Advertisement

ಭುಗಿಲೆದ್ದ ಹೋರಾಟ: ಯುವಕ ಆತ್ಮಹತ್ಯೆ ಮಾಡಿದ್ದು ಗಲಭೆಗೆ ಕಾರಣ?

06:00 AM Jul 31, 2018 | Team Udayavani |

ಪುಣೆ/ಔರಂಗಾಬಾದ್‌: ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮರಾಠಾ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಸೋಮವಾರ ಮತ್ತೆ ತೀವ್ರಗೊಂಡಿದೆ. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಪ್ರತಿಭಟನಾಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಣೆಯಲ್ಲಿ ನಡೆದ ಹಿಂಸಾಚಾರದಲ್ಲಿ 40 ಸರಕಾರಿ ಬಸ್‌ಗಳು ಹಾಗೂ ಇತರೆ 40ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮರಾಠ ಕ್ರಾಂತಿ ಮೋರ್ಚಾ ಈ ಕೃತ್ಯ ನಡೆಸಿದೆ ಎಂದು ಪೊಲೀಸರು ಅನುಮಾನಿಸಿದ್ದಾರೆ.

Advertisement

ಪುಣೆ ಸಮೀಪ ಚಕನ್‌ ಎಂಬಲ್ಲಿ ಕಿಡಿಗೇಡಿಗಳು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲೆಸೆದು ಹಾನಿ ಮಾಡಿದ್ದಾರೆ. ಇದರ ಜತೆಗೆ ಪುಣೆ-ನಾಶಿಕ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಪುಣೆಯ ಗ್ರಾಮಾಂತರ ಪೊಲೀಸರು  ನಿಷೇಧಾಜ್ಞೆ ವಿಧಿಸಿದ್ದಾರೆ. ಇದೇ ವೇಳೆ, ಮೀಸಲಿಗೆ ಆಗ್ರಹಿಸಿ ಆ.9ರಂದು ಮೆಗಾ ರ್ಯಾಲಿ ಕೈಗೊಳ್ಳುವುದಾಗಿ ಮರಾಠಿ ಸಂಘಟನೆಗಳು ಘೋಷಿಸಿವೆ. 

ಸರಕಾರದ ವಿಳಂಬ ನೀತಿ: ಇದೇ ವೇಳೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ ಮೀಸಲು ವಿವಾದಕ್ಕೆ ಸಂಬಂಧಿಸಿದಂತೆ ದೇವೇಂದ್ರ ಫ‌ಡ್ನವಿಸ್‌ ನೇತೃತ್ವದ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದೆ. ಜತೆಗೆ, ಕೂಡಲೇ ಮೀಸಲಾತಿ ಕುರಿತು ನಿರ್ಧಾರ ಪ್ರಕಟಿಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಬೇಕು ಎಂದು ರಾಜ್ಯಪಾಲ ವಿದ್ಯಾಸಾಗರ ರಾವ್‌ಗೆ ಮನವಿ ಸಲ್ಲಿಸಿದೆ. ಕಾಂಗ್ರೆಸ್‌ ಮುಖ್ಯಸ್ಥ ಅಶೋಕ್‌ ಚವಾಣ್‌ ನೇತೃತ್ವದ ಕಾಂಗ್ರೆಸ್‌ ನಿಯೋಗ ಸೋಮವಾರ ರಾಜ್ಯಪಾಲರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದೆ. ಜತೆಗೆ, ಅಮಾಯಕ ಮರಾಠಾ ಪ್ರತಿಭಟನಾಕಾರರ ವಿರುದ್ಧದ ಕೇಸುಗಳನ್ನು ಕೂಡಲೇ ವಾಪಸ್‌ ಪಡೆಯುವಂತೆಯೂ ಆಗ್ರಹಿಸಿದೆ. ಇನ್ನೊಂದೆಡೆ, ಸರಕಾರವು ರಾಜ್ಯ ಹಿಂದುಳಿದ ಆಯೋಗದ ವರದಿಗೆ ಕಾಯದೇ, ಮೀಸಲು ಘೋಷಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.

ವ್ಯಕ್ತಿ ಆತ್ಮಹತ್ಯೆ
ಮರಾಠಾ ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಔರಂಗಾಬಾ ದ್‌ನಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೀಸಲು ಹೋರಾ ಟಕ್ಕೆ ಬೆಂಬಲ ವ್ಯಕ್ತಪಡಿಸಿ ತಾನು ಈ ಕೃತ್ಯವೆಸಗುತ್ತಿರುವುದಾಗಿ ಆತ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಅಪ್‌ಲೋಡ್‌ ಮಾಡಿದ್ದ. ಇದೇ ವೇಳೆ, ಮೀಸಲು ವಿಚಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ವರೆಗೆ ಮೃತದೇಹ ಪಡೆದುಕೊಳ್ಳುವುದಿಲ್ಲ ಎಂದು ಆತನ ಕುಟುಂಬ ಸದಸ್ಯರು ಪಟ್ಟುಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next