ಮಹಾಲಿಂಗಪುರ: ಕಾಶ್ಮೀರದ ಪೂಂಛ್ ಬಳಿ ನಡೆದ ಸೇನಾ ವಾಹನ ದುರಂತದಲ್ಲಿ ಮೃತಪಟ್ಟ ಮಹಾಲಿಂಗಪುರ ಪಟ್ಟಣದ ಮಹೇಶ ನಾಗಪ್ಪ ಮರೆಗೊಂಡ ಮನೆಗೆ ಬುಧವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೈನ್ಯಕ್ಕೆ ಸೇರಿ 6 ವರ್ಷಗಳಲ್ಲಿಯೇ ಸೇನಾ ವಾಹನ ದುರಂತದಲ್ಲಿ ಮೃತಪಟ್ಟಿದ್ದು ದುಃಖದ ಸಂಗತಿ. ಕೇವಲ 25 ವಯಸ್ಸಿನ ಯೋಧನನ್ನು ಕಳೆದುಕೊಂಡಿದ್ದು ವಿಷಾದನೀಯ. ಗುರುವಾರ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲು ಅಧಿ ಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದ ಅವರು, ಸರ್ಕಾರದಿಂದ ಯೋಧನ ಕುಟುಂಬಕ್ಕೆ ಸಿಗಬಹುದಾದ ಎಲ್ಲ ಸೌಲಭ್ಯ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಮನೆಯಲ್ಲಿ ಪದವಿ ಮುಗಿಸಿದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಬೇಕೆಂಬ ಬೇಡಿಕೆ ಕುಟುಂಬಸ್ಥರಿಂದ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನಿನ ಅಡಿಯಲ್ಲಿ ಅವಕಾಶವಿದ್ದರೆ ನೋಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಪೊಲೀಸ್ ವರಿಷ್ಠಾಧಿ ಕಾರಿ ಅಮರನಾಥ ರೆಡ್ಡಿ, ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಠಾಣಾ ಧಿಕಾರಿ ಕಿರಣ ಸತ್ತಿಗೇರಿ, ಪುರಸಭೆ ಮುಖ್ಯಾ ಧಿಕಾರಿ ಈರಣ್ಣ ದಡ್ಡಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸದಸ್ಯ ಶೇಖರ ಅಂಗಡಿ, ರನ್ನಬೆಳಗಲಿ ಪಪಂ ಸದಸ್ಯ ಪ್ರವೀಣ ಪಾಟೀಲ, ಕಾಂಗ್ರೆಸ್ ಮುಖಂಡರಾದ ಡಾ|ಎ.ಆರ್. ಬೆಳಗಲಿ, ಅಶೋಕ ಕಿವುಡಿ, ರಾಜುಗೌಡ, ಆನಂದ ಹಟ್ಟಿ, ನಜೀರ್ ಅತ್ತಾರ, ಸಯ್ಯದ ಯಾದವಾಡ ಸೇರಿದಂತೆ ಇತರರಿದ್ದರು.
ಶಾಸಕ ಸವದಿ ಸಂತಾಪ
ಮರೆಗೊಂಡ ಮನೆ. ಯೋಧ ಮಹೇಶ ನಾಗಪ್ಪ ಮರೆಗೊಂಡ ನಿಧನಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಸಂತಾಪ ಸೂಚಿಸಿ ಮಾತನಾಡಿ, ಚಿಕ್ಕವಯಸ್ಸಿನಲ್ಲಿಯೇ ದೇಶ ಸೇವೆಗೆ ತೆರಳಿ, ವಾಹನ ಅಪಘಾತದಲ್ಲಿ ಅಕಾಲಿಕ ಮೃತಪಟ್ಟಿದ್ದು ದುಃಖದ ಸಂಗತಿ. ಮಹೇಶ ಮರೆಗೊಂಡ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಗಾಂಧಿ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ
ಡಿ.26ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12ರೊಳಗೆ ಮೃತ ಯೋಧನ ಪಾರ್ಥಿವ ಶರೀರ ಬೆಳಗಾವಿಯಿಂದ ಪಟ್ಟಣಕ್ಕೆ ಬರಬಹುದು ಎನ್ನಲಾಗಿದೆ. ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಯೋಧನ ಪಾರ್ಥಿವ ಶರೀರದ ಅಂತಿಮ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ನಂತರ ಸರ್ಕಾರಿ ಗೌರವ ಸಲ್ಲಿಸಿ, ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಕೆಂಗೇರಿಮಡ್ಡಿವರೆಗೆ ಮೆರವಣಿಗೆ ನಡೆಸಿ, ಕೆಂಗೇರಿಮಡ್ಡಿಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವದು ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ತಿಳಿಸಿದ್ದಾರೆ.
ಎಲ್ಲೆಡೆ ಶ್ರದ್ಧಾಂಜಲಿ
2011ರಲ್ಲಿ ರನ್ನಬೆಳಗಲಿ ಯೋಧ ಸಿದ್ದಪ್ಪ ಕುಂಬಾರ ಹುತ್ಮಾತರಾಗಿದ್ದರು. 2023 ಡಿಸೆಂಬರ್‌ನಲ್ಲಿ ಚಿಮ್ಮಡ ಗ್ರಾಮದ ಯೋಧ ಬಸವರಾಜ ನಾವ್ಹಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೀಗ ಮಹೇಶ ಮರೆಗೊಂಡ ಮೃತಪಟ್ಟಿದ್ದಾರೆ. ಮೃತ ಯೋಧನಿಗೆ ಮಹಾಲಿಂಗಪುರ, ಸುತ್ತಲಿನ ಜನಪ್ರತಿನಿಧಿ ಗಳು, ವಿವಿಧ ಪಕ್ಷ, ಸಂಘ-ಸಂಸ್ಥೆ ಪದಾಧಿ ಕಾರಿಗಳು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಹೇಶ ಭಾವಚಿತ್ರ ಹಾಗೂ ವಿಡಿಯೋ ಹಂಚಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವಿಪ ಸದಸ್ಯೆ ಉಮಾಶ್ರೀ ಕಂಬನಿ
ಮೃತ ಯೋಧ ಮಹೇಶ ಮರೆಗೊಂಡ ಮನೆಗೆ ಬುಧವಾರ ರಾತ್ರಿ 8 ಗಂಟೆಗೆ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಯೋಧನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಸೈನಿಕನ ಬಾಳಲ್ಲಿ ಘೋರ ವಿಧಿಯಾಟ; ಕುಟುಂಬಕ್ಕೆ ಸಂಕಟ!
ಮಹಾಲಿಂಗಪುರ: ಕಾಶ್ಮೀರದ ಪೂಂಛ… ಪ್ರದೇಶದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸೈನಿಕರಿದ್ದ ಸೇನಾ ವಾಹನ ಕಂದಕಕ್ಕೆ ಉರುಳಿ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿಯ ಮಹೇಶ ನಾಗಪ್ಪ ಮರೆಗೊಂಡ (25) ಮೃತಪಟ್ಟಿದ್ದು ವಿಧಿಯ ಆಟಕ್ಕೆ ಬಾಳಿ ಬದುಕಿ ದೇಶಕ್ಕೆ ಸೇವೆ ಸಲ್ಲಿಸಬೇಕಿದ್ದ ಯೋಧ ಬಾರದ ಲೋಕ ಸೇರಿದ್ದಾನೆ.
ಕೇವಲ 25ನೇ ವಯಸ್ಸಿನಲ್ಲೇ ಬದುಕಿನ ಯಾತ್ರೆ ಮುಗಿಸಿದ ಯೋಧನ ಸಾವಿಗೆ ಪಟ್ಟಣದ ಜನ ಮಮ್ಮಲ ಮರುಗುತ್ತಿದ್ದರೆ, ಕುಟುಂಬಸ್ಥರು ಹಾಗೂ ಸಂಬಂಧಿಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
ಚಿಕ್ಕದಿಂನಲ್ಲೇ ತಂದೆ ಸಾವು: ಮೃತ ಯೋಧ ಮಹೇಶ 13 ವರ್ಷದವರಿದ್ದಾಗಲೇ ತಂದೆ ಕಳೆದುಕೊಂಡ ನತದೃಷ್ಟ. ತಂದೆ ಸಾವಿನ ನಂತರ ತಾಯಿ ಶಾರದಾ ಕೂಲಿ ಕೆಲಸ ಮಾಡಿ ಮಗನಿಗೆ ಪಿಯುಸಿವರೆಗೆ ಶಿಕ್ಷಣ ಕೊಡಿಸಿದ್ದಾರೆ. ಮಹೇಶನ ಶೈಕ್ಷಣಿಕ ಬದುಕಿಗೆ ತಾಯಿಯ ಸಹೋದರರಾದ ಮಾವಂದಿರು, ಅಜ್ಜಿ (ತಾಯಿಯ ತಾಯಿ) ಸಹಕಾರ ನೀಡಿದ್ದರು.
6 ವರ್ಷದ ಹಿಂದೆ ದೇಶ ಸೇವೆಗೆ: ತಾಯಿ ಮತ್ತು ಮಾವಂದಿರ ಆಶ್ರಯದಲ್ಲಿ ಬೆಳೆದ ಸೌಮ್ಯಸ್ವಭಾವದ ಮಹೇಶ ಚಿಕ್ಕಂದಿನಿಂದಲೇ ದೇಶಸೇವೆ ಮಾಡುವ ಸಂಕಲ್ಪದೊಂದಿಗೆ 19ನೇ ವಯಸ್ಸಿನಲ್ಲಿಯೇ ಬೆಳಗಾವಿ 11ನೇ ಮರಾಠಾ ಲೈಟ್ ಇನ್‌ಪೆಂಟರಿ ರೆಜಿಮೆಂಟ್ ನ ಸೈನಿಕನಾಗಿ ಆಯ್ಕೆಯಾಗಿ ಕಳೆದ 6 ವರ್ಷಗಳಿಂದ ದೇಶಸೇವೆ ಮಾಡುತ್ತಿದ್ದ.
3 ವರ್ಷದ ಹಿಂದೆ ವಿವಾಹ: ಸೈನಿಕನಾಗಿ ಮೂರು ವರ್ಷಗಳ ಸೇವೆ ಸಲ್ಲಿಸದ ನಂತರ 2022ರ ಜನೆವರಿ 18 ರಂದು ಲಕ್ಷ್ಮೀ ಅವರೊಂದಿಗೆ ವಿವಾಹವಾಗಿದ್ದರು. ನೂರಾರು ವರ್ಷ ಬಾಳಿ ಬದುಕುವ ಕನಸು ಕಂಡಿದ್ದರು. ಆದರೆ ಕ್ರೂರ ವಿಧಿ ಇವರ ಬದುಕಲ್ಲಿ ಆಟವಾಡಿತು. ಮದುವೆಯಾಗಿ ಕೇವಲ ಮೂರು ವರ್ಷಗಳಲ್ಲಿಯೇ ಪತಿ ಕಳೆದುಕೊಂಡ ಪತ್ನಿ ಗೋಳಾಡುವಂತಾಗಿದೆ.
ಸಾವಿನ ಮನೆ ಸೇರಿದ ಪತಿ
ಪತ್ನಿಯೊಂದಿಗೆ ಹಿಮಾಚಲ ಪ್ರದೇಶದಲ್ಲಿ ವಾಸವಾಗಿದ್ದ ಮಹೇಶ ತಮ್ಮ ರೆಜಿಮೆಂಟ್‌ಗೆ ಕಾಶ್ಮೀರಕ್ಕೆ ಕರ್ತವ್ಯ ನಿಯೋಜನೆ ಮಾಡಿದ ಹಿನ್ನೆಲೆಯಲ್ಲಿ ಪತ್ನಿ ಲಕ್ಷ್ಮೀಯನ್ನು ಮರಳಿ ಮಹಾಲಿಂಗಪುರಕ್ಕೆ ಕಳಿಸಿ, ಮಹೇಶ ಕಾಶ್ಮೀರಕ್ಕೆ ತರಳಿದ್ದರು. ಪತ್ನಿ ಲಕ್ಷ್ಮೀ ಡಿ.24ರಂದು ಬೆಳಗ್ಗೆ ಮಹಾಲಿಂಗಪುರದ ಮನೆಗೆ ಮರಳಿ ಬಂದಿದ್ದಾರೆ. ಬುಧವಾರ ಬೆಳಗ್ಗೆ ಪತಿ ಮೃತಪಟ್ಟ ಬರಸಿಡಿಲು ಬಡಿದಿದೆ. ಇತ್ತ ಪತ್ನಿ ಲಕ್ಷ್ಮೀ ಮನೆಗೆ ಬಂದರೆ, ಅತ್ತ ಯೋಧ ಮಹೇಶ ಸೇನಾ ವಾಹನ ಅಪಘಾತದಲ್ಲಿ ಮರಳಿ ಬಾರದ ಮನೆಗೆ ತೆರಳಿದ್ದಾರೆ.
-ಚಂದ್ರಶೇಖರ ಮೋರೆ