Advertisement

ಸೊಲ್ಲಾಪುರ: ಮಹಾರಾಷ್ಟ್ರ ಕನ್ನಡ ಸಾಹಿತ್ಯ ಸಮ್ಮೇಳನ; ಅದ್ದೂರಿ ಚಾಲನೆ

02:56 PM Jul 09, 2017 | |

ಸೊಲ್ಲಾಪುರ: ಭಾಷೆ ನಮ್ಮ ಸಂಸ್ಕೃತಿ, ಕಲೆಯ ಪ್ರತೀಕವಾಗಿದ್ದು ಅದು ಬದುಕಿನ ಬೆಸುಗೆಗೆ ಮಾಧ್ಯಮವಾಗವಾಗಬೇಕು. ಕನ್ನಡಿಗರು ಎಲ್ಲೆ ಇರಲಿ ಅವರು ಕನ್ನಡಿಗರೇ ಎಂದು ಕರ್ನಾಟಕ ರಾಜ್ಯದ  ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್‌ ಅವರು ಅಭಿಪ್ರಾಯಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ವತಿಯಿಂದ ಇಲ್ಲಿಯ ಹುತಾತ್ಮ ಸ್ಮೃತಿ ಮಂದಿರದಲ್ಲಿ ಆಯೋಜಿಸದ ಎರಡು ದಿನಗಳ ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ-ಮರಾಠಿ ಭಾಷಿಕರಲ್ಲಿ ಅನೋನ್ಯವಾದ ಬಾಂಧವ್ಯ ಸೊಲ್ಲಾಪುರದಲ್ಲಿದೆ. ಕೃಷ್ಣಾ ಮತ್ತು ಭೀಮಾ ನದಿಗಳು ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕ ಸೇರುತ್ತವೆ. ಕರ್ನಾಟಕದವರಿಗೆ ಕುಡಿಯಲು ನೀರು ಕೊಡುವ ಮರಾಠಿಗರನ್ನು ಅಭಿನಂದಿಸಬೇಕು ಎಂದ ಅವರು, ಕರ್ನಾಟಕದಲ್ಲಿ ಸೊಲ್ಲಾಪುರ ಸಿದ್ಧರಾಮನ ಭಕ್ತರ ಸಂಖ್ಯ ಹೆಚ್ಚಾಗಿರುವದರಿಂದ ಸೊಲ್ಲಾಪುರದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಯಾತ್ರಿ ನಿವಾಸದ ನಿರ್ಮಾಣಕ್ಕೆ 2 ಕೋ. ರೂ. ನೀಡಲಾಗುವುದು. ಕನ್ನಡ  ಮಾಧ್ಯಮದಲ್ಲಿ ಕಲಿತ ಯಾವ ವಿದ್ಯಾರ್ಥಿಯೇ ಆಗಲಿ ಅವರನ್ನು ಕರ್ನಾಟಕದ ಸರಕಾರಿ ನೌಕರಿಗಳಲ್ಲಿ ಶೇ. 5 ರಷ್ಟು ಮಿಸಲಾತಿ ನೀಡುವ ನಿರ್ಣಯವನ್ನು  ಸರಕಾರ ಕೈಗೊಂಡಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಲನ ನಮಗೆಲ್ಲ ಹೆಮ್ಮೆ 
ಸ್ವಾಗತ ಸಮಿತಿಯ ಅಧ್ಯಕ್ಷರಾದ ಸೊಲ್ಲಾಪುರ ಉಸ್ತುವಾರಿ ಸಚಿವ ವಿಜಯ ದೇಶಮುಖ್‌ ಅವರು ಮಾತನಾಡಿ, ಸೊಲ್ಲಾಪುರ ಸಿದ್ಧರಾಮನ ಪುಣ್ಯ ಭೂಮಿ. ಇಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಲನ ನಡೆಯುತ್ತಿರುವದು ನಮಗೆಲ್ಲ ಹೆಮ್ಮೆ ತಂದಿದೆ. ಸಿದ್ಧರಾಮ, ಬಸವಣ್ಣ, ಪಂಢರಪುರದ ವಿಠuಲ ಕನ್ನಡಿಗರ ಆರಾಧ್ಯರು. ಬಸವಣ್ಣನವರ ಕರ್ಮ ಭೂಮಿಯಾದ ಮಂಗಳವೇಢೆಯಲ್ಲಿ 25 ಎಕರೆ ಜಾಗದಲ್ಲಿ ಬೃಹತ್‌ ಸ್ಮಾರಕ ನಿರ್ಮಾಣವಾಗುವ ಹಂತದಲ್ಲಿದ್ದು, ಕೆಲ ತಿಂಗಳಲ್ಲಿ ಅದಕ್ಕೆ ಚಾಲನೆ ದೊರಕಲಿದೆ ಎಂದು ನುಡಿದ ಅವರು, ಇಲ್ಲಿ ಕನ್ನಡ -ಮರಾಠಿಗರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಿದ್ಧರಾಮನ ಸೊಲ್ಲಾಪುರದಲ್ಲಿ ನಡೆಯುವ ಈ ಸಮ್ಮೇಳನ ಸಾಮರಸ್ಯದ ಸಮ್ಮೇಳನ. ರಜಾಕರ ಕಾಲದಲ್ಲಿ ಚನ್ನಬಸವ ಪಟ್ಟದ್ದೇವರಿಗೆ ನೆಲೆ ನೀಡಿದ್ದು ಸೊಲ್ಲಾಪುರ. ಬಸವಾದಿ ಶರಣರಲ್ಲಿ ಬಸವಣ್ಣನ ನಂತರ ಸಿದ್ಧರಾಮನದ್ದೆ ಮಹತ್ವದ ಪಾತ್ರ. ಸಿದ್ಧರಾಮನ ಎದೆಯೊಳಗೆ ಬಸವಣ್ಣ. ಬಸವಣ್ಣನವರ ಎದೆಯೊಳಗೆ ಸಿದ್ಧರಾಮ ಅಚ್ಚೋತ್ತಿದಂತೆ ನೆಲೆಸಿದ್ದಾನೆ.

Advertisement

 ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದವರಲ್ಲಿ ಇಲ್ಲಿಯ  ಡಾ| ಜಯ ದೇವಿತಾಯಿ ಲಿಗಾಡೆಯವರ ಪಾತ್ರವೂ ಹಿರಿದಾದದ್ದು. ಅವರು ತಮ್ಮ ಕೊನೆ ಕ್ಷಣಗಳನ್ನು ಬಸವಕಲ್ಯಾಣದಲ್ಲಿ ಕಳೆದು ಅಲ್ಲಿಯೇ ಲಿಂಗೈಕ್ಯರಾಗಿದ್ದಾರೆ. ಅಲ್ಲಿ ಅವರ ಸ್ಮಾರಕ ನಿರ್ಮಾಣ ಆಗಬೇಕಾಗಿದೆ.  ಅದಕ್ಕೆ ಎಂ. ಬಿ. ಪಾಟೀಲರು ಮುಂದಾಗಬೇಕು. ಉಸ್ತುವಾರಿ  ಸಚಿವ ವಿಜಯಕುಮಾರ ದೇಶಮುಖ್‌ ಅರು  ಸೊಲ್ಲಾಪುರ ವಿವಿಗೆ ಸಿದ್ಧರಾಮನ ಹೆಸರಿಡಲು ಸರಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.

ಕಸಾಪ ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರ ಮಾತನಾಡಿ, ಬಸವಣ್ಣನವರ ಕಾಯಕ ತತ್ವಗಳನ್ನು ಅನುಷ್ಠಾನಗೊಳಿಸಿದ ಸಿದ್ಧರಾಮನ ಪುಣ್ಯಭೂಮಿ ಸೊಲ್ಲಾಪುರದಲ್ಲಿ ಸಮ್ಮೇಳನ ನಡೆಯುತ್ತಿರುವದು ಇಲ್ಲಿಯ ಕನ್ನಡಿಗರಿಗೆ ಸಂತಸ ತಂದಿದೆ. ಸುಮಾರು 67 ವರ್ಷಗಳ ನಂತರ ಇಲ್ಲಿ ರಾಜ್ಯ ಮಟ್ಟದ ಸಮ್ಮೇಳನ ನಡೆಯುತ್ತಿರುವದು ಇದೇ ಮೊದಲು. ಈ ಸಮ್ಮೇಳನದ ಮೂಲಕ ಈ ಭಾಗದ ಕನ್ನಡಿಗರಿಗೆ ಕರ್ನಾಟಕ ಸರಕಾರ ಶೇ. 5 ರಷ್ಟು ನೌಕರಿಗಳಲ್ಲಿ ಮೀಸಲಾತಿ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಅಲ್ಲದೆ ಇಲ್ಲಿಯ ಎಚ್‌ಎಸ್‌ಸಿ ಕರ್ನಾಟಕದ ಪಿಯುಸಿಗೆ ಸಮಾನ ಎಂದು ಘೋಸಿದೆ. ಮುಂದಿನ ದಿನಗಳಲ್ಲಿ ಇಲ್ಲಿಯ ಕನ್ನಡಿಗರಿಗೆ ಅನುಕೂಲವಾಗಲೆಂದು ಪರಿಷತ್ತು ಹೆಚ್ಚಿನ ಕಾರ್ಯಕ್ಕೆ ಮುಂದಾಳತ್ವ ವಹಿಸಲಿದೆ ಎಂದರು.

ಹೊಟಗಿಯ ಮಲ್ಲಿಕಾರ್ಜುನ ಶ್ರಿಗಳು, ಸೊಲ್ಲಾಪುರ ಸಂಸದ ಶರದ ಬನ್ಸೋಡೆ, ಆಳಂದ ಶಾಸಕ ಬಿ. ಆರ್‌. ಪಾಟೀಲ್‌, ಸೊಲ್ಲಾಪುರ ಮಹಾಪೌರ ಶೋಭಾ ಬನಶೆಟ್ಟಿ, ಚಂದ್ರಕಾಂತ ರಮಣಶೆಟ್ಟಿ, ಕಸಾಪದ ಅಧ್ಯಕ್ಷರುಗಳಾದ ವಿಜಯಪುರದ ಮಲ್ಲಿಕಾರ್ಜುನ ಯಂಡಿಗೇರಿ, ಕಲುºರ್ಗಿ ವೀರಭದ್ರ ಸಿಂಪಿ, ಬೀದರ್‌ನ ಸುರೇಶ್‌ ಚನಶೆಟ್ಟಿ, ಬೆಳಗಾವಿಯ ಮಂಗಳಾ  ಮೇಟಗುಡ್ಡ, ಚಿತ್ರದುರ್ಗದ ದೊಡ್ಡಮಲ್ಲಯ್ಯ,  ಡಾ| ಬಸವರಾಜ ಬಲ್ಲೂರ, ಡಾ| ಗುರು ಲಿಂಗಪ್ಪ ಧಬಾಲೆ, ಶಿವಾನಂದ ಕಡಪಟ್ಟಿ, ಬೆಂಗಳೂರಿನ ಬಿ. ಎನ್‌. ಪರಡ್ಡಿ, ಕೆ. ಅವಿನಾಶ್‌, ಅಧ್ಯಕ್ಷ ಬಸವರಾಜ ಮಸೂತಿ, ಅಶೋಕ್‌ ಭಾಂಜೆ, ರಾಜ ಪಾಟೀಲ್‌, ಈರಪ್ಪ ಸಾಲಕ್ಕಿ, ಗೌರವ ಕಾರ್ಯದರ್ಶಿ ಡಾ| ಗುರುಸಿದ್ಧಯ್ಯ ಸ್ವಾಮಿ  ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರದಿಂದ ಬಂದ ಹಲವಾರು ಕನ್ನಡಿಗರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ  ಸಿದ್ಧರಾಮೇಶ್ವರ ಮಂದಿರದಲ್ಲಿ ಮಾಜಿ ನಗರ Óವಕ ಕೇದಾರ ಉಂಬರಜೆ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಸಮ್ಮೇಳನದ ಅಧ್ಯಕ್ಷ  ಡಾ| ಬಿ. ಬಿ. ಪೂಜಾರಿ, ಕರ್ನಾಟಕ ರಾಜ್ಯ ಅಧ್ಯಕ್ಷ ಡಾ| ಮನುಬಳಿಗಾರ, ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿಯವರನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಸಿದ್ದೇಶ್ವರ ಕನ್ನಡ ಶಾಲೆಯ ಮಕ್ಕಳು ಹಾಕಿದ ಶರಣರ ವೇಷ, ವಚನ ಸಾಹಿತ್ಯದ ಪಲ್ಲಕ್ಕಿ ಮೆರವಣಿಗೆ ಗಮನ ಸೆಳೆಯಿತು. ಬೆಳಗಾವಿ ಜಿಲ್ಲೆಯ ಮರಬದ ಖರಬರ ಕುಣಿತ, ಸೋರಬಾನ ಗ್ರಾಮದ ಜಗ್ಗಲಗಿ ಮೇಳ, ಮೈಂದರ್ಗಿಯ ಬೀರಲಿಂಗೇಶ್ವರ ಡೊಳ್ಳಿನ ಮೇಳ, ಮೈಲಾರಂಗನ ಕುಣಿತ, ನವಿಲು ಕುಣಿತ ಮೆರವಣಿಗೆಯ ಆಕರ್ಷಣೆಗಳಾಗಿದ್ದವು. ಮುಖ್ಯ ರಸ್ತೆಗಳಿಂದ ಸಾಗಿದ ಮೆರವಣಿಗೆ ಹುತಾತ್ಮ ಸ್ಮೃತಿ ಮಂದಿರವನ್ನು  ತಲುಪಿತು. ಡಾ| ಜಯದೇವಿ ತಾಯಿ ಲಿಗಾಡೆ ಮಹಾದ್ವಾರ, ವಚನಕಾರ ಸೊನ್ನಲಿಗೆಯ ಸಿದ್ಧರಾಮೇಶ್ವರ ಮಹಾವೇದಿಕೆಯು ಸಮ್ಮೇಳನಕ್ಕೆ ಮೆರುಗು ನೀಡಿತು. 

Advertisement

Udayavani is now on Telegram. Click here to join our channel and stay updated with the latest news.

Next