ಮಹಾಲಿಂಗಪುರ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ.
ಕಳೆದ 5-6 ದಿನಗಳಿಂದ ಘಟಪ್ರಭಾ ನದಿಗೆ ನೀರು ಹೆಚ್ಚಾಗಿ ಹರಿದು ಬರುತ್ತಿದೆ. ಜು. 20ರ ಶನಿವಾರದಿಂದ ನಂದಗಾಂವ ಸೇತುವೆ ಸಂಪೂರ್ಣ ಜಲಾವೃತವಾಗಿದೆ.
ಇಂದು (ಜು.23ರ ಮಂಗಳವಾರ) ಢವಳೇಶ್ವರ, ಮಿರ್ಜಿ ಸೇತುವೆ ಜಲಾವೃತ: ಘಟಪ್ರಭಾ ನದಿಗೆ ನೀರು ಹೆಚ್ಚಿದ ಕಾರಣ ಜು.23ರ ಮಂಗಳವಾರ ಮುಂಜಾನೆಯಿಂದ ಢವಳೇಶ್ವರ ಮತ್ತು ಮಿರ್ಜಿ ಸೇತುವೆಗಳು ಜಲಾವೃತವಾಗಿವೆ.
ಸೇತುಗಳ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸ್ ಸಿಬ್ಬಂದಿ ನೇಮಕಗೊಳಿಸಿ ಸೇತುವೆಗಳ ಮೇಲಿನ ಸಂಚಾರ ನಿಷೇಧಿಸಲಾಗಿದೆ.
ಜು.23ರ ಮಂಗಳವಾರ ಮುಂಜಾನೆ ಸಿಕ್ಕಿದ ಮಾಹಿತಿಯಂತೆ ಘಟಪ್ರಭಾ ನದಿಗೆ ದುಪದಾಳ ಜಲಾಶಯದಿಂದ 15,370, ಮಾರ್ಕಂಡೇಯ ಜಲಾಶಯದಿಂದ 3837, ಬಳ್ಳಾರಿ ನಾಲಾದಿಂದ 1911 ಕ್ಯೂಸೆಕ್ ಸೇರಿ ಸರಿ ಸುಮಾರು 21,118 ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ.
ಆದರೆ ಇದುವರೆಗೂ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಟ್ಟಿಲ್ಲ. 51 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯಯುಳ್ಳ ಹಿಡಕಲ್ ಜಲಾಶಯ ಜು.23 ರ ಮುಂಜಾನೆವರೆಗೆ 38.53 ಟಿಎಂಸಿ ನೀರು ಸಂಗ್ರಹವಾಗಿದೆ.
ಹಿಡಕಲ್ ಜಲಾಶಯಕ್ಕೆ ಸುಮಾರು 27, 754 ಕ್ಯೂಸೆಕ್ ನೀರಿನ ಒಳಹರಿವು ಇದೆ. ಪಶ್ಚಿಮ ಘಟ್ಟಗಳು ಮತ್ತು ಬೆಳಗಾವಿ ಭಾಗದಲ್ಲಿ ಮಳೆ ಹೀಗೆ ಮುಂದುವರೆದರೆ ಮುಂದಿನ 4-5 ದಿನಗಳಲ್ಲಿ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿ, ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಲು ಪ್ರಾರಂಭವಾಗುವದರಿಂದ ಘಟಪ್ರಭಾ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಲಿದೆ.