Advertisement

ಮಹಾರಾಷ್ಟ್ರ ಮಳೆಗೆ 14 ಸೇತುವೆ ಜಲಾವೃತ

10:09 AM Aug 03, 2019 | Sriram |

ಬೆಂಗಳೂರು/ಹುಬ್ಬಳ್ಳಿ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹ ಬಂದಿದ್ದು, ಬೆಳಗಾವಿ ಹಾಗೂ ಬಾಗಲಕೋಟೆ ಅಕ್ಷರಶಃ ನಲುಗಿ ಹೋಗಿದೆ.

Advertisement

ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಬೆಳ್ತಂಗಡಿ, ಕದ್ರಾ, ಜಗಲ್ಬೇಟ್ ಮತ್ತು ಲೋಂಡಾದಲ್ಲಿ ರಾಜ್ಯದಲ್ಲಿಯೇ ಅಧಿಕ, ತಲಾ 5 ಸೆಂ.ಮೀ.ಮಳೆ ಸುರಿಯಿತು.

ಮಹಾರಾಷ್ಟ್ರದ ಕೊಯ್ನಾ, ವಾರಣಾ, ಮಹಾಬಳೇಶ್ವರ ಮತ್ತು ನವಜಾ ಪ್ರದೇಶದಲ್ಲಿ ಕಳೆದ 12 ಗಂಟೆಗಳಲ್ಲಿ 250 ಮಿ.ಮೀ.ಗಿಂತಲೂ ಹೆಚ್ಚಿನ ಮಳೆ ಸುರಿದಿದ್ದು, ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 14 ಸೇತುವೆಗಳು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆಲಮಟ್ಟಿ, ನಾರಾಯಣಪೂರ ಜಲಾಶಯಗಳು ಭರ್ತಿಯಾಗಿವೆ.

ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ- ದಾನವಾಡ ಸೇತುವೆ, ರಾಯಬಾಗ ತಾಲೂಕಿನ ಕುಡಚಿ, ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಭೋಜ, ಸದಲಗಾ-ಬೋರ ಗಾಂವ, ಮಲಿಕವಾಡ-ದತ್ತವಾಡ, ವೇದಗಂಗಾ ನದಿಗೆ ಕಟ್ಟಿರುವ ಭೋಜವಾಡಿ-ಕುನ್ನೂರ, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಸಿ ಸೇತುವೆಗಳು ಮುಳುಗಡೆಗೊಂಡು ಸಂಚಾರ ಕಡಿತಗೊಂಡಿದೆ.

ಇಂಗಳಿ ಗ್ರಾಮದ ತೋಟಪಟ್ಟಿ ಪ್ರದೇಶ ನಡುಗಡ್ಡೆ ಯಾಗಿದ್ದು, ಅಲ್ಲಿ ಸಿಲುಕಿಕೊಂಡಿದ್ದ 25 ಕುಟುಂಬಗಳನ್ನು ತಾಲೂಕಾಡಳಿತ ಸ್ಥಳಾಂತರಿಸಿದೆ. ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಗಜಾನನ ಕೋಳಿ ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

Advertisement

ಸಂಪರ್ಕ ಕಡಿತ: ಹಿರಣ್ಯಕೇಶಿ ನದಿಯ ನೀರು ಧುಪ ದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ, ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ, ಜಾಲಿಬೇರಿ ಸೇರಿದಂತೆ ಒಟ್ಟು ಐದು ಸೇತುವೆಗಳು ಜಲಾವೃತವಾಗಿವೆ. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ನಂದಗಾಂವ-ಅವರಾದಿ ಮತ್ತು ಅಕ್ಕಿಮರಡಿ-ಮಿರ್ಜಿ ಸೇತುವೆ ಜಲಾವೃತ ಗೊಂಡು ಸಂಪರ್ಕ ಕಡಿತಗೊಂಡಿದೆ. ಮುಧೋಳ ತಾಲೂಕಿನ ಢವಳೇಶ್ವರ ಸೇತುವೆ ಮುಳುಗಡೆಯಾಗಿದ್ದು, ಗೋಕಾಕ ತಾಲೂಕಿನ ಸಂಚಾರ ಕಡಿತಗೊಂಡಿದೆ. ನದಿ ಪಕ್ಕದ ಹೊಲಗದ್ದೆಗಳಿಗೂ ನೀರು ನುಗ್ಗಿದೆ.

ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಿದ್ದು, ಗುರುವಾರ ಸಂಜೆ 22 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರು ಹರಿದು ಬಂದಿದೆ. ಪ್ರಸ್ತುತ ಜಲಾಶಯದಲ್ಲಿ 29 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈಗಾಗಲೇ, ಶಿವಮೊಗ್ಗದ ತುಂಗಾ ಜಲಾಶಯ ತುಂಬಿದ್ದು, ನದಿಗೆ ನೀರು ಹರಿಸಲಾಗುತ್ತಿದೆ.

ಶನಿವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next