Advertisement

Mahalingpur ಭ್ರೂಣಹತ್ಯೆ ಪ್ರಕರಣ: ಚುರುಕುಗೊಂಡ ತನಿಖೆ

09:16 PM Jun 02, 2024 | Team Udayavani |

ಮಹಾಲಿಂಗಪುರ: ಮೇ-27 ರಂದು ಪಟ್ಟಣದ ಕವಿತಾ ಬಾಡನವರ ಮನೆಯಲ್ಲಿ ಗರ್ಭಪಾತ ಮಾಡಿಸಿಕೊಂಡು ಸಾವಿಗೀಡಾದ ಮಹಾರಾಷ್ಟ್ರ ಮೂಲದ ಮಹಿಳೆ ಸೋನಾಲಿ ಕದಂ ಕೇಸ್‌ನಲ್ಲಿ ಈಗಾಗಲೇ ಐದು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.ಭ್ರೂಣಹತ್ಯೆ ಪ್ರಕರಣದ ಪೊಲೀಸ್ ವಿಚಾರಣೆಗಾಗಿ ಆರೋಪಿಗಳಾದ ಮಹಾಲಿಂಗಪುರದ ಕವಿತಾ ಬಾಡನವರ ಮತ್ತು ಮೃತ ಸೋನಾಲಿ ಕದಂ ಸಹೋದರ ವಿಜಯ ಗೌಳಿ ಅವರನ್ನು ಶನಿವಾರ ನ್ಯಾಯಲಯವು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

Advertisement

ಕವಿತಾ ಮನೆಯಲ್ಲಿ ಪೊಲೀಸರಿಂದ ಪಂಚನಾಮೆ
ರವಿವಾರ ಆರೋಪಿ ಕವಿತಾ ಬಾಡನವರ ಅವರನ್ನು ಸ್ಥಳೀಯ ಠಾಣೆಗೆ ಕರೆತಂದು, ಮಹಾಲಿಂಗಪುರ ಠಾಣಾಧಿಕಾರಿ ಪ್ರವೀಣ ಬೀಳಗಿ, ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಅವರ ನೇತೃತ್ವದಲ್ಲಿ ಆರೋಪಿ ಕವಿತಾ ಬಾಡನವರ ಸಮೇತ ಪಟ್ಟಣದ ಜಯಲಕ್ಷ್ಮಿ ನಗರದಲ್ಲಿನ ಆಕೆಯ ಮನೆಗೆ ಕರೆದುಕೊಂಡು ಬಂದು, ಸಮುದಾಯ ಆರೋಗ್ಯ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಸಿ.ಎಂ.ವಜ್ಜರಮಟ್ಟಿ, ಸಾಕ್ಷಿದಾರರು, ಮಹಿಳಾ ಪೋಲಿಸ್ ಸಿಬ್ಬಂದಿ ರೇಣುಕಾ ಪಾಟೀಲ, ದೀಪಾ ಹುಲ್ಯಾಳ, ರೂಪಾ ರಾಚನ್ನವರ ಹಾಗೂ ಬನಹಟ್ಟಿ ಸಿಪಿಆಯ್ ಆಫೀಸಿನಿಂದ ಆಗಮಿಸಿದ್ದ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಭ್ರೂಣಹತ್ಯೆ(ಗರ್ಭಪಾತ) ಮಾಡುತ್ತಿದ್ದ ಸ್ಥಳದ ಪಂಚನಾಮೆ ನಡೆಸಲಾಯಿತು.

CPI ನೇತೃತ್ವದ ತಂಡ ಮಹಾರಾಷ್ಟ್ರಕ್ಕೆ
ಭ್ರೂಣಹತ್ಯೆ ಕೇಸಿನ ಇನ್ನಿಬ್ಬರು ಆರೋಪಿಗಳಾದ ಜೆಸಿಂಗ್‌ಪುರ ಸ್ಕ್ಯಾನಿಂಗ್ ಸೆಂಟರ್ ಸೋನೋಗ್ರಾಪರ್ ಮತ್ತು ಅಥಣಿಯ ಡಾ.ಕೋತ್ವಾಲೆ ಅವರ ಪತ್ತೆಗಾಗಿ ಮತ್ತು ಕೇಸಿನ ಹೆಚ್ಚಿನ ವಿಚಾರಣೆಗಾಗಿ ಬನಹಟ್ಟಿ CPI ಸಂಜೀವ ಬಳಗಾರ ನೇತೃತ್ವದ ತಂಡವು ಆರೋಪಿ ವಿಜಯ ಗೌಳಿ ಸಮೇತ ಮಹಾರಾಷ್ಟ್ರದ ಜೆಸಿಂಗಪುರದ ಶಾಹುನಗರಕ್ಕೆ ತೆರಳಿ, ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಪಂಚನಾಮೆ ಮಾಡಿಕೊಂಡು, ಸಂಜೆ ವಿಜಯ ಗೌಳಿಯನ್ನು ಮಹಾಲಿಂಗಪುರ ಠಾಣೆಗೆ ಕರೆತರಲಾಯಿತು.

ಡಿವೈಎಸ್‌ಪಿ ನೇತೃತ್ವದಲ್ಲಿ ವಿಚಾರಣೆ
ಸಂಜೆ ಜೈಸಿಂಗ್‌ಪುರದಿಂದ ವಿಜಯ ಗೌಳಿಯನ್ನು ಮರಳಿ ಕರೆತಂದ ನಂತರ ಜಮಖಂಡಿ ಡಿವೈಎಸ್‌ಪಿ ಈ.ಶಾಂತವೀರ ನೇತೃತ್ವದಲ್ಲಿ ಇಬ್ಬರು ಆರೋಪಿಗಳನ್ನು ತೀವೃ ವಿಚಾರಣೆಗೆ ಒಳಪಡಿಸಲಾಯಿತು. ಜೊತೆಗೆ ಪ್ರಕರಣದ ಇನ್ನಿಬ್ಬರು ಆರೋಪಿಗಳ ಬಂಧನಕ್ಕಾಗಿ ಪೊಲೀಸ್‌ರು ಬಲೆ ಬೀಸಿದ್ದಾರೆ.

ನಾಳೆ ಆಯೋಗದ ಸದಸ್ಯರ ಭೇಟಿ
ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾ.ಎಸ್.ಕೆ.ಒಂಟಗೋಡಿ ಅವರು ಜೂನ್ 3 ರಂದು ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯಿಂದ ಮಹಾಲಿಂಗಪುರಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next