ಮಹಾರಾಷ್ಟ್ರ: ನಮಗೆ 50 ಶಾಸಕರ ಬೆಂಬಲವಿದೆ. ಗುರುವಾರ 11ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುತ್ತೇವೆ ಎಂದು ಶಿವಸೇನಾದ ಬಂಡಾಯ ಮುಖಂಡ ಏಕನಾಥ ಶಿಂಧೆ ಬುಧವಾರ (ಜೂನ್ 29) ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಮತಾಂಧ ಶಕ್ತಿಗಳ ಧರ್ಮ ಎಂದರೆ ರಕ್ತಪಾತ: ಕನ್ಹಯ್ಯ ಲಾಲ್ ಹತ್ಯೆ ಕುರಿತು ಆರಗ
ನಾಳೆ ವಿಶ್ವಾಸಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ನೀಡಿರುವ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ಇಂದು ಸಂಜೆ 5ಗಂಟೆಗೆ ನಡೆಯಲಿದೆ.
ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಶಾಸಕರು ಮುಂಬೈಗೆ ಆಗಮಿಸಲಿದ್ದಾರೆ. ಬಂಡಾಯ ಶಾಸಕರು ಬುಧವಾರ ಗುವಾಹಟಿಯಿಂದ ಗೋವಾಕ್ಕೆ ತೆರಳಿದ್ದು, ನಾಳೆ ಬೆಳಗ್ಗೆ ಮುಂಬೈಗೆ ಆಗಮಿಸಲಿದ್ದಾರೆ ಎಂದು ಶಿಂಧೆ ತಿಳಿಸಿದ್ದಾರೆ.
ನಮ್ಮ ಬಳಿ ಇರುವ ಶಾಸಕರ ಸಂಖ್ಯೆ ಬಹುಮತ ಸಾಬೀತು ಪಡಿಸುವಷ್ಟಿದೆ. ಈ ನಿಟ್ಟಿನಲ್ಲಿ ವಿಶ್ವಾಸಮತ ಸಾಬೀತುಪಡಿಸುತ್ತೇವೆ. ಇದರಲ್ಲಿ ಯಾವುದೇ ಸಂದೇಶದ ಅಗತ್ಯವಿಲ್ಲ ಎಂದು ಶಿಂಧೆ ತಿಳಿಸಿರುವುದಾಗಿ ವರದಿ ಹೇಳಿದೆ.
ಬಂಡಾಯ ಶಾಸಕರು ಗೋವಾಕ್ಕೆ ತೆರಳುವ ಮುನ್ನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಮತ್ತೊಂದೆಡೆ ನಾಳೆ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುವ ಬಂಡಾಯ ಶಾಸಕರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಆಗಮಿಸಬೇಕೆಂದು ಮನವಿ ಮಾಡಿಕೊಂಡಿದೆ.