Advertisement
ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ-ಶಿವಸೇನೆ ಕೇಸರಿ ಮೈತ್ರಿಕೂಟ ಬಹುಮತ ಪಡೆಯುವಲ್ಲಿ ಸಫಲವಾಗಿದ್ದರೂ ಇದು ಈ ಮೈತ್ರಿಕೂಟ, ನಿರ್ದಿಷ್ಟವಾಗಿ ಬಿಜೆಪಿ ಬಯಸಿದ ಫಲಿತಾಂಶವಲ್ಲ. ಶಿವಸೇನೆ ಜೊತೆಗೆ ಅನಿವಾರ್ಯ ಮೈತ್ರಿ ಮಾಡಿಕೊಂಡಿದ್ದರೂ ಏಕಾಂಗಿಯಾಗಿ ಬಹುಮತ ಪಡೆದುಕೊಳ್ಳುವುದು ಅಥವಾ ಬಹುಮತಕ್ಕೆ ಹತ್ತಿರವಾಗಿರುವ ಸ್ಥಾನಗಳನ್ನು ಪಡೆದುಕೊಳ್ಳುವುದು ಬಿಜೆಪಿಯ ಗುರಿಯಾಗಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಬಿಜೆಪಿ 2014ರಲ್ಲಿ ಗಳಿಸಿರುವುದಕ್ಕಿಂತಲೂ ಕಡಿಮೆ ಸ್ಥಾನವನ್ನು ಗಳಿಸಿಕೊಂಡಿದೆ. ಇದು ಬಿಜೆಪಿಗೆ ಆಗಿರುವ ಅನಿರೀಕ್ಷಿತ ಆಘಾತ. ಶಿವಸೇನೆ ಬಹುತೇಕ 2014ರ ಸಾಧನೆಯನ್ನು ಪುನರಾವರ್ತಿಸಿದೆ. ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟಕ್ಕೆ ಸುಮಾರು 15 ಸ್ಥಾನಗಳ ಲಾಭವಾಗಿದೆ. ಈ ಪೈಕಿ ದೊಡ್ಡ ಮಟ್ಟದ ಲಾಭವಾಗಿರುವುದು ಎನ್‌ಸಿಪಿಗೆ. ಮೈತ್ರಿಯಲ್ಲಿ ಕಿರಿಯ ಪಾಲುದಾರನಾಗಿದ್ದರೂ ಸ್ಥಾನಗಳಿಕೆಯಲ್ಲಿ ಕಾಂಗ್ರೆಸ್‌ಗಿಂತ ಎನ್‌ಸಿಪಿ ಮುಂದಿದೆ.
Related Articles
Advertisement
ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುಖ್ಯವಾಗಿ ನೆಚ್ಚಿಕೊಂಡದ್ದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರವನ್ನು. ಈ ದಿಟ್ಟ ನಿರ್ಧಾರ ಮತಗಳಾಗಿ ಬದಲಾಗಬಹುದು ಎಂಬ ಬಿಜೆಪಿಯ ನಿರೀಕ್ಷೆಯನ್ನು ಮತದಾರರು ಹುಸಿಗೊಳಿಸಿದ್ದಾರೆ. ರಾಷ್ಟ್ರಮಟ್ಟದ ಚುನಾವಣೆಯಲ್ಲೇ ರಾಷ್ಟ್ರೀಯ ವಿಚಾರಗಳು ಆದ್ಯತೆ ಪಡೆಯಬಹುದೇನೋ. ಆದರೆ ವಿಧಾನಸಭೆ ಅಥವಾ ಸ್ಥಳೀಯ ಚುನಾವಣೆಗೂ ರಾಷ್ಟ್ರೀಯತೆಯೇ ಮುಖ್ಯವಾಗಬೇಕೆಂದಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ. ಜೊತೆಗೆ ಬಿಜೆಪಿಯ ಅತಿಯಾದ ಆತ್ಮವಿಶ್ವಾಸವೂ ಅದಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ. ದೇವೇಂದ್ರ ಫಡ್ನವೀಸ್ ಯಶಸ್ವಿ ಮುಖ್ಯಮಂತ್ರಿಯೇ ಆಗಿದ್ದರೂ ಜನರು ನಿರೀಕ್ಷಿಸಿದ ಆಡಳಿತವನ್ನು ನೀಡಲು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ಮತದಾರರು ಸಾರಾಸಗಟು ಬಿಜೆಪಿಯನ್ನು ಬೆಂಬಲಿಸಿಲ್ಲ. ಹರ್ಯಾಣದಲ್ಲೂ ಆಡಳಿತ ವಿರೋಧಿ ಅಲೆ ಪಕ್ಷವನ್ನು ಕಾಡಿದೆ. ಜೊತೆಗೆ ಮನೋಹರಲಾಲ್ ಖಟ್ಟರ್ ಆಡಳಿತ ಜನರಿಗೆ ಸಂಪೂರ್ಣ ತೃಪ್ತಿಯನ್ನು ನೀಡಿಲ್ಲ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗುತ್ತದೆ.
ಜನರು ಸ್ಥಳೀಯ ವಿಚಾರಗಳಿಗೂ ಆದ್ಯತೆ ನೀಡುತ್ತಾರೆ, ಅಂತೆಯೇ ಜಾತಿ ಸಮೀಕರಣವೂ ಚುನಾವಣೆ ಸಂದರ್ಭದಲ್ಲಿ ಮುಖ್ಯವಾಗುತ್ತದೆ ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಪ್ರತಿ ಚುನಾವಣೆಯಲ್ಲೂ ಭಾವನಾತ್ಮಕ ಮತ್ತು ರಾಷ್ಟ್ರೀಯ ವಿಚಾರಗಳು ಮಾತ್ರ ಮತಗಳನ್ನು ತಂದುಕೊಡುವುದಿಲ್ಲ. ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವ ಅಗತ್ಯವಿದೆ ಎನ್ನುವುದು ಈಗಲಾದರೂ ಸರಕಾರ ಅರಿತುಕೊಳ್ಳಬೇಕು.
ಮಹಾರಾಷ್ಟ್ರ ಫಲಿತಾಂಶದಲ್ಲಿ ಇನ್ನೂ ಒಂದು ಗಮನಾರ್ಹ ಅಂಶವಿದೆ. ಅದೆಂದರೆ ಬರ ಮತ್ತು ಪ್ರವಾಹಕ್ಕೆ ತುತ್ತಾಗಿದ್ದ ಪ್ರದೇಶಗಳಲ್ಲಿ ಜನರು ಆಡಳಿತ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಅಂದರೆ ಈ ಜ್ವಲಂತ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಿದ ರೀತಿ ಏನೇನೂ ಸಾಲದು ಎನ್ನುವುದು ಇದರ ಅರ್ಥ. ಜನರು ಸಂಕಷ್ಟಗಳಲ್ಲಿ ನರಳುತ್ತಿರುವಾಗ ಆಳುವವರು ಸಂವೇದನಾರಹಿತರಂತೆ ವರ್ತಿಸಿದರೆ ತಿರಸ್ಕೃತರಾಗಬೇಕಾಗುತ್ತದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೂ ಅನ್ವಯಿಸುವ ಮಾತು. ರಾಜ್ಯ ಎರಡೆರಡು ಸಲ ಭೀಕರ ನೆರೆಗೆ ತುತ್ತಾಗಿರುವಾಗ ಸರಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವ ಹಿಸದಿದ್ದರೆ ಏನಾಗಬಹುದು ಎನ್ನುವುದನ್ನು ಮಹಾರಾಷ್ಟ್ರದ ಮತದಾರರು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಇದು ಆಳುವವರ ಕಣ್ತೆರೆಸುವ ಫಲಿತಾಂಶ.