Advertisement

ಮಹಾರಾಣಾ ಪ್ರತಾಪ್‌ ಯುವಕರಿಗೆ ಮಾದರಿ: ಶೆಟ್ಟರ

05:07 PM Jun 25, 2018 | |

ಹುಬ್ಬಳ್ಳಿ: ಧೈರ್ಯ ಹಾಗೂ ಶೂರತನಕ್ಕೆ ಹೆಸರಾಗಿದ್ದ ರಾಷ್ಟ್ರವೀರ ಮಹಾರಾಣಾ ಪ್ರತಾಪ ಸಿಂಗ್‌ ಇಂದಿನ ಯುವಕರಿಗೆ ಮಾದರಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಮಹಾರಾಣಾ ಪ್ರತಾಪ ಸಿಂಗ್‌ ಅವರ 478ನೇ ಜಯಂತಿ ಪ್ರಯುಕ್ತ ಇಲ್ಲಿನ ಕೋರ್ಟ್‌ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ರಾಜ್ಯವನ್ನು ಸುಭಿಕ್ಷೆಯಿಂದ ಮುನ್ನಡೆಸುವ ಕಾರಣಕ್ಕೆ ಬಲಿಷ್ಠ ರಾಜರನ್ನು ಹಿಮ್ಮೆಟ್ಟಿಸಿದ ಕೀರ್ತಿ ಇವರದ್ದು. ಇವರ ಶೂರತನ ಹಾಗೂ ಧೈರ್ಯ ಇಂದಿನ ಯುವ ಸಮೂಹಕ್ಕೆ ಮಾದರಿ ಎಂದರು.

Advertisement

ದೇಶದಲ್ಲಿ ಹೆಚ್ಚಾಗಿರುವ ಉಗ್ರರ ಹಾಗೂ ನಕ್ಸಲ್‌ ಚಟುವಟಿಕೆಯನ್ನು ಸೆದೆಬಡೆಯಲು ರಾಣಾ ಪ್ರತಾಪಸಿಂಗ್‌ ನಡೆಸಿದ ಹೋರಾಟಗಳು ಮರುಕಳಿಸಬೇಕಿದೆ. ಇಂದಿನ ಪ್ರಧಾನಿ ನರೇಂದ್ರ ಮೋದಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಉಗ್ರ ಹಾಗೂ ನಕ್ಸಲ್‌ ಚಟುವಟಿಕೆ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದಾರೆ. ದೇಶದಲ್ಲಿ ಬೇರು ಸಮೇತ ಸಮಾಜಘಾತುಕ ಶಕ್ತಿಗಳನ್ನು ಕಿತ್ತು ಹಾಕಬೇಕೆಂಬ ಪಣ ತೊಟ್ಟಿದ್ದಾರೆ ಎಂದರು.

ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ರಘುನಂದನ ಮಾತನಾಡಿ, ಸಮಾಜ ಸುಧಾರಕರು, ಮಹಾನ್‌ ವ್ಯಕ್ತಿಗಳ ಜಯಂತಿಯನ್ನು ಕೇವಲ ಒಂದು ಸಮಾಜ ಆಚರಿಸುವುದಕ್ಕಿಂತ ಎಲ್ಲಾ ಸಮುದಾಯಗಳು ಒಗ್ಗೂಡಿಕೊಂಡು ಆಚರಿಸಿದಾಗ ಮಾತ್ರ ನಿಜವಾದ ಅರ್ಥ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮನಸ್ಸು ಸಂಕುಚಿತಗೊಳ್ಳುತ್ತಿದ್ದು, ಮಹಾನ್‌ ವ್ಯಕ್ತಿಗಳನ್ನು ಒಂದು ಸಮಾಜಕ್ಕೆ ಸೀಮಿತ ಮಾಡಲಾಗುತ್ತಿದೆ. ಒಂದೊಂದು ಸಮಾಜಕ್ಕೊಬ್ಬ ಮಹಾನ್‌ ನಾಯಕರನ್ನಾಗಿ ಮಾಡಿಕೊಳ್ಳುವ ಸಂಕುಚಿತ ಭಾವನೆ ತೊಲಗಬೇಕಿದೆ. ಸಂಘಟನೆಯಲ್ಲಿ ಮಹಿಳೆಯರಿಗೆ ಪ್ರಾತಿನಿದ್ಯ ನೀಡುವ ಮೂಲಕ ಸಂಕುಚಿತ ಭಾವನೆಯಿಂದ ಹೊರಬರಬೇಕಿದೆ ಎಂದರು.

ಮಾಜಿ ಶಾಸಕ ಅಶೋಕ ಕಾಟವೆ, ಉದಯಸಿಂಗ್‌, ಗೋಪಾಲಸಿಂಗ್‌ ಹಜಾರೆ, ಪರ್ಬತಸಿಂಗ್‌ ಖಚಿ, ಸುಭಾಸಸಿಂಗ್‌ ಜಮಾದಾರ, ಶಂಕರಪ್ಪ ಬಿಜವಾಡ, ಡಿ.ಕೆ. ಚವ್ಹಾಣ, ಬಲವೀರ ಸಿಂಗ್‌ ಠಾಕೂರ, ಸಂತೋಷ ಸಿಂಗ್‌ ಠಾಕೂರ, ಡಾಕಪ್ಪ ಕಲಾಲ, ಅನಂತಸಿಂಗ್‌ ರಜಪೂತ, ಸುರ್ಜಿತಸಿಂಗ್‌ ಠಾಕೂರ ಇನ್ನಿತರರಿದ್ದರು. ವೇದಿಕೆ ಕಾರ್ಯಕ್ರಮ ನಂತರ ಮಹಾರಾಣಾ ಪ್ರತಾಪಸಿಂಗ್‌ರ ಭಾವಚಿತ್ರ ಮೆರವಣಿಗೆ ರಾಣಾ ಪ್ರತಾಪ ಸಿಂಗ್‌ ವೃತ್ತದಿಂದ ಆರಂಭಗೊಂಡು ದಾಜಿಬಾನ ಪೇಟೆ ಮೂಲಕ ಹಳೇ ಹುಬ್ಬಳಿಯ ಅರವಿಂದ ನಗರದವರೆಗೆ ನಡೆಯಿತು. ಸಮಾಜ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next