ಮುಂಬೈ: ಸುಮಾರು 224 ಕೋಟಿ ರೂ. ಆದಾಯವನ್ನು ಮುಚ್ಚಿಟ್ಟಿದ್ದ ಮಹಾರಾಷ್ಟ್ರದ ಪುಣೆ ಹಾಗೂ ಥಾಣೆಯಲ್ಲಿರುವ ಯೂನಿಕಾರ್ನ್ ಸ್ಟಾರ್ಟಪ್ ಒಂದರ ಮೇಲೆ ಭಾನುವಾರ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಹಲವಾರು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಕಂಪನಿಯ ಬಗ್ಗೆ ವಿವರಣೆಗಳನ್ನು ನೀಡಿದ ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ), ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಆನ್‌ಲೈನ್ ಮೂಲಕ ದೇಶದ ನಾನಾ ಭಾಗಗಳಿಗೆ ಮಾರಾಟ ಮಾಡುತ್ತಿದ್ದು, ಕಳೆದ ವರ್ಷ 6,000 ಕೋಟಿ ರೂ. ವಹಿವಾಟು ನಡೆಸಿದೆ.
ಆದಾಯವನ್ನು ಮುಚ್ಚಿಟ್ಟ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ದಾಳಿಯ ಸಂದರ್ಭದಲ್ಲಿ 1 ಕೋಟಿ ರೂ. ನಗದು, 22 ಲಕ್ಷದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಮಾ. 9ರಂದು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಐಟಿ ದಾಳಿಗಳನ್ನು ನಡೆಸಲಾಗಿತ್ತು.