ಮುಂಬಯಿ : ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಆಗ್ರಹಿಸುತ್ತಿರುವ ಮರಾಠ ಸಮುದಾಯದವರ ಬೇಡಿಕೆಗೆ ತನ್ನ ಸಂಪೂರ್ಣ ಬೆಂಬಲಿವಿದೆ ಎಂದು ಇಂದು ಗುರುವಾರ ಘೋಷಿಸಿರುವ ಮಹಾರಾಷ್ಟ್ರ ಸರಕಾರ, ಮರಾಠ ಸಮುದಾದವರು ಕಾನೂನಿನ ಪ್ರಕಾರ ಮೀಸಲಾತಿ ಸೌಲಭ್ಯ ಪಡೆಯಲಿದ್ದಾರೆ ಎಂದು ಪ್ರಕಟಿಸಿದೆ.
ಆವಶ್ಯಕ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮರಾಠ ಸಮುದಾಯದವರು ಮೀಸಲಾತಿ ಸೌಲಭ್ಯ ಪಡೆಯುವರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.
ಮರಾಠ ಆಂದೋಲನದ ಉನ್ನತ ನಾಯಕರು, ರಾಜ್ಯದ ರಾಜಕೀಯ ನಾಯಕರು ಮತ್ತು ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ಮೀಸಲಾತಿ ಕುರಿತು ಸಮಾಲೋಚನ ಸಭೆ ನಡೆಸಿದ ಬಳಿಕ ಸಿಎಂ ಫಡ್ನವೀಸ್ ಈ ಘೋಷಣೆ ಮಾಡಿದರು.
ಮರಾಠ ಕಾರ್ಯಕರ್ತರು ನಿನ್ನೆ ಬುಧವಾರ ಮುಂಬಯಿಯಲ್ಲಿ ಭಾರೀ ಜೈಲ್ ಭರೋ ಆಂದೋಲನ ನಡೆಸಿದ ಒಂದು ದಿನದ ತರುವಾಯ ಮುಖ್ಯಮಂತ್ರಿ ಇಂದು ಈ ಹೇಳಿಕೆ ನೀಡಿದ್ದಾರೆ.
ನಿನ್ನೆ ಕನಿಷ್ಠ 34 ಮರಾಠ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ಅನಂತರ ಬಿಡುಗಡೆ ಮಾಡಿದ್ದರು. ಮರಾಠ ಕ್ರಾಂತಿ ಮೋರ್ಚಾ ಸಂಘಟನೆ ಜೈಲ್ ಭರೋ ಆಂದೋಲನದ ನೇತೃತ್ವ ವಹಿಸಿತ್ತು.
ಮಹಾರಾಷ್ಟ್ರದ 12 ಕೋಟಿ ಜನಸಂಖ್ಯೆಯಲ್ಲಿ ಮರಾಠ ಸಮುದಾಯದವರು ಶೇ.30ರಷ್ಟು ಇದ್ದಾರೆ. ಕಳೆದ ಹತ್ತು ದಿನಗಳಲ್ಲಿ ಮರಾಠ ಆಂದೋಲನ ಹಿಂಸಾತ್ಮಕ ತಿರುವು ಪಡೆದಿತ್ತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.50ರ ಮೀಸಲಾತಿಯನ್ನು ಮರಾಠ ಸಮುದಾಯ ಆಗ್ರಹಿಸುತ್ತಿದೆ.