, ಶೇ. 50 ಭರ್ತಿಯಾಗಿ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ. ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದ್ದು, ಜಿಮ್ ತೆರೆದ ಸಮಯದಲ್ಲಿ 50 ಆಸನಗಳನ್ನು ಮಾತ್ರ ಭರ್ತಿ ಮಾಡಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಬಳಕೆಯ ಅನಂತರ ಉಪಕರಣ ಗಳನ್ನು ಸ್ಯಾನಿಟೈಸ್ ಮಾಡಬೇಕು. ಈ ನಿಯಮ ಉಲ್ಲಂಘಿಸಿದರೆ ಜಿಮ್ ಬಾಗಿಲು ಮುಚ್ಚಿಸ ಲಾಗುತ್ತದೆ ಎಂದು ಸರಕಾರ ತಿಳಿಸಿದೆ. 15.25 ಲಕ್ಷ ಡೋಸ್ ಲಸಿಕೆ
ಕರ್ನಾಟಕ ಸರಕಾರದ ಮನವಿಯಂತೆ ಕೇಂದ್ರವು ತುರ್ತಾಗಿ 15.25 ಲಕ್ಷ ಡೋಸ್ ಲಸಿಕೆ ಕಳುಹಿಸುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಸೋಮವಾರ 10 ಲಕ್ಷ ಡೋಸ್ ಲಸಿಕೆಯನ್ನು ಏರ್‌ಲಿಫ್ಟ್ ಮಾಡಲಾಗುತ್ತದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 7 ಲಕ್ಷ ಡೋಸ್ ವ್ಯಾಕ್ಸಿನ್ ಲಭ್ಯವಿದೆ. ಶನಿವಾರ 2.5 ಲಕ್ಷ ಜನರಿಗೆ ಲಸಿಕೆ ಹಾಕಿಸಲಾಗಿದೆ. ಲಸಿಕೆ ಕೊರತೆಯಿಲ್ಲ ಎಂದಿದ್ದಾರೆ. ಹೇಗಿರಲಿದೆ ಸೆಮಿ ಲಾಕ್‌ಡೌನ್?
– ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 7ರ ವರೆಗೆ ವಾರಾಂತ್ಯ ಲಾಕ್‌ಡೌನ್
– ಮಾ. 5ರಿಂದ ಎ. 30ರ ವರೆಗೆ ರಾತ್ರಿ 8ರಿಂದ ಬೆಳಗ್ಗೆ 7ರ ವರೆಗೆ ರಾತ್ರಿ ಕರ್ಫ್ಯೂ
– ಹಗಲು ಹೊತ್ತು 5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ
– ಮಾಲ್, ರೆಸ್ಟೋರೆಂಟ್, ಬಾರ್, ಧಾರ್ಮಿಕ ಕೇಂದ್ರ, ಥಿಯೇಟರ್, ಪಾರ್ಕ್ ಬಂದ್
– ಅಗತ್ಯ ವಸ್ತುಗಳ ಹೋಂ ಡೆಲಿವರಿಗೆ ಅವಕಾಶ
– ಕೈಗಾರಿಕೆ ಚಟುವಟಿಕೆಗಳು, ನಿರ್ಮಾಣ ಕಾಮಗಾರಿಗೆ ಅನುಮತಿ
– ಸಿನೆಮಾ ಚಿತ್ರೀಕರಣಕ್ಕೆ ಅನುಮತಿ
– ಶೇ. 50ರ ಆಸನ ಸಾಮರ್ಥ್ಯದಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ
– ಮಾಸ್ಕ್ ಧರಿಸದಿದ್ದರೆ 500 ರೂ. ದಂಡ