ಮುಂಬಯಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಡಿಸೆಂಬರ್ 4 ರಂದು ತೆರೆಬೀಳಲಿದ್ದು, ಬಿಜೆಪಿ ಶಾಸಕಾಂಗ ಪಕ್ಷವು ತನ್ನ ನೂತನ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಪಕ್ಷದ ಹಿರಿಯ ಕಾರ್ಯಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ವೀಕ್ಷಕರಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಹೆಸರಿಸಿತ್ತು.
ಎರಡು ಬಾರಿ ಮಾಜಿ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ಅವರು ಉನ್ನತ ಹುದ್ದೆಗೆ ಮುಂಚೂಣಿಯಲ್ಲಿರುವವರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದು, ಬುಧವಾರ ಬೆಳಗ್ಗೆ ವಿಧಾನ ಭವನದಲ್ಲಿ ಸಭೆ ನಡೆಯಲಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಂಗಾಮಿ ಸಿಎಂ ಏಕನಾಥ್ ಶಿಂಧೆ ಅವರು ಸತಾರಾ ಜಿಲ್ಲೆಯ ತಮ್ಮ ಸ್ವಗ್ರಾಮಕ್ಕೆ ತೆರಳುವ ಸಿಎಂ ಹುದ್ದೆಗೆ ಎರಡನೇ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನುವ ವರದಿಗಳಿವೆಯಾದರೂ ಚುನಾವಣ ಪ್ರಚಾರದ ನಂತರ ಸಣ್ಣ ಮಟ್ಟಿಗಿನ ಅನಾರೋಗ್ಯದಿಂದ ವಿಶ್ರಾಂತಿಯ ಅಗತ್ಯವಿದೆ ಎಂದು ಪಕ್ಷ ಸ್ಪಷ್ಟನೆ ನೀಡಿದೆ.
“ನಾನು ಪ್ರಧಾನಿ ಮೋದಿಗೆ ಕರೆ ಮಾಡಿ, ನಾನು ಯಾವ ನಿರ್ಧಾರಕ್ಕೂ ಅಡ್ಡಿಯಾಗುವುದಿಲ್ಲ.ಚುನಾವಣೆಯಲ್ಲಿ ಗೆದ್ದ ಮಹಾಯುತಿ ಮೈತ್ರಿ ಕೂಟವು ಏನು ನಿರ್ಧರಿಸುತ್ತದೆಯೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಶಿಂಧೆ ಹೇಳಿದ್ದಾರೆ.
ಕೇಳಿಬರುತ್ತಿದೆ ಮುರಳೀಧರ ಮೊಹೊಲ್ ಹೆಸರು
ಪುಣೆಯಿಂದ ಸಂಸದರಾಗಿ ಆಯ್ಕೆಯಾಗಿರುವ , ಸದ್ಯ ಕೇಂದ್ರ ರಾಜ್ಯ ಖಾತೆ ಸಚಿವರಾಗಿರುವ . ಆರ್ ಎಸ್ ಎಸ್ ನೊಂದಿಗೆ ಬಲವಾದ ನಂಟು ಹೊಂದಿರುವ 50 ರ ಹರೆಯದ ಮರಾಠ ಸಮುದಾಯದ ಬಿಜೆಪಿ ನಾಯಕ ಮುರಳೀಧರ ಮೊಹೊಲ್ ಅವರ ಹೆಸರು ಸಿಎಂ ಹುದ್ದೆಗೆ ಕೇಳಿಬರುತ್ತಿದೆ.
ಫಡ್ನವಿಸ್ ಗೆ ರಾಷ್ಟ್ರೀಯ ಅಧ್ಯಕ್ಷ ಹುದ್ದೆ?
ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿರುವ ದೇವೇಂದ್ರ ಫಡ್ನವಿಸ್ ಅವರಿಗೆ ಜಾತಿ ಲೆಕ್ಕಾಚಾರದಿಂದಾಗಿ ಸಿಎಂ ಹುದ್ದೆ ತಪ್ಪಿದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.