Advertisement
ಇತ್ತೀಚೆಗೆ ಮೊಬೈಲಿಗೆ ಬಂದ ಸಂದೇಶ ಹೀಗಿತ್ತು: ಬಿರುಬಿಸಿಲಿನಲ್ಲಿ ದುಡಿಯುತ್ತಿರುವ ಇಬ್ಬರಲ್ಲಿ ಒಬ್ಬನನ್ನು ಮಾತ್ರ ಕರೆದು ಮಜ್ಜಿಗೆ ಕೊಡುವುದನ್ನು ಮೀಸಲಾತಿ ಎನ್ನುತ್ತೇವೆ. ಮಜ್ಜಿಗೆ ಸಿಗದವನು ನನಗೆ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸದೆ ಸುಮ್ಮ ನಿರುವುದನ್ನು ಜಾತ್ಯತೀತತೆ ಎನ್ನುತ್ತೇವೆ. ನಾನು ಕೂಡ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದೇನಲ್ಲ, ನನಗ್ಯಾಕೆ ಮಜ್ಜಿಗೆ ಕೊಡಲಿಲ್ಲ ಎಂದು ಕೇಳುವುದನ್ನು ಕೋಮುವಾದ ಎನ್ನುತ್ತೇವೆ.
Related Articles
Advertisement
ಸುಮಾರು ಎರಡು ದಶಕಗಳ ಹಿಂದೆ ತಂದೆಯೊಬ್ಬರು ತನ್ನ ಎರಡು ವರುಷದ ಮಗಳನ್ನು ಗೋವಾದ ಅನಾಥಾಶ್ರಮ ವೊಂದಕ್ಕೆ ಸೇರಿಸಿ ಅಲ್ಲಿನ ನೋಂದಣಿ ಪುಸ್ತಕದಲ್ಲಿ ಅಮೃತಾ ಕರವಂದೆ ಎಂದು ಹೆಸರು ಬರೆಸಿ ಹೋದರು. ಹಾಗೆ ಹೋದ
ವರು ಮತ್ತೆ ಬರಲಿಲ್ಲ. ಅಮ್ಮನ ಅಪ್ಪುಗೆಯಿಲ್ಲದೆ, ಅಪ್ಪನ ಅಕ್ಕರೆಯಿಲ್ಲದೆ ಅನಾಥ ಮಕ್ಕಳ ನಡುವೆ ಅಮೃತಾ ಬೆಳೆದು ದೊಡ್ಡವಳಾದರು. ಅಲ್ಲಿನ ಜನ ಅವರನ್ನು ಚೆನ್ನಾಗಿಯೇ ನೋಡಿ ಕೊಂಡು ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದರು. ಅಮೃತಾ ಓದಿನಲ್ಲಿ ಜಾಣೆ. ಅವರಿಗೆ ವೈದ್ಯೆಯಾಗುವ ಬಹಳ ದೊಡ್ಡ ಕನಸಿತ್ತು. ಅದರೆ ಅವರಿದ್ದ ಆಶ್ರಮದಲ್ಲಿ ಹೆಚ್ಚಿನ ಓದಿಗೆ ಅವಕಾಶವಿರಲಿಲ್ಲ. ಹುಡುಗಿಯರಿಗೆ ಹದಿನೆಂಟು ತುಂಬುತ್ತಿದ್ದಂತೆ ಸೂಕ್ತ ವರ ಕಂಡಲ್ಲಿ ಮದುವೆ ಮಾಡಿ ಕಳುಹಿಸುತ್ತಿದ್ದರು. ಕಣ್ತುಂಬಾ ಕನಸುಗಳನ್ನು ತುಂಬಿಕೊಂಡಿದ್ದ ಅಮೃತಾ ಅದಕ್ಕೆ ಸಿದ್ಧರಿರಲಿಲ್ಲ. ಮದುವೆ ಒಲ್ಲೆ ಎಂದರು. ಅನಿವಾರ್ಯವಾಗಿ ಆಶ್ರಮದಿಂದ ಹೊರಬೀಳಲೇಬೇಕಾಯಿತು. ಉನ್ನತ ಶಿಕ್ಷಣ ಪಡೆಯುವ ಆಸೆಯಿಂದ ಗೋವಾದ ರೈಲು ಹತ್ತಿ ಪುಣೆಗೆ ಬಂದಿಳಿದರು. ಕಗ್ಗತ್ತಲ ರಾತ್ರಿ ಅದು. ಅವರಿಗೆ ಅಪರಿಚಿತ ಜಾಗ. ಆ ಕ್ಷಣ ಅಮೃತಾ ದಿಕ್ಕು ತೋಚದಂತಾಗಿದ್ದರು. ಆತ್ಮಹತ್ಯೆಯ ಯೋಚನೆಯೂ ತಲೆಯಲ್ಲಿ ಸುಳಿದು ಹೋಗಿತ್ತು. ಆದರೂ ಬದುಕಬೇಕೆಂದು ನಿರ್ಧರಿಸಿದವರ ರಾತ್ರಿ ರೈಲು ನಿಲ್ದಾಣದಲ್ಲಿಯೇ ಕಳೆದು ಹೋಗಿತ್ತು. ಮರುದಿನ ಅದು ಹೇಗೋ ಧೈರ್ಯ ಮಾಡಿ ಅವರಿವರನ್ನು ಕೇಳಿ ಒಂದಷ್ಟು ಮನೆಗಳಿಗೆ ತೆರಳಿ ಮನೆಗೆಲಸವನ್ನು ಗಿಟ್ಟಿಸಿ ಕೊಂಡರು. ಕಿರಾಣಿ ಅಂಗಡಿಗಳಲ್ಲೂ ಸಹಾಯಕಿಯಾಗಿ ಕೆಲಸ ಮಾಡಲಾರಂಭಿಸಿದರು. ಜೀವನ ಜಂಜಾಟದ ನಡುವೆ ಸಾಗುತ್ತಿತ್ತು. ಹಾಗೆ ಒಂದಷ್ಟು ಜನರ ಪರಿಚಯವಾಯ್ತು. ಸ್ನೇಹಿತರೊಬ್ಬರ ನೆರವಿನಿಂದ ಅಹ್ಮದ್‌ನಗರದ ಸಂಜೆ ಕಾಲೇಜಿನಲ್ಲಿ ಓದಿಗೆ ಸೇರಿದರು. ಆ ಸಮಯದಲ್ಲಿ ಅವರ ಪಾಲಿಗೆ ಸರಕಾರಿ ಆಸ್ಪತ್ರೆಯೇ ಸೂರಾಗಿತ್ತು. ಅಲ್ಲಿಯೇ ಊಟ ವಸತಿ ಸಾಗಿತ್ತು. ಅಂತೂ ಅವರ ಡಿಗ್ರಿ ಮುಗಿದಿತ್ತು. ಅದಾದ ಬಳಿಕ ಸರಕಾರಿ ಕೆಲಸ ಪಡೆದುಕೊಳ್ಳುವ ಹಂಬಲ ದೊಂದಿಗೆ ಮಹಾರಾಷ್ಟ್ರದ ಲೋಕಸೇವಾ ಆಯೋಗದ ಪರೀಕ್ಷೆ ಬರೆದವರಿಗೆ 100ರಲ್ಲಿ 39 ಅಂಕ ಬಂದಿತ್ತು. ಮಹಿಳಾ ಮೀಸಲು ವಿಭಾಗದಲ್ಲಿ ಕೆಲಸ ದೊರೆಯಲು 35 ಅಂಕ ಗಳಿಸಿದ್ದರೆ ಸಾಕಿತ್ತು. ಆದರೆ ಸಂದರ್ಶನಕ್ಕೆ ಹೋದವರ ಬಳಿ ಪಾಲಕರ ಜಾತಿ ವಿವರ ಕೇಳಿದ್ದರು. ಅಮೃತ ಹೇಗೆ ತಾನೆ ಕೊಟ್ಟಾರು? ಅದೇ ಕಾರಣಕ್ಕೆ ಅವರನ್ನು ಜನರಲ್ ಮೆರಿಟ್ ವಿಭಾಗಕ್ಕೆ ಸೇರಿಸಿದರು. ಅಮೃತಾಳಿಗೆ ನಿರಾಶೆ ಕಾದಿತ್ತು. ಅಲ್ಲಿ ಕನಿಷ್ಠ ಅಂಕ 46 ಬರಬೇಕಿತ್ತು. ಆದರೆ ಛಲ ಬಿಡದ ಅಮೃತಾ ಪಿಎಸ್‌ಐ ಪರೀಕ್ಷೆ, ಮಾರಾಟ ತೆರಿಗೆ ಇನ್ಸ್‌ಪೆಕ್ಟರ್ ಪರೀಕ್ಷೆಯನ್ನು ಬರೆದರು. ಅದರೆ ಪ್ರತಿ ಸಲ ಮೀಸಲು ತಪ್ಪುತಿತ್ತು. ಅನಾಥರ ಬದುಕಿನ ಈ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲು ಅವರು ಇನ್ನಿಲ್ಲದಂತೆ ಅಧಿಕಾರಿಗಳನ್ನು ಕೇಳಿಕೊಂಡರು. ಪರಿಣಾಮ ಮಾತ್ರ ಶೂನ್ಯ. ಅದೊಂದು ದಿನ ಧೃಢ ನಿರ್ಧಾರಕ್ಕೆ ಬಂದ ಅಮೃತಾ ನೇರವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸರನ್ನು ಭೇಟಿಯಾಗಲು ಹೊರಟರು. ಅಲ್ಲಿ ಮುಖ್ಯಮಂತ್ರಿಯ ಸಲಹೆಗಾರರಾದ ಶ್ರೀಕಾಂತ್ ಸಿಕ್ಕಿದ್ದರು. ಅವರಲ್ಲೇ ಈ ಎಲ್ಲಾ ಸಮಸ್ಯೆಯನ್ನು ಹೇಳಿಕೊಂಡರು ಅಮೃತಾ. ಶ್ರೀಕಾಂತ್‌ರಿಗೂ ವಾಸ್ತವದ ಅರಿ ವಾಗಿತ್ತು. ಅವರು ಅಮೃತಾರನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದರು. ಹೌದು ಅಲ್ಲಿಗೆ ಅಮೃತಾ ಪರಿಶ್ರಮಕ್ಕೆ ಒಂದು ಭರ್ಜರಿ ಬೆಂಬಲ ಸಿಕ್ಕಿತ್ತು. ಈ ವಿಚಾರವನ್ನು ಸೀರಿಯಸ್ಸಾಗಿ ಪರಿಗಣಿಸಿದ ದೇವೇಂದ್ರ ಫಡ್ನವಿಸ್ ಈ ಕುರಿತಂತೆ ಕಾಳಜಿ ವಹಿಸಿ ಅಂತಿಮವಾಗಿ ಸರಕಾರಿ ಉದ್ಯೋಗದಲ್ಲಿ ಸಾಮಾನ್ಯ ವರ್ಗದಲ್ಲಿನ ಕೋಟಾದಲ್ಲಿ ಶೇಕಡ ಒಂದರಷ್ಟನ್ನು ಅನಾಥರಿಗೆ ನೀಡುವ ಉತ್ತಮ ನಿರ್ಧಾರ ಕೈಗೊಂಡರು. ಈ ಮೀಸಲು ಯಾವ ರೀತಿಯ ಅನಾಥರಿಗೆ ಸಿಗುತ್ತದೆ ಎನ್ನುವುದನ್ನು ಮಹಾರಾಷ್ಟ್ರ ಸರಕಾರ ಸ್ಪಷ್ಟವಾಗಿ ಹೇಳಿದೆ. ಈ ಮೀಸಲಿನಲ್ಲಿ ಸೌಲಭ್ಯ ಪಡೆಯಬೇಕಾದರೆ ಅನಾಥರು ತಂದೆ ತಾಯಿಗಳು ಯಾರೆಂದು ತಿಳಿದಿಲ್ಲದವರಾಗಿರಬೇಕು ಮತ್ತು ಆ ಕಾರಣಕ್ಕಾಗಿ ಅವರಿಗೆ ಜಾತಿ ಧರ್ಮಗಳು ಗೊತ್ತಿಲ್ಲದವರಾಗಿರಬೇಕು. ತಂದೆ ತಾಯಿ ಗೊತ್ತಿದ್ದೂ ಅವರನ್ನು ಕಳೆದುಕೊಂಡ ಅನಾಥರಿಗೆ ಈ ಮೀಸಲು ಸಿಗಲಾರದು. ಈ ನಿಯಮದಲ್ಲಿ ಒಂದಷ್ಟು ಸುಧಾರಣೆ ಖಂಡಿತ ಬೇಕಿದೆ. ಮೀಸಲಿನ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ. ಅದೇನೇ ಇದ್ದರೂ ಇಷ್ಟರಮಟ್ಟಿಗಾದರೂ ಅಮೃತಾ ಹೋರಾಟಕ್ಕೆ ನ್ಯಾಯ ದೊರೆತದ್ದು ನಿಜಕ್ಕೂ ಸಂತೋಷದ ಸಂಗತಿ. ಈ ಹೋರಾಟದ ಮೂಲಕ ಅಮೃತಾ ಕರವಂದೆ ನಿಜಕ್ಕೂ ಅನಾಥರ ಬಾಳಿನ ಒಂದು ಆಶಾಕಿರಣವಾಗಿ ಮೂಡಿ ಬಂದಿದ್ದಾರೆ. ಪ್ರಸ್ತುತ ಪುಣೆಯ ಮಾಡರ್ನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ಅಮೃತಾ ಮತ್ತೂಮ್ಮೆ ಎಮ್‌ಪಿಎಸ್‌ಸಿ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ತನ್ನ ಹೋರಾಟ ಇಲ್ಲಿಗೆ ಖಂಡಿತ ಮುಗಿಯುವುದಿಲ್ಲ. ದೇಶಾದ್ಯಂತ ಇರುವ ಅರ್ಹ ಅನಾಥರಿಗೆ ಇಂತಹ ಸೌಲಭ್ಯ ಸಿಗುವ ತನಕ ಹೋರಾಟವನ್ನು ಕಾಪಿಟ್ಟುಕೊಳ್ಳಲಿದ್ದೇನೆ ಎನ್ನುವ ಅಮೃತಾರ ಮಾತುಗಳಲ್ಲಿ ಆತ್ಮವಿಶ್ವಾಸದ ಕೆಚ್ಚು ಎದ್ದು ಕಾಣಿಸುತ್ತದೆ. ಅದೇ ಅಲ್ಲವೇ ಅವರ ಹೋರಾಟಕ್ಕೆ ಜಯ ಕೊಡಿಸಿದ್ದು. ಅಂತಹ
ಮತ್ತಷ್ಟು ಗೆಲುವು ಅವರಿಗೆ ದಕ್ಕಲಿ. ಅರ್ಹರಿಗೆ ಸೌಲಭ್ಯ ಸಿಗುವಲ್ಲಿ ನಮ್ಮೆಲ್ಲರ ಧ್ವನಿಯೂ ಅವರ ಜೊತೆಗೂಡಲಿ ಎನ್ನುವುದು ಆಶಯ. ಕೊನೆಯ ಮಾತು
ಮನುಷ್ಯ ಮಾನವೀಯತೆಯನ್ನು ಮರೆಯ ದಿದ್ದಿದ್ದರೆ ಈ ಜಗತ್ತಿನಲ್ಲಿ ಯಾರೊಬ್ಬರೂ ಅನಾಥರಾಗಲು ಸಾಧ್ಯವಿರಲಿಲ್ಲ. ಅನಾಥರಿಗೆ ಬೇಕಿರುವುದು ಅಕ್ಕರೆ ತುಂಬಿದ ಪ್ರೋತ್ಸಾಹ. ಅದನ್ನು ನೀಡುವಲ್ಲಿ ಸದಾ ಶ್ರಮಿಸೋಣ. ನರೇಂದ್ರ ಎಸ್. ಗಂಗೊಳ್ಳಿ