Advertisement
ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ವಾರಿಯರ್ 7 ವಿಕೆಟಿಗೆ 185 ರನ್ ಗಳಿಸಿದರೆ, ಬೆಂಗಳೂರು ಬ್ಲಾಸ್ಟರ್ 11.1 ಓವರ್‌ಗಳ ಆಟ ಮುಗಿಸಿದಾಗ ಮಳೆ ಸುರಿಯಿತು. ಮುಂದೆ ಆಡಲಾಗಲಿಲ್ಲ. ಆಗ ಮಾಯಾಂಕ್ ಅಗರ್ವಾಲ್ ಪಡೆ 5 ವಿಕೆಟಿಗೆ 81 ರನ್ ಮಾಡಿತ್ತು.ಮೈಸೂರು ವಾರಿಯರ್ ಪರ ಆರಂಭಕಾರ ಕಾರ್ತಿಕ್ ಸಿ.ಎ. 62 ರನ್ ಬಾರಿಸಿ ಮಿಂಚಿದರು (43 ಎಸೆತ, 7 ಬೌಂಡರಿ, 2 ಸಿಕ್ಸರ್). ಡೆತ್ ಓವರ್‌ಗಳಲ್ಲಿ ಮನೋಜ್ ಭಾಂಡಗೆ (12 ಎಸೆತಗಳಿಂದ 28 ರನ್) ಮತ್ತು ಜಗದೀಶ್ ಸುಚಿತ್ (14 ಎಸೆತಗಳಿಂದ ಅಜೇಯ 31 ರನ್) ಸಿಡಿದು ನಿಂತರು. ಇವರು 3.4 ಓವರ್‌ಗಳಿಂದ 54 ರನ್ ರಾಶಿ ಹಾಕಿದ್ದರಿಂದ ತಂಡದ ಮೊತ್ತ ಬೆಳೆಯಿತು. ಕರುಣ್ ನಾಯರ್ ನಾಯಕತ್ವದ ಮೈಸೂರು ತಂಡ 5 ಪಂದ್ಯಗಳಲ್ಲಿ ಸಾಧಿಸಿದ 3ನೇ ಜಯ ಇದಾಗಿದೆ.
ದ್ವಿತೀಯ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ 8 ವಿಕೆಟ್ ನಷ್ಟಕ್ಕೆ ಕೇವಲ 138 ರನ್ ಗಳಿಸಿತು. ಹುಬ್ಬಳ್ಳಿ 16.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 139 ರನ್ ಗಳಿಸಿತು. ಹುಬ್ಬಳ್ಳಿ ಪರ ಲವ್‌ನೀತ್ ಸಿಸೋಡಿಯ 69 ರನ್ ಬಾರಿಸಿದರು.