Advertisement

Kannada ಫಲಕ ವಿರುದ್ಧ ಮೋದಿ, ಅಮಿತ್‌ ಶಾಗೆ ದೂರು ನೀಡಲು ಮಹಾರಾಷ್ಟ್ರ ನಿರ್ಧಾರ

10:59 PM Feb 21, 2024 | Team Udayavani |

ಬೆಳಗಾವಿ: ಬೆಳಗಾವಿಯ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ತೀರ್ಪು ಬರುವವರೆಗೂ ಯಾವುದೇ ಕಾರಣಕ್ಕೂ ಬೆಳಗಾವಿಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಕರ್ನಾಟಕ ಸರಕಾರದ ವಿರುದ್ಧ ದೂರು ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.

Advertisement

ಮುಂಬಯಿಯ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಮುಖಂಡರ ಜತೆಗೆ ಮಹಾರಾಷ್ಟ್ರದ ಸಮನ್ವಯ ಸಚಿವ ಶಂಭುರಾಜೆ ದೇಸಾಯಿ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಬೆಳಗಾವಿ ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರಕಾರ ಕನ್ನಡ ಭಾಷೆಯನ್ನು ಬಲವಂತವಾಗಿ ಹೇರುತ್ತಿದೆ. ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ಕನ್ನಡ ನಾಮಫಲಕ ಕಡ್ಡಾಯಗೊಳಿಸಬಾರದು. ಈ ವಿವಾದ ಇನ್ನೂ ಬಗೆಹರಿದಿಲ್ಲ ಎಂಬುದಾಗಿ ಕೇಂದ್ರ ಸರಕಾರವೇ ಹೇಳಿದೆ. ಹೀಗಿರುವಾಗ ಗಡಿ ಭಾಗದ ಮರಾಠಿ ಭಾಷಿಕ 865 ಹಳ್ಳಿಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮಾಡಬಾರದು ಎಂದು ನಿರ್ಣಯಿಸಲಾಯಿತು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಸಭೆ ನಡೆಸಿದ್ದಾರೆ. ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಎರಡೂ ರಾಜ್ಯಗಳ ತಲಾ ಮೂವರು ಸಚಿವರನ್ನು ನೇಮಿಸಬೇಕು. ಯಾವುದಾದರೂ ಸಮಸ್ಯೆಗಳು ಬಂದಾಗ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂಬ ಸಲಹೆ ನೀಡಿದ್ದಾರೆ. ಹೀಗಿರುವಾಗ ಕನ್ನಡ ಹೇರುವ ಕೆಲಸವನ್ನು ಕರ್ನಾಟಕ ಸರಕಾರ ಮಾಡಬಾರದು ಎಂದು ಸಮನ್ವಯ ಸಚಿವ ಶಂಭುರಾಜೆ ದೇಸಾಯಿ ಹೇಳಿದರು.ಎಂಇಎಸ್‌ ಮುಖಂಡರು ಉಪಸ್ಥಿತರಿದ್ದರು.

ಸಭೆಗೆ ಸಿಎಂ ಶಿಂಧೆ ಗೈರು:
ಎಂಇಎಸ್‌ಗೆ ಮುಖಭಂಗ
ಬೆಳಗಾವಿ ಗಡಿ ವಿವಾದ ಸಂಬಂಧ ಮುಂಬಯಿಯಲ್ಲಿ ನಡೆದ ಸಭೆಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ಆಗಮಿಸಲಿಲ್ಲ. ಅವರು ಅಲ್ಲೇ ಇದ್ದರೂ ಸಭೆಗೆ ಬರಲಿಲ್ಲ. ಅನಂತರ ಮಹಾರಾಷ್ಟ್ರದ ಸಮನ್ವಯ ಸಚಿವ ಶಂಭುರಾಜೆ ದೇಸಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ಅನಿವಾರ್ಯವಾಗಿ ಸಚಿವರೊಂದಿಗೆ ಸಭೆ ನಡೆಸಿ ಎಂಇಎಸ್‌ ಮುಖಂಡರು ಮರಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next