ಮಂಡ್ಯ: ಕೋವಿಡ್ 19 ಸೋಂಕಿನಿಂದ ಸೃಷ್ಟಿಯಾಗಿರುವ ಸಾಮಾಜಿಕ ತುರ್ತು ಪರಿಸ್ಥಿತಿ ವೇಳೆ ಸರ್ಕಾರಿ ಆ್ಯಂಬುಲೆನ್ಸ್‌ನಲ್ಲಿ ಶವ ಕಳುಹಿಸಲು ಅವಕಾಶ ಮಾಡಿಕೊಟ್ಟು ಮಹಾರಾಷ್ಟ್ರ ಸರ್ಕಾರ ಅವಿವೇಕತನ ಮೆರೆದಿದೆ ಎಂದು ಶಾಸಕ ಪುಟ್ಟರಾಜು ಟೀಕಿಸಿದರು.
ಮುಂಬೈನಿಂದ ಸರ್ಕಾರಿ ಆ್ಯಂಬುಲೆನ್ಸ್ ನಲ್ಲಿ ವ್ಯಕ್ತಿಯ ಶವವನ್ನು ಕಳುಹಿಸಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದರ ಹಿಂದೆ ಯಾರಿದ್ದಾರೆ ಎಂಬುದು ಪತ್ತೆ ಹಚ್ಚ ಬೇಕು. ಶವ ಹೊತ್ತ ಆ್ಯಂಬುಲೆನ್ಸ್ 42 ಚೆಕ್‌ಪೋಸ್ಟ್‌ಗಳನ್ನು ದಾಟಿ ಬರಬೇಕಾದರೂ ಬಲವಾದ ಪ್ರಭಾವವಿರುವಂತೆ ಕಾಣುತ್ತಿದೆ. ಯಾರೇ ಆಗಿ ದ್ದರೂ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಒಬ್ಬ ನಾಪತ್ತೆ: ಮುಂಬೈನಿಂದ ಆ್ಯಂಬುಲೆನ್ಸ್ ನಲ್ಲಿ ನಾಲ್ವರು ಬಂದಿದ್ದು, ಅವರಲ್ಲಿ ಒಬ್ಬರು ಕೆ.ಆರ್.ಪೇಟೆಯಲ್ಲೇ ಇಳಿದುಕೊಂಡಿದ್ದಾರೆ. ಆದರೆ, ವ್ಯಕ್ತಿಯ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ. ಜಿಲ್ಲಾಡಳಿತ ಕೂಡಲೇ ಆತನನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದರು.
ಬಿ.ಕೊಡಗಹಳ್ಳಿ ಮೂಲದ ವ್ಯಕ್ತಿಯ ಶವ ಮುಂಬೈನಿಂದ ಆ್ಯಂಬುಲೆನ್ಸ್‌ನಲ್ಲಿ ಬರುತ್ತಿರುವ ವಿಷಯ ತಿಳಿದ ಕೂಡಲೇ ತಾಲೂಕು ಆಡಳಿತಕ್ಕೆ ಅದನ್ನು ಗಡಿಭಾಗದಲ್ಲೇ ತಡೆದು ಪರಿಶೀಲಿಸುವಂತೆ ಸೂಚಿಸಿದೆ. ಅದರಂತೆ ತಾಲೂಕು ಅಧಿಕಾರಿಗಳು ಆ್ಯಂಬುಲೆನ್ಸ್ ನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆನಂತರ ಅಲ್ಲಿ ಔಷಧ ಸಿಂಪಡಿಸಿ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಬಳಿಕ ಬಿ.ಕೊಡಗಹಳ್ಳಿ ಒಳಗೆ ಪ್ರವೇಶಿಸಲು ಅವಕಾಶ ನೀಡದೆ. ಊರಿನಿಂದ ಒಂದೂವರೆ ಕಿ.ಮೀ. ದೂರದಲ್ಲೇ ಶವಕ್ಕೆ ಅಂತ್ಯಕ್ರಿಯೆ ನಡೆಸಲಾಯಿತು. ಗ್ರಾಮದವರು ಯಾರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಎಚ್ಚರ ವಹಿಸಲಾಗಿತ್ತು. ಒಂದು ವೇಳೆ ನಾನು ಆ್ಯಂಬುಲೆನ್ಸ್ ನ್ನು ವಾಪಸ್ ಕಳುಹಿಸಿದ್ದರೆ ಎಲ್ಲರ ಪಾಲಿಗೆ ಖಳ ನಾಯಕನಾಗುತ್ತಿದ್ದೆ ಎಂದು ಹೇಳಿದರು.
ಆ್ಯಂಬುಲೆನ್ಸ್ ಹಾಸನ ಹಾಗೂ ಕೆ.ಆರ್. ಪೇಟೆಯ ಹಲವಾರು ಗ್ರಾಮಗಳಲ್ಲಿ ನಿಂತು ಮೃತ ವ್ಯಕ್ತಿಯ ನೆಂಟರು ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಿರುವುದಾಗಿ ಹೇಳಲಾಗುತ್ತಿದೆ. ಇದೂ ಆಘಾತಕಾರಿ ಸಂಗತಿ ಎಂದರು.
ಪ್ರಕರಣ ದಾಖಲಿಸಿ: ಮುಂಬೈನಲ್ಲಿ ಕಂಡುಬಂದಿರುವ ಕೋವಿಡ್ 19 ವೈರಸ್ ಲಕ್ಷಣ ಬೇರೆ ರೀತಿಯಲ್ಲಿಯೇ ಇದೆ. ಹಾಗಾಗಿ ಮುಂಬೈ ನಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಬೇಕು. ಕಳ್ಳ ಮಾರ್ಗಗಳಲ್ಲಿ ನುಸುಳಿ ಬಂದವರ ಮೇಲೆ ಮೊದಲು ಪ್ರಕರಣ ದಾಖಲಿಸಿ ನಂತರ ಹೋಂ ಕ್ವಾರಂಟೈನ್‌ಗೆ ಒಳಪಡಿಸುವಂತೆ ಒತ್ತಾಯಿಸಿದರು.
ಸರ್ಕಾರಿ ಆ್ಯಂಬುಲೆನ್ಸ್‌ನಲ್ಲಿ ಶವ ತಂದ ಪ್ರಕರಣದಲ್ಲಿ ಮುಖ್ಯವಾಗಿ ಮಹಾರಾಷ್ಟ್ರ ಸರ್ಕಾರದ ಕೈವಾಡವಿರುವಂತೆ ಕಾಣುತ್ತಿದೆ. ಭದ್ರತಾ ಲೋಪದ ವಿಷಯದಲ್ಲಿ ನಾನು ಜಿಲ್ಲಾಡಳಿತ ಒಂದನ್ನೇ ಹೊಣೆಗಾರರನ್ನಾಗಿ ಮಾಡುವುದಿಲ್ಲ. ಮಹಾರಾಷ್ಟ್ರದ ಹಲವಾರು ಜಿಲ್ಲೆಗಳು ಹಾಗೂ ರಾಜ್ಯದ ಅನೇಕ ಜಿಲ್ಲೆಗಳನ್ನು ದಾಟಿ ಆ್ಯಂಬುಲೆನ್ಸ್ ಬಂದಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.