Advertisement

ಗಡಿ ಕಾಳಗ: ಬೆಳಗಾವಿ ಗಡಿಯನ್ನು ಭಾರತ-ಚೀನ ಗಡಿಗೆ ಹೋಲಿಕೆ

01:28 AM Dec 22, 2022 | Team Udayavani |

ಬೆಳಗಾವಿ/ಮುಂಬಯಿ/ಬೆಂಗಳೂರು: “ಮಹಾರಾಷ್ಟ್ರ ಅಪ್ರಬುದ್ಧತೆ ಪ್ರದರ್ಶಿಸುತ್ತಿದ್ದು, ಚೀನ ರೀತಿಯಲ್ಲಿ ಆಕ್ರಮಣ ಮಾಡುತ್ತೇವೆ ಎಂದಿದೆ. ಅವರಿಗೆ ಗೊತ್ತಿಲ್ಲ; ಈ ಕಡೆ ಭಾರತ ದೇಶವಿದೆ ಎಂಬುದು. ನಮ್ಮ ಸೈನಿಕರು ಯಾವ ರೀತಿ ಚೀನವನ್ನು ಹಿಮ್ಮೆಟ್ಟಿಸಿದ್ದಾರೋ, ಅದೇ ರೀತಿ ನಾವೂ (ಕನ್ನಡಿಗರು) ಮಾಡುತ್ತೇವೆ. ಮಹಾರಾಷ್ಟ್ರದ ನಾಯಕರ ಭಾಷೆ ಬಳಕೆಗೆ ಉತ್ತರ ಕೊಡಬೇಕಿದೆ. ನಾನೂ ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಗುರುವಾರ ವಿಧಾನಸಭೆಯಲ್ಲಿ ಇದಕ್ಕೆ ಸುದೀರ್ಘ‌ ಉತ್ತರ ನೀಡುತ್ತೇನೆ’ ಎಂದು ಮಹಾರಾಷ್ಟ್ರ ನಾಯಕರಿಗೆ ತಿರುಗೇಟು ನೀಡಿದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

Advertisement

ಶಿವಸೇನೆಯ ಉದ್ಧವ್‌ ಬಣದ ಸಂಜಯ್‌ ರಾವುತ್‌ ಚೀನದವರು, ಭಾರತಕ್ಕೆ ನುಗ್ಗಿ ಬಂದಂತೆ ನಾವು ಕರ್ನಾಟಕದೊಳಗೆ ನುಗ್ಗುತ್ತೇವೆ ಎನ್ನುವ ಮೂಲಕ ಉದ್ಧಟತನ ಮೆರೆದಿದ್ದಾರೆ ಎಂದು ಬೊಮ್ಮಾಯಿ ಕಿಡಿ ಕಾರಿದರು.

ಮಹಾರಾಷ್ಟ್ರದ ಶಿವಸೇನೆ ಹಾಗೂ ಎನ್‌ಸಿಪಿ ಶಾಸಕರು ಹದ್ದುಮೀರಿ ಅಸಂಬದ್ಧ ಹೇಳಿಕೆ ಕೊಡುವುದನ್ನು ನೋಡಿದರೆ ಅವರು ಮಾನಸಿಕ ಸಮತೋಲನ ಕಳೆದುಕೊಂಡಿರುವಂತಿದೆ. ಅನಗತ್ಯವಾಗಿ ರಾಜಕಾರಣ ಮಾಡಲು ಹೊರಟಿದ್ದಾರೆ. ಆದರೆ ಅದು ಅಸಾಧ್ಯ.  ಈ ಹಿಂದೆಯೂ ಸಹ ಶಿವಸೇನೆ ಹಾಗೂ ಎನ್‌ಸಿಪಿ ನಾಯಕರು ರಾಜಕೀಯ ಮಾಡಲು ಹೋಗಿ ವಿಫಲರಾಗಿದ್ದರು ಎಂದರು.

ರಾಜ್ಯದ ಕಾಂಗ್ರೆಸ್‌ ನಾಯಕರು ಅಲ್ಲಿನ ನಾಯಕರೊಂದಿಗೆ ಮಾತನಾಡಲಿ. ನಾವು ನಮ್ಮ ಪಕ್ಷದ ನಾಯಕರ ಜತೆ ಈಗಾಗಲೇ ಮಾತನಾಡಿದ್ದೇವೆ. ಇದು ಬೀದಿಯಲ್ಲಿ ಇತ್ಯರ್ಥವಾಗುವಂಥದ್ದಲ್ಲ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದವರೇ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಅವರಿಗೆ ಪ್ರಕರಣ ದುರ್ಬಲವಾಗಿದೆ ಎನ್ನುವುದು ಮನವರಿಕೆಯಾಗಿದೆ. ಹಾಗಾಗಿ ಈ ಸಂದರ್ಭ ಬಳಸಿಕೊಂಡು ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಈ ಪ್ರಯತ್ನ ಯಶಸ್ವಿಯಾಗದು ಎಂದರು ಬೊಮ್ಮಾಯಿ.

Advertisement

ಅವರಪ್ಪನ ಆಸ್ತಿಯಲ್ಲ
ಮಹಾರಾಷ್ಟ್ರದಿಂದ ಕೃಷ್ಣಾ ಮತ್ತು ಕೊಯ್ನಾ ನೀರನ್ನು ತಡೆ ಹಿಡಿಯುವುದು, ಡ್ಯಾಂ ಎತ್ತರ ಹೆಚ್ಚಿಸಲು ನೀರು ಅವರ ಅಪ್ಪನ ಆಸ್ತಿ ಅಲ್ಲ. ಅದನ್ನು ಮೊದಲು ಅವರು ತಿಳಿದುಕೊಳ್ಳಬೇಕು ಎಂದು ಬೃಹತ್‌ ನೀರಾವರಿ ಇಲಾಖೆ ಸಚಿವ ಗೋವಿಂದ ಕಾರಜೋಳ ಖಡಕ್‌ ಆಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕಕ್ಕೆ ನೀರು ಬಿಡುವುದಿಲ್ಲ, ಡ್ಯಾಂನ ಎತ್ತರ ಹೆಚ್ಚಳ ಮಾಡುತ್ತೇವೆ  ಎಂದಿದ್ದ ಮಹಾರಾಷ್ಟ್ರದ ಸಚಿವ ಶಂಭುರಾಜ್‌ ದೇಸಾಯಿ ಅವರಿಗೆ ತಿರುಗೇಟು ನೀಡಿರುವ ಅವರು, ನೀರು ತಡೆ ಹಿಡಿಯುವುದು ಮಹಾರಾಷ್ಟ್ರ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ನ್ಯಾಯಯುತವಾದ ನೀರಿನ ಪಾಲನ್ನು ನ್ಯಾಯಾಧಿಕರಣ ಹಂಚಿಕೆ ಮಾಡಿದೆ.ಡ್ಯಾಂ ಎತ್ತರಿಸಲು ಅವರ ತಾತನ ಮನೆ ಡ್ಯಾಂ ಅಲ್ಲ. ನ್ಯಾಯಯುತವಾಗಿ ನಮಗೆ ಸಿಗಬೇಕಾದ ನೀರು ನಿಲ್ಲಿಸಲು ಯಾರಿಗೂ ಅಧಿಕಾರ ಇಲ್ಲ ಎಂದರು.

ಇಂದು ಗಡಿ ನಿರ್ಣಯ
ಗಡಿ ವಿಷಯ ಸಂಬಂಧ ಮಹಾರಾಷ್ಟ್ರ ತಂಟೆಗೆ ಸದನದ ಮೂಲಕ ರಾಜ್ಯದ ಒಗ್ಗಟ್ಟಿನ ಸಂದೇಶ ರವಾನಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಗುರುವಾರ ಗಡಿ ವಿಷಯ ಸಂಬಂಧ ಚರ್ಚೆಗೆ ಉತ್ತರ ನೀಡುವ ಜತೆಗೆ ಪ್ರಬಲ ನಿರ್ಣಯ ಸಹ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗಡಿ ವಿಚಾರ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆಯಾಗಿ ಒಮ್ಮತದ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿತ್ತು.

ಚೀನದವರು, ಭಾರತಕ್ಕೆ ನುಗ್ಗಿದಂತೆಯೇ ನಾವೂ ಕರ್ನಾಟಕದೊಳಗೆ ನುಗ್ಗುತ್ತೇವೆ. ಇದಕ್ಕೆ ಯಾರ ಒಪ್ಪಿಗೆಯೂ ಬೇಕಿಲ್ಲ. ಕರ್ನಾಟಕದ ವಿರುದ್ಧ ಗಟ್ಟಿ ನಿಲುವು ತೆಗೆದುಕೊಳ್ಳಲು ಮಹಾರಾಷ್ಟ್ರದಲ್ಲಿ ಗಟ್ಟಿ ಸರಕಾರವಿಲ್ಲ.   – ಸಂಜಯ್‌ ರಾವುತ್‌,
-ಸಂಸದ (ಶಿವಸೇನೆ ಉದ್ಧವ್ ಬಣ)

ಮಹಾರಾಷ್ಟ್ರದ ಕೊಯ್ನಾ ಮತ್ತು ಕೃಷ್ಣಾ ನದಿಯ ನೀರನ್ನು ಮಾರ್ಚ್‌, ಎಪ್ರಿಲ್‌ನಲ್ಲಿ ಕರ್ನಾಟಕ ಅವಲಂಬಿಸಿರುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆಗಳನ್ನು ಮುಂದುವರಿಸಿದರೆ ನಾವು ನೀರನ್ನು ತಡೆ ಹಿಡಿಯಬೇಕಾದೀತು. ಜತೆಗೆ ಡ್ಯಾಂನ ಎತ್ತರ ಹೆಚ್ಚಿಸಬೇಕಾದೀತು.
-ಶಂಭುರಾಜ್‌ ದೇಸಾಯಿ,
ಸಚಿವರು, ಮಹಾರಾಷ್ಟ್ರ

 

Advertisement

Udayavani is now on Telegram. Click here to join our channel and stay updated with the latest news.

Next