ಬೆಂಗಳೂರು: ಕೃಷ್ಣಾ ಕೊಳ್ಳದಲ್ಲಿ ತೀವ್ರಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ನೆರವಿಗೆ ಮಹಾರಾಷ್ಟ್ರ ಸರ್ಕಾರ ಮುಂದೆ ಬಂದಿದ್ದು, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2.5 ಟಿಎಂಸಿ ನೀರು ಹರಿಸಲು ನಿರ್ಧರಿಸಿದೆ.
ಏ. 13ರಂದು ಮಹಾರಾಷ್ಟ್ರ ಸರ್ಕಾರ ಕೊಯ್ನಾದಿಂದ 2.365 ಟಿಎಂಸಿ ನೀರು ಬಿಡುಗಡೆ ಮಾಡಿದ್ದು, ಇದೀಗ ಮತ್ತೆ 2.5 ಟಿಎಂಸಿ ನೀರು ಬಂದರೆ ಕಳೆದ ಒಂದು ತಿಂಗಳಲ್ಲಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಒಟ್ಟು 4.865 ಟಿಎಂಸಿ ನೀರು ಬಂದಂತಾಗುತ್ತದೆ.
ಕೃಷ್ಣಾ ಕೊಳ್ಳದ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಕೊಯ್ನಾ ಜಲಾಶಯದಿಂದ 2.5 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಅವರ ಕೊರಿಕೆ ಹಿನ್ನೆಲೆಯಲ್ಲಿ ಮೀರು ಹರಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಒಪ್ಪಿಗೆ ನೀಡಿದ್ದಾರೆ. ಶೀಘ್ರವೇ ನೀರು ಕೃಷ್ಣ ನದಿಗೆ ಹರಿದುಬರಲಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಮಾಡಿಕೊಂಡಿದ್ದ ಮನವಿಗೆ ಪೂರಕವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು ನೀರು ಬಿಡುಗಡೆ ಮಾಡಲು ಒಪ್ಪಿದ್ದಾರೆ. ಇದರಿಂದ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗಲಿದ್ದು, ಆ ಭಾಗದ ಜನ ನೆಮ್ಮದಿಯಿಂದ ಇರುವಂತಾಗಿದೆ ಎಂದು ಸಚಿವರು ಹೇಳಿದ್ದಾರೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಏ. 13ರಂದು ಮಹಾರಾಷ್ಟ್ರ ಸರ್ಕಾರ 2.365 ಟಿಎಂಸಿ ನೀರು ಬಿಡುಗಡೆ ಮಾಡಿತ್ತು. ಇದಕ್ಕೆ ಕೃತಜ್ಞತೆ ಸಲ್ಲಿಸಿ ಏ. 18ರಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಾಗಲೇ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುಗಡೆ ಮಾಡಿರುವ 2.365 ಟಿಎಂಸಿ ನೀರಿನಿಂದ ಹಿಪ್ಪರಗಿ ಬ್ಯಾರೇಜ್‌ವರೆಗಿನ ಜನರಿಗೆ ಹೆಚ್ಚು ಅನುಕೂಲವಾಗಿದೆ.
ಬೆಳಗಾವಿ ಜಿಲ್ಲೆಯ ನೀರಿನ ಬೇಡಿಕೆ ಬಹುತೇಕ ಪೂರೈಕೆಯಾಗಲಿದೆ. ಆದರೆ, ಇನ್ನೂ ರಾಜ್ಯ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಈಗ ಹರಿಸಿರುವ ನೀರಿನ ಜತೆಗೆ ಹೆಚ್ಚುವರಿಯಾಗಿ 2 ಟಿಎಂಸಿ ನೀರನ್ನು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಬಿಟ್ಟರೆ ಆ ನೀರು ವಿಜಯಪುರ ಜಿಲ್ಲೆಯ ಕೊರ್ತಿ-ಕೊಲ್ಹಾರ ಬ್ಯಾರೇಜ್‌ವರೆಗೆ ತಲುಪುತ್ತದೆ. ಇದರಿಂದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯುತ್ತದೆ. ಆದ್ದರಿಂದ ಹೆಚ್ಚುವರಿ 2 ಟಿಎಂಸಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಮಧ್ಯೆ ಜಲ ಸಂಪನ್ಮೂಲ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿ, ಕೊಯ್ನಾ ಜಲಾಶಯದಿಂದ ರಾಜ್ಯಕ್ಕೆ ಇನ್ನಷ್ಟು ನೀರು ಹರಿಸುವಂತೆ ಕೋರಿದ್ದರು. ಅಲ್ಲದೆ, ಕೇಂದ್ರ ಸಚಿವ ಅನಂತಕುಮಾರ್ ಕೂಡ ಮಹಾರಾಷ್ಟ್ರ ಸರ್ಕಾರವನ್ನು ಈ ಕುರಿತು ಮನವಿ ಮಾಡಿದ್ದರು.