Advertisement

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

11:07 AM Nov 10, 2024 | Team Udayavani |

ಮಹಾಲಿಂಗಪುರ: 2020 ನವೆಂಬರ್ 9 ರಂದು ನಡೆದಿದ್ದ ಪುರಸಭೆಯ ಅಧ್ಯಕ್ಷ ಚುನಾವಣೆಯ (ಸ್ನೇಹಲ್ ಶಿವಾನಂದ ಅಂಗಡಿ ಅಧ್ಯಕ್ಷರಾಗಿ ಆಯ್ಕೆ) ಸಮಯದಲ್ಲಿ ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಸದಸ್ಯರು ಮೂವರು ಮಹಿಳಾ ಸದಸ್ಯೆಯರ ಎಳೆದಾಟ ಮತ್ತು ಗಲಾಟೆ ಪ್ರಕರಣ ರಾಜ್ಯ, ದೇಶ, ವಿದೇಶದ ಗಮನ ಸೆಳೆದಿತ್ತು.

Advertisement

ಪ್ರಕರಣಕ್ಕೆ ಕುರಿತು ಚಾಂದನಿ ನಾಗೇಶ ನಾಯಕ ಅವರು ಮಹಾಲಿಂಗಪುರ ಠಾಣೆಯಲ್ಲಿ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ದ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಬನಹಟ್ಟಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿದೆ. ಇದಲ್ಲದೇ ಬಾಗಲಕೋಟೆ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾತಿ ನಿಂದನೆಯ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಸಿ.ಐ.ಡಿ ವಿಚಾರಣೆ :

ಪುರಸಭೆ ಗಲಾಟೆ ಪ್ರಕರಣ ಸಿ.ಐ.ಡಿ ಮೆಟ್ಟಿಲೇರಿದ್ದರಿಂದ 2020 ಜುಲೈ 2ರಂದು ಮಹಾಲಿಂಗಪುರಕ್ಕೆ ಆಗಮಿಸಿದ್ದ ಸಿಐಡಿ ವಿಚಾರಣೆಗಳ ವಿಭಾಗದ ಪೊಲೀಸ್ ಉಪಾಧೀಕ್ಷಕಿ ಸತ್ಯವತಿ ಎಸ್. ನೇತೃತ್ವದಲ್ಲಿ 5 ಜನ ಅಧಿಕಾರಿಗಳ ತಂಡ 6 ದಿನಗಳ ಕಾಲ ಪುರಸಭೆ ಸದಸ್ಯರು, ಶಾಸಕ ಸಿದ್ದು ಸವದಿ ಅವರನ್ನು ವಿಚಾರಣೆ ನಡೆಸಿತ್ತು. ಆ ಸಮಯದಲ್ಲಿ ಶಾಸಕರು ಸೇರಿದಂತೆ ಎಲ್ಲರೂ ಜಾಮೀನು ಪಡೆದಿದ್ದರು. ನಂತರ ಪ್ರಕರಣದ ವಿಚಾರಣೆ ನಡೆಸಿದ ಸತ್ಯವತಿ ಅವರ ವರ್ಗಾವಣೆ, ಅವರ ಜಾಗಕ್ಕೆ ಬಂದ ಬೇರೆ ಅಧಿಕಾರಿಗಳಿಂದ ಮತ್ತೇ ವಿಚಾರಣೆ ನಡೆದಿತ್ತು. ಹಿಂದಿನ ಬಿಜೆಪಿ ಸರ್ಕಾರದ ಅವಧಿ (2023 ಜನವರಿ)ಯಲ್ಲಿ ಸಿಐಡಿ ಅಧಿಕಾರಿಗಳು ಬಿ ರೀಪೋಟ್ ಹಾಕಿ ಪ್ರಕರಣ ವಜಾಗೊಳಿಸಿದ್ದರು.

ಬಿ ರಿಪೋರ್ಟ್ ಗೆ ಚಾಲೆಂಜ್ :

Advertisement

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳಿವೆ. ಸಿಐಡಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿದ್ದರೂ ಸಹ ಹಾಗೂ ದೂರದಾರು ನೀಡಿದ ಸಾಕ್ಷಾದಾರಗಳನ್ನು ಪರಿಗಣಿಸದೇ ತಮ್ಮ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದ್ದನ್ನು ಪ್ರಶ್ನಿಸಿ ಪುರಸಭೆ ಸದಸ್ಯೆ ಚಾಂದನಿ ನಾಗೇಶ ನಾಯಕ ಅವರು ಮತ್ತೇ ನ್ಯಾಯಾಲಯದ ಮೊರೆ ಹೋಗಿದ್ದರು.

ನಾಯಕ ಅವರು ಸಲ್ಲಿರುವ ಸಂಪೂರ್ಣ ಸಾಕ್ಷಾಧಾರಗಳನ್ನು ಪರಿಶೀಲಿಸಿ ಬನಹಟ್ಟಿ ಜೆಎಂಎಫ್‌ಸಿ ನ್ಯಾಯಾಲಯ ದೂರುದಾರರ ಸಾಕ್ಷಿಗಳನ್ನು ಎತ್ತಿ ಹಿಡಿದು, ಸಿಐಡಿ ಅಧಿಕಾರಿಗಳು ಹಾಕಿರುವ ಬಿ ರಿಪೋರ್ಟ್ ವಜಾಗೊಳಿಸಿ, ಸಿಆರ್ ಪಿಸಿ ಸೆಕ್ಷನ್ 153(3) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಿ ಪ್ರಕರಣದ ಹೆಚ್ಚಿನ ಮರು ತನಿಖೆ ನಡೆಸಿ, 10 ಜನವರಿ 2025 ರೊಳಗೆ ವರದಿಯನ್ನು ಸಮಗ್ರ ನೀಡಬೇಕೆಂದು ಸಂಬಂಧಿಸಿದ ಸಿಐಡಿ ತನಿಖಾಧಿಕಾರಿಗೆ ಬನಹಟ್ಟಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ಈಗ ಮತ್ತೆ ಸಿಐಡಿ ತನಿಖೆ? :

ನ್ಯಾಯಾಲಯದ ಆದೇಶದ ಹಿನ್ನಲೆ ಸಿಐಡಿ ಅಧಿಕಾರಿಗಳು ಶೀಘ್ರದಲ್ಲೇ ಮರು ತನಿಖೆ ಆರಂಭಿಸಿ, ಶಾಸಕ ಸವದಿ, ಪುರಸಭೆ ಸದಸ್ಯರು, ಬಿಜೆಪಿ ಮುಖಂಡರು ಸೇರಿದಂತೆ 31 ಜನರ ಮರು ವಿಚಾರಣೆ ನಡೆಸಲಿದ್ದಾರೆ. ಗಲಾಟೆಯಲ್ಲಿ ಆಧ್ಯಕ್ಷರಾಗಿ ಆಯ್ಕೆಯಾದ ಸ್ನೇಹಲ್ ಅಂಗಡಿ ಅವರ 16 ತಿಂಗಳ ಅವಧಿ ಮುಗಿಸಿಕೊಂಡು (2022ರ ಮಾರ್ಚ್) ಮನೆಗೆ ಹೋಗಿದ್ದಾರೆ. ನಂತರ ಇಲ್ಲಿಯವರೆಗೆ ಪುರಸಭೆಗೆ ಇಬ್ಬರು ಅಧ್ಯಕ್ಷರಾಗಿದ್ದಾರೆ. ಆದರೆ 2020ರ ಗಲಾಟೆ ಪ್ರಕರಣ ಮಾತ್ರ ಇನ್ನು ಅಂತ್ಯವಾಗಿಲ್ಲ.

ಸದಸ್ಯರ ಅಳಲು:

ಪುರಸಭೆಯ ಮಹಿಳಾ ಸದಸ್ಯೆಯರ ಎಳೆದಾಟ ಮತ್ತು ಗಲಾಟೆ ಪ್ರಕರಣ ನಡೆದು ಇದೇ ನವೆಂಬರ್ 9ಕ್ಕೆ ಭರ್ತಿ 4 ವರ್ಷಗಳಾದವು. ಇದರಲ್ಲಿ ಭಾಗವಹಿಸಿದರು ಕಳೆದ 4 ವರ್ಷಗಳಿಂದ ಧಾರವಾಡ, ಬಾಗಲಕೋಟೆ ಕೋರ್ಟ್ ಗಳಿಗೆ, ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ, ಬೆಂಗಳೂರು ಸಿಐಡಿ ಆಫೀಸ್‌ ಗೆ ಅಲೆದಾಡುವುದು ಮಾತ್ರ ತಪ್ಪಿಲ್ಲ. ಕೇಸ್ ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ, ಉದ್ಯೋಗ ಬಿಟ್ಟು, ಕೈಯಿಂದ ಖರ್ಚು ಮಾಡಿಕೊಂಡು ಅಲೆದಾಡುವುದು ತಪ್ಪಿಲ್ಲ ಎಂದು ಉಭಯ ಪಕ್ಷಗಳಲ್ಲಿನ ಕೆಲ ಮುಖಂಡರು, ಸದಸ್ಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ನ್ಯಾಯಾಲಯದ ಮೇಲೆ ನಂಬಿಕೆ ಇದೆ:

ಪುರಸಭೆಯ 2020ರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆ ಮತ್ತು ಸಾಕ್ಷ್ಯಾಧಾರಗಳು ನಮ್ಮ ಬಳಿ ಇವೆ. ತಡವಾದರೂ ಸಹ ನಮಗೆ ಖಂಡಿತಾ ನ್ಯಾಯ ಸಿಕ್ಕು ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸವಿದೆ. ನ್ಯಾಯಾಲಯದ ಮೇಲೆ ಅಪಾರ ನಂಬಿಕೆಯಿದೆ. ಶಾಸಕರು ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿಸಿದ್ದರು. ಆದರೆ ಇಂದು ನ್ಯಾಯಾಲಯ ನಮ್ಮ ಸಾಕ್ಷಿಗಳನ್ನು ಪರಿಶೀಲಿಸಿ, ಪ್ರಕರಣದ ಮರು ತನಿಖೆಗೆ ಆದೇಶ ನೀಡಿದೆ. ನ್ಯಾಯ ಸಿಗುವರೆಗೂ ನಮ್ಮ ಕಾನೂನು ಹೋರಾಟ ಮುಂದುವರೆಯುತ್ತದೆ. – ಚಾಂದನಿ ನಾಗೇಶ ನಾಯಕ‌, ಸದಸ್ಯರು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next