ಮುಂಬಯಿ:ಮಾರಣಾಂತಿಕ ಕೋವಿಡ್ 19 ಎರಡನೇ ಅಲೆಗೆ ಮಹಾರಾಷ್ಟ್ರ ಈಗಾಗಲೇ ತತ್ತರಿಸಿ ಹೋಗಿದ್ದು, ಮುಂಬರುವ ಜುಲೈ-ಆಗಸ್ಟ್ ತಿಂಗಳಲ್ಲಿ ಮೂರನೇ ಅಲೆ ಎದುರಿಸಲಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತೀಯ ಚಿತ್ರರಂಗದ ಪಿತಾಮಹರ ಹುಟ್ಟು ಹಬ್ಬ : ದಾದಾ ಸಾಹೇಬ್ ಫಾಲ್ಕೆಯ ಆ ದಿನಗಳು!
ದೇಶದಲ್ಲಿಯೇ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಗುರುವಾರ(ಏ.29) ರಾಜ್ಯದಲ್ಲಿ ದಾಖಲೆಯ 66,159 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 771 ಮಂದಿ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಬಳಿಕ ಟೋಪೆ ಈ ಭವಿಷ್ಯ ನುಡಿದಿರುವುದಾಗಿ ವರದಿ ಹೇಳಿದೆ.
ಮುಂಬಯಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಂಕುತಜ್ಞರ ಪ್ರಕಾರ, ಮಹಾರಾಷ್ಟ್ರ ಜುಲೈ ಅಥವಾ ಆಗಸ್ಟ್ ನಲ್ಲಿ ಮೂರನೇ ಅಲೆಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಅಗತ್ಯವಿರುವಷ್ಟು ಆಕ್ಸಿಜನ್, ಬೆಡ್ ಗಳ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮೇ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿಮೀರಬಹುದು. ಒಂದು ವೇಳೆ ಜುಲೈ ಅಥವಾ ಆಗಸ್ಟ್ ನಲ್ಲಿ ಮೂರನೇ ಅಲೆ ಹೊಡೆತ ಬಿದ್ದರೆ ಇದು ರಾಜ್ಯದ ಆಡಳಿತಕ್ಕೆ ಹೆಚ್ಚಿನ ಸವಾಲನ್ನು ತಂದೊಡ್ಡಲಿದೆ ಎಂದು ಟೋಪೆ ಕಳವಳ ವ್ಯಕ್ತಪಡಿಸಿದ್ದಾರೆ.