ಮುಂಬೈ: ರಾಜ್ಯದಲ್ಲಿ ಚಿರತೆಗಳ ಸಾವಿನ ಪ್ರಮಾಣ ಶೇ. 57ರಷ್ಟು ಏರಿಕೆಯಾಗಿದೆ. ಅಂದರೆ 2019ರ ನವೆಂಬರ್‌ನಲ್ಲಿ 110 ಚಿರತೆಗಳು ಅಸುನೀಗಿದ್ದರೆ, ಪ್ರಸಕ್ತ ವರ್ಷ ನವೆಂಬರ್ ಅಂತ್ಯದ ವರೆಗಿನ ಅವಧಿಯಲ್ಲಿ 172 ಚೀತಾಗಳು ಅಸುನೀಗಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವುಗಳ ಸಂರಕ್ಷಣೆಗಾಗಿ ಹೊಸ ಕಾರ್ಯ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ. “ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದಿಂದ ಈ ರೀತಿಯಾಗುತ್ತಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ವಿಭಾಗಗಳಿಗೂ ಅನ್ವಯವಾಗುವಂಥ ಯೋಜನೆ ರೂಪಿಸಬೇಕಾಗಿದೆ. ಹೀಗಾಗಿ, ಸಮಸ್ಯೆಯ ತಾಂತ್ರಿಕ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ’ ಎಂದು ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿತಿನ್ ಎಚ್.ಕಾಕೋಡ್ಕರ್ ಹೇಳಿದ್ದಾರೆ.
ಡಿ.4ರಂದು ನಡೆಯುವ ರಾಜ್ಯ ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಸಭೆಯಲ್ಲಿ ಈ ಅಂಶ ಚರ್ಚೆಗೆ ಬರಲಿದೆ. ಹುಲಿಗಳ ಸಂರಕ್ಷಣೆಗಾಗಿ ಇರುವ ಅಧ್ಯಯನ ಸಮಿತಿಯಂತೆಯೇ ಚಿರತೆಗಳ ಸಂರಕ್ಷಣೆಗಾಗಿ ರಚಿಸಲಿರುವ ಸಮಿತಿ ಇರಲಿದೆ.
ಇದನ್ನೂ ಓದಿ:ಮುಂದುವರಿದ ಬಿಕ್ಕಟ್ಟು; ಕೇಂದ್ರ v/s ರೈತರು-ನೂತನ ಕೃಷಿ ಕಾಯ್ದೆ ಹಿಂಪಡೆಯಲ್ಲ ಎಂದ ಕೇಂದ್ರ
ಪ್ರಸಕ್ತ ವರ್ಷ 172 ಚಿರತೆಗಳು ಜೀವ ಕಳೆದುಕೊಂಡಿವೆ. ಈ ಪೈಕಿ 86 ಪ್ರಕೃತಿ ಸಹಜ ಕಾರಣಗಳಿಂದ, 34 ರಸ್ತೆ ದುರಂತ ಮತ್ತು ರೈಲಿನಡಿಗೆ ಬಿದ್ದು, ನೀರಿನಲ್ಲಿ ಮುಳುಗಿ 25, 17 ಕಳ್ಳ ಬೇಟೆಗಾರರ ಕೈಗೆ ಸಿಕ್ಕು, 3 ಇತರ ಕಾರಣಗಳಿಗಾಗಿ ಜೀವ ಕಳೆದುಕೊಂಡಿವೆ. ಕಳವಳಕಾರಿ ಅಂಶವೆಂದರೆ ರಸ್ತೆ ದುರಂತ ಮತ್ತು ರೈಲಿನಡಿಗೆ ಚಿರತೆ ಸಾವನ್ನಪ್ಪುವ ಸಂಖ್ಯೆ ಈ ವರ್ಷ ದ್ವಿಗುಣಗೊಂಡಿದೆ ಎಂದು ರಾಜ್ಯ ಅರಣ್ಯ ಇಲಾಖೆ ಸಿದ್ಧಪಡಿಸಿದ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. 2019ರಲ್ಲಿ 17 ಪ್ರಾಣಿಗಳು ಅಸುನೀಗಿದ್ದರೆ, ಪ್ರಸಕ್ತ ವರ್ಷ ಆ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ನೀರಿನಿಂದ ಮುಳುಗಿ ಅಸುನೀಗಿದ್ದ ಪ್ರಾಣಿಗಳ ಸಂಖ್ಯೆ ಕಳೆದ ವರ್ಷ ಹತ್ತು ಆಗಿದ್ದರೆ, ಆ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ 17ಕ್ಕೆ ಏರಿಕೆಯಾಗಿದೆ.