Advertisement

ಮಹಾರಾಷ್ಟ್ರ ಗಡಿ ಸಮಸ್ಯೆ ಚರ್ಚೆಗೆ ಸಭೆ ಕರೆಯಿರಿ: ಸಿಎಂಗೆ ಎಚ್‌.ಕೆ.ಪಾಟೀಲ್‌ ಪತ್ರ

10:26 AM Dec 22, 2019 | sudhir |

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ಮತ್ತೆ ಬೆಳಗಾವಿ ಗಡಿ ಸಮಸ್ಯೆ ಕುರಿತು ತಕರಾರು ಎತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಕೂಡ ತಕ್ಷಣ ಗಡಿ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡಿದವರು ಹಾಗೂ ಗಡಿ ವಿವಾದ ಕುರಿತು ಸೇವೆ ಸಲ್ಲಿಸಿದವರ ವಿಶೇಷ ಸಭೆ ಕರೆಯಬೇಕು ಎಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾಜನ್‌ ವರದಿ ಸೇರಿದಂತೆ ಅನೇಕ ಸಂಸ್ಥೆಗಳು ಕರ್ನಾಟಕದ ಪರವಾಗಿ ತೀರ್ಪು ನೀಡಿವೆ. ಆದರೂ, ಮಹಾರಾಷ್ಟ್ರದ ಶಿವಸೇನೆ ಸಂಸ್ಥಾಪಕ ಬಾಳಾಠಾಕ್ರೆ, ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಸೇರಿದಂತೆ ಎಲ್ಲ ನಾಯಕರು ರಾಜಕೀಯ ಲಾಭಕ್ಕಾಗಿ ಗಡಿ ಸಮಸ್ಯೆಯನ್ನು ಕೆದಕುತ್ತಲೇ ಬರುತ್ತಿದ್ದಾರೆ.

ನೂತನವಾಗಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಶಿವಸೇನೆ ನೇತೃತ್ವದ ಸರ್ಕಾರವೂ ಗಡಿ ಸಮಸ್ಯೆಯ ಮೂಲ ದಾಖಲೆಗಳನ್ನು ಸಂಗ್ರಹಿಸಿ ಹೋರಾಟ ನಡೆಸಲು ಇಬ್ಬರು ಸಂಪುಟ ದರ್ಜೆಯ ಸಚಿವರ ಸಮಿತಿ ರಚನೆ ಮಾಡಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರು ಕಾರವಾರ, ನಿಪ್ಪಾಣಿ ಹಾಗೂ ಬೆಳಗಾವಿ ಕರ್ನಾಟಕ ಆಕ್ರಮಿತ ಪ್ರದೇಶವೆಂದು ಉದ್ದಟತನದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಗಡಿ ವಿಷಯದಲ್ಲಿ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದ್ದರಿಂದ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಗೆ ಕಾರಣವಾಗಿತ್ತು.

ಆಗ ಮಹಾರಾಷ್ಟ್ರ ಸರ್ಕಾರ ದಾಖಲಿಸಿದ್ದ ಮೂಲ ದಾವೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌, ಗಡಿ ಪ್ರದೇಶಗಳ ಸೇರ್ಪಡೆ ನಿರ್ಧರಿಸಲು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಸಿರಿನ್‌ ಅವರನ್ನು ನೇಮಕ ಮಾಡಿತ್ತು.

Advertisement

ಆದರೆ, 2016ರಲ್ಲಿ ರಾಜ್ಯ ಸರ್ಕಾರ ನನ್ನನ್ನು ಗಡಿ ಸಲಹಾ ಸಮಿತಿ ಸಚಿವನನ್ನಾಗಿ ನೇಮಕ ಮಾಡಿತ್ತು. ಆಗ ನಿವೃತ್ತ ನ್ಯಾಯಮೂರ್ತಿ ದಿವಂಗತ ವಿ.ಎಸ್‌.ಮಳಿಮಠ ಅವರು ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು. ಹೀಗಾಗಿ, ಸುಪ್ರೀಂಕೋರ್ಟ್‌ ಮನಮೋಹನ್‌ ಸಿರಿನ್‌ ನೇತೃತ್ವದ ಸಮಿತಿಯ ವರದಿ ಜಾರಿಗೆ ತಡೆ ನೀಡಿತ್ತು.

ತಜ್ಞರ ಜೊತೆ ಚರ್ಚಿಸಿ:
ಮಹಾಜನ್‌ ವರದಿಯೇ ಅಂತಿಮ ಎಂಬುದನ್ನು ಕರ್ನಾಟಕ ಈಗಾಗಲೇ ಒಪ್ಪಿಕೊಂಡಿದೆ. ಆದರೆ, ಮಹಾರಾಷ್ಟ್ರ ಆಗಾಗ ಈ ವಿಷಯವನ್ನು ಪ್ರಸ್ತಾಪಿಸುತ್ತಿರುವುದರಿಂದ ಸೂಕ್ತ ಕಾನೂನು ಹೋರಾಟಕ್ಕಾಗಿ ರಾಜ್ಯ ಸರ್ಕಾರ ಗಡಿ ಸಂರಕ್ಷಣಾ ಸಮಿತಿಯಲ್ಲಿ ಕೆಲಸ ಮಾಡಿರುವ ಕೆ.ಎನ್‌.ಬೆಂಗೇರಿ, ಜಿನದತ್ತ ದೇಸಾಯಿ, ಎಸ್‌.ಎಂ.ಕುಲಕರ್ಣಿ ಹಾಗೂ ಬೆಳಗಾವಿಯ ಅಶೋಕ್‌ ಚಂದರಗಿ ಮತ್ತು ಈ ಹಿಂದೆ ಗಡಿ ಸಮಸ್ಯೆಯ ಸಂದರ್ಭದಲ್ಲಿ ಕೆಲಸ ಮಾಡಿದವರ ಸಭೆ ಕರೆದು ಚರ್ಚಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು ಎಂದು ಎಚ್‌.ಕೆ.ಪಾಟೀಲ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next