Advertisement

Maharashtra Poll; ”ತ್ಯಾಗ” ಮಾಡಲು ಸಿದ್ಧರಾಗಬೇಕು.. ಶಿಂಧೆಗೆ ಬಿಜೆಪಿ ಸ್ಪಷ್ಟ ಸಂದೇಶ!

04:24 PM Oct 16, 2024 | ವಿಷ್ಣುದಾಸ್ ಪಾಟೀಲ್ |

ಮಹಾರಾಷ್ಟ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ನಿರೀಕ್ಷೆ ಮಾಡಲಾಗದ ರಾಜಕೀಯ ಬೆಳವಣಿಗೆಗಳು ನಡೆದು ಭದ್ರ ನೆಲೆಕಂಡುಕೊಂಡಿದ್ದ ಪಕ್ಷಗಳು ಛಿದ್ರಗೊಂಡು ಸದ್ಯ ಮತ್ತೆ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ಬಾರಿಯ ರಾಜಕೀಯ ಕದನ ಭಾರೀ ಕುತೂಹಲಕಾರಿಯಾಗಿದ್ದು ಬಂಡಾಯದ ಭೀತಿ ಎಲ್ಲ ಪಕ್ಷಗಳಲ್ಲೂ ಮನೆ ಮಾಡಿದೆ. ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಬಂಡಾಯ ಎದುರಿಸುವ ಎಲ್ಲ ಲಕ್ಷಣಗಳು ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕಂಡು ಬಂದಿದೆ.

Advertisement

ನಾಯಕತ್ವ ತನ್ನದಾಗಿಸಿಕೊಳ್ಳಬೇಕಾದ ಸ್ಥಿತಿ
ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ನಾಯಕತ್ವ ತನ್ನ ಕೈಗೆ ತೆಗೆದುಕೊಳ್ಳಲೇ ಬೇಕಾದ ಅನಿವಾರ್ಯ ಸ್ಥಿತಿ  ಎದುರಾಗಿದೆ. ಇದಕ್ಕೆ ಸ್ಪಷ್ಟ ಸಾಕ್ಷಿ ಎಂಬಂತೆ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರು ಚುನಾವಣ ದಿನಾಂಕ ಘೋಷಣೆಯಾದ ಮರುದಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮೈತ್ರಿಯನ್ನು ಅಖಂಡವಾಗಿಡಲು ಬಿಜೆಪಿ ಮಾಡಿದಂತೆ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ವಿಷಯದಲ್ಲಿ “ತ್ಯಾಗ” ಮಾಡಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ. ತ್ಯಾಗ ಎಂಬ ಅರ್ಥ ಮಹತ್ವ ಪಡೆದುಕೊಂಡಿದ್ದು ಅದು ಸೀಟುಗಳು ಮಾತ್ರವಲ್ಲದೆ, ನಾಯಕತ್ವವೂ ಕೂಡಾ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

38 ಶಾಸಕರ ಬಲದೊಂದಿಗೆ ಬಂದಿದ್ದ ಶಿಂಧೆ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಬಿಜೆಪಿ ಕುಳ್ಳಿರಿಸಿತ್ತು. ಮಾಜಿ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಉಪಮುಖ್ಯಮಂತ್ರಿ ಮಾಡಿತ್ತು. ಇದಕ್ಕೆ 102 ಶಾಸಕರೂ ಬೆಂಬಲ ಸೂಚಿಸಿದ್ದರು. ಈ ಬಾರಿ ಅದೇ ಕಾರಣಕ್ಕಾಗಿ ಶಿಂಧೆ ಬಣ ಮತ್ತು ಡಿಸಿಎಂ ಅಜಿತ್ ಪವಾರ್ ಅವರ ಬಣ ತ್ಯಾಗಕ್ಕೆ ಸಿದ್ಧವಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಎಷ್ಟರ ಮಟ್ಟಿಗೆ ಮೈತ್ರಿಕೂಟದ ಯಶಸ್ಸಿಗೆ ಕಾರಣವಾಗುತ್ತದೆ ಎನ್ನುವುದು ಕಾದು ನೋಡಬೇಕಷ್ಟೆ

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವ ಸ್ಥಿತಿ ಎಲ್ಲ ಪಕ್ಷಗಳಲ್ಲಿಯೂ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗಲಿದ್ದಾರೆ, ಅದರಲ್ಲಿಯೂ ಯಾವ ಪಕ್ಷದವರಾಗುತ್ತಾರೆ ಎನ್ನುವುದು ಗೊಂದಲಕಾರಿಯಾಗಿಯೇ ಉಳಿದಿದೆ.

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲೇ ಒಂದಾಗಿದ್ದ ಶಿವಸೇನೆಯೊಂದಿಗೆ ಸೀಟು ಹಂಚಿಕೆ ವಿಚಾರದಲ್ಲಿ ಗೊಂದಲ ಮಾಡಿಕೊಂಡಿದ್ದ ಬಿಜೆಪಿ ಕೊನೆಗೂ ದೊಡ್ಡ ಪಕ್ಷವಾಗಿ ಹೆಚ್ಚಿನ ಸ್ಥಾನಗಳನ್ನೂ ಗೆಲ್ಲಲು ಯಶಸ್ವಿಯಾಗಿತ್ತು. ಈ ಬಾರಿಯೂ ಹಲವು ರಣತಂತ್ರಗಳನ್ನೂ ಮಾಡಿಕೊಳ್ಳುತ್ತಿದೆ. ಕಾರ್ಯಕರ್ತರಲ್ಲಿ ನಾಯಕತ್ವದ ವಿಚಾರದಲ್ಲಿ ಗೊಂದಲ ಇನ್ನೂ ಉಳಿದುಕೊಂಡಿದ್ದು, ಈ ಬಾರಿ ಬಿಜೆಪಿಯ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕು ಎನ್ನುವ ಅಭಿಪ್ರಾಯ ಹೆಚ್ಚಿನ ನಾಯಕರದ್ದಾಗಿದೆ. ಏಕಾಏಕಿ ಆ ಘೋಷಣೆ ಮಾಡುವ ಸಾಹಸಕ್ಕೆ ಕೈ ಹಾಕುವ ನಿರ್ಧಾರಕ್ಕೆ ಬಿಜೆಪಿ ಮುಂದಾಗುವ ಸಾಧ್ಯತೆಗಳೂ ಕಡಿಮೆ. ಹಾಗೇನಾದರೂ ಮಾಡಿದರೆ ಮತ ವಿಭಜನೆಗೆ, ಮೈತ್ರಿಕೂಟದಲ್ಲಿ ಬಿರುಕು ಮೂಡುವ ಸಾಧ್ಯತೆಗಳೂ ಇವೆ.

ಬಿಜೆಪಿ-ಶಿವಸೇನೆ(ಏಕನಾಥ್ ಶಿಂಧೆ ಬಣ) ಮಾತ್ರವಲ್ಲದೆ ಎನ್ ಸಿಪಿ (ಅಜಿತ್ ಪವಾರ್ ಬಣ) ಕಾರ್ಯಕರ್ತರನ್ನೂ ಜತೆಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದೆ ವಿಚಾರ ಲೋಕಸಭಾ ಚುನಾವಣೆಯಲ್ಲಿ ಹೊಡೆತ ನೀಡಿತ್ತು. ಅಜಿತ್ ಪವಾರ್ ಬೆಂಬಲಿಗರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಮತ್ತು ಶಿವಸೈನಿಕರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವುದೂ ಸಮಸ್ಯೆಯಾಗಿ ಪರಿಣಮಿಸಿದೆ. RPI(A) ನಾಯಕ ಮತ್ತು ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಕೂಡ ಮಾಹಾಯುತಿ ಮೈತ್ರಿಕೂಟಕ್ಕೆ ದಲಿತ ಮತಗಳನ್ನು ಸೆಳೆಯಲು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಕಾಂಗ್ರೆಸ್ ಕೂಡ ಪ್ರಯೋಗಕ್ಕೆ ಮುಂದು
ಮಹಾ ವಿಕಾಸ್ ಅಘಾಡಿ(Maha Vikas Aghadi) ಮೈತ್ರಿಕೂಟ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಕೂಡ ಬದಲಾವಣೆ ಗೆ ಮುಂದಾಗಿದ್ದು ಹೊಸ ಮುಖಗಳಿಗೆ ಟಿಕೆಟ್ ಕೊಟ್ಟು ಪ್ರಯೋಗ ಮಾಡಲು ಎಲ್ಲ ಸಿದ್ಧತೆಗಳನ್ನು ನಡೆಸಿದೆ. ಶಿವಸೇನೆ(ಉದ್ಧವ್ ಠಾಕ್ರೆ) ಬಣ ಅವರ ನಾಯಕತ್ವ, ಶರದ್ ಪವಾರ್ ಅವರ ಎನ್ ಸಿಪಿ ಜತೆಯಾಗಿ ಹೋರಾಟಕ್ಕೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿದೆ. ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಯಶಸ್ಸು ಉತ್ಸಾಹ ತುಂಬಿತ್ತು. ಹರಿಯಾಣದಲ್ಲಿ ಆದ ಅನಿರೀಕ್ಷಿತ ಸೋಲು ಚಿಂತೆಗೀಡು ಮಾಡುವಂತೆ ಮಾಡಿದೆ. ಹರಿಯಾಣದಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಗಿದ್ದು ಬಂಡಾಯ ಮತ್ತು ಪಕ್ಷೇತರರು ಹಲವು ಕ್ಷೇತ್ರಗಳಲ್ಲಿ ಮತಗಳನ್ನು ಕಸಿದು ಅಧಿಕೃತ ಅಭ್ಯರ್ಥಿಗಳು ಸೋಲಿಗೆ ಸಿಲುಕುವಂತೆ ಮಾಡಿದ್ದು. ಈ ಬಾರಿ ಅಳೆದು ತೂಗಿ ಲೆಕ್ಕಾಚಾರ ಮಾಡಿ ಪ್ರಯೋಗ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸದ್ಯದ ಲೆಕ್ಕಾಚಾರ ತಲೆಕೆಳಗಾಗುವ ಎಲ್ಲಾ ಸಾಧ್ಯತೆ
288 ಸದಸ್ಯ ಬಲದ ಸದನದಲ್ಲಿ ಬಿಜೆಪಿ ಸದ್ಯ ಹೆಚ್ಚಿನ ಶಾಸಕರ ಬಲ ಹೊಂದಿದ್ದು, ಶಿವಸೇನೆ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮಹಾಯುತಿ (ಎನ್ ಡಿಎ) ಸರಕಾರ ಮುನ್ನಡೆಸುತ್ತಿದೆ. ಬಿಜೆಪಿ 102 ಶಾಸಕರನ್ನು ಹೊಂದಿದ್ದು, ಶಿಂಧೆ ಸೇನೆ 38, ಅಜಿತ್ ಪವಾರ್ ಬಣದ ಎನ್ ಸಿಪಿ 40 ಶಾಸಕರ ಬಲ ಸರ್ಕಾರಕ್ಕಿದೆ. ಮೈತ್ರಿಕೂಟದ ಒಟ್ಟು 202 ಶಾಸಕರ ಭರ್ಜರಿ ಬಹುಮತದೊಂದಿಗೆ ಸರಕಾರ ಮುನ್ನಡೆಸುತ್ತಿದೆ. ವಿಪಕ್ಷ ಮಹಾ ವಿಕಾಸ್ ಅಘಾಡಿಯಲ್ಲಿ ಸದ್ಯ 71 ಶಾಸಕರ ಬಲವಿದೆ. ಕಾಂಗ್ರೆಸ್ 37, ಶಿವಸೇನೆ (ಉದ್ಧವ್ ಠಾಕ್ರೆ ಬಣ) 16, ಎನ್ ಸಿಪಿ (ಶರದ್ ಪವಾರ್) 12 ಶಾಸಕರನ್ನು ಹೊಂದಿದೆ. ಸದ್ಯ 15 ಸ್ಥಾನಗಳು ಖಾಲಿ ಇದ್ದು, ಇಬ್ಬರು ಓವೈಸಿ ಅವರ ಎಐಎಂಐಎಂ ಶಾಸಕರಿದ್ದಾರೆ. ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದ್ದು ಈಗಿರುವ ಲೆಕ್ಕಾಚಾರ ತಲೆಕೆಳಗಾಗುವ ಎಲ್ಲ ಸಾಧ್ಯತೆಗಳು ಸ್ಪಷ್ಟವಾಗಿದೆ.

ಸಿಂಧದುರ್ಗ ಜಿಲ್ಲೆಯಲ್ಲಿ ಶಿವಾಜಿ ಪ್ರತಿಮೆ ಕುಸಿದು ಬಿದ್ದ ವಿಚಾರ, ನಿರಂತರ ರೈತರ ಆತ್ಮಹತ್ಯೆ ಪ್ರಕರಣಗಳು ಸೇರಿ ಇತ್ತೀಚೆಗೆ ನಡೆದ ಎನ್ ಸಿಪಿ(ಅಜಿತ್ ಪವಾರ್) ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆ ಪ್ರಕರಣ ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗುವ ಸಾಧ್ಯತೆಗಳಿವೆ.

*ವಿಷ್ಣುದಾಸ್‌ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next