Advertisement
ಮೊದಲು ಮುಧೋಳ ತಾಲೂಕಿನಲ್ಲಿದ್ದ ಮಹಾಲಿಂಗಪುರ ಪಟ್ಟಣವನ್ನು 2018ರಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ನೂತನ ರಬಕವಿ-ಬನಹಟ್ಟಿ ತಾಲೂಕಿಗೆ ಸೇರ್ಪಡೆ ಮಾಡಿತ್ತು. ಇದರಿಂದ ಪಟ್ಟಣದ ಜನತೆಗೆ ಮುಧೋಳಕ್ಕಿಂತ ನೂತನ ರಬಕವಿ-ಬನಹಟ್ಟಿ ತಾಲೂಕು ಮತ್ತೇ 10 ಕೀ.ಮಿ ಸಮೀಪವಾಯಿತು.
Related Articles
Advertisement
ತೇರದಾಳ ಮತಕ್ಷೇತ್ರದ ಅಂದಿನ ಶಾಸಕಿ, ಸಚಿವೆ ಉಮಾಶ್ರೀ ಅವರು 9-2-2018ರಂದು ಅಧಿಕೃತವಾಗಿ ರಬಕವಿ-ಬನಹಟ್ಟಿ ತಾಲೂಕಾ ಪ್ರಾರಂಭೋತ್ಸವ ಸಮಾರಂಭವನ್ನು ಮಾಡಿದ್ದರು. ಆದರೆ ನೂತನ ತಾಲೂಕು ಘೋಷಣೆಯಾಗಿ 4 ವರ್ಷ 8 ತಿಂಗಳು ಕಳೆದರು ಸಹ, ಇದುವರೆಗೆ ಎಲ್ಲಾ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿಲ್ಲ. ಇದರಿಂದಾಗಿ ಸಾರ್ವಜನಿಕರು ಮನೆ-ಹೊಲ ಖರೀದಿಗಾಗಿ ಮುಧೋಳಕ್ಕೆ, ತಹಶೀಲ್ದಾರ ಕೆಲಸಗಳಿಗಾಗಿ ರಬಕವಿ-ಬನಹಟ್ಟಿಗೆ, ಮಾಶಾಸನ, ಜಾತಿ-ಆದಾಯ ಪತ್ರಗಳಿಗಾಗಿ ತೇರದಾಳಕ್ಕೆ ಸೇರಿದಂತೆ ಇಂದಿಗೂ ಮೂರು ಕಡೆಗೆ ಅಲೆದಾಡುವದು ತಪ್ಪಿಲ್ಲ.
2019ರಿಂದ ಮತ್ತೇ ಹೋರಾಟ ತೀವೃ:
ಮಾಜಿ ಸಿಎಂ ಕುಮಾರಸ್ವಾಮಿಯವರು 2018 ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಬಂದಾಗ ನಾನು ಸಿಎಂ ಆದರೆ ತೇರದಾಳ ತಾಲೂಕಾ ಕೇಂದ್ರ ಮಾಡುವುದಾಗಿ ಘೋಷಿಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ ಸಿಎಂ ಖುರ್ಚಿ ಅಲಂಕರಿಸಿದ ನಂತರ ಕುಮಾರಸ್ವಾಮಿಯವರು 2019-20ನೇ ಸಾಲಿನ ಬಜೆಟ್‍ನಲ್ಲಿ ತೇರದಾಳನ್ನು ನೂತನ ತಾಲೂಕು ಘೋಷಿಸಿದರು.
ತೇರದಾಳ ತಾಲೂಕು ಘೋಷಣೆ ನಂತರ 2019ರಿಂದ ಮಹಾಲಿಂಗಪುರ ತಾಲೂಕು ಹೋರಾಟ ತೀವ್ರ ಸ್ಪರೂಪ ಪಡೆದುಕೊಂಡು, 2019ರಿಂದ 2021ರವರೆಗೆ ಹಲವು ಬಾರಿ ಬೆಂಗಳೂರು ನಿಯೋಗ ತೆರಳಿ ಮುಖ್ಯಮಂತ್ರಿ, ಕಂದಾಯ ಮಂತ್ರಿಗಳಿಗೆ ಮನವಿ ಸಲ್ಲಿಸಿ, ತಾಲೂಕು ಕೇಂದ್ರಕ್ಕಾಗಿ ಒತ್ತಾಯಿಸಲಾಗಿತ್ತು.
ಅಂತಿಮವಾಗಿ ಅನಿರ್ಧಿಷ್ಟಾವಧಿ ಹೋರಾಟ :
ಮೂರು ತಾಲೂಕಿಗೆ ಅಲೆದಾಡುವ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿ ಒದ್ದಾಡುವಂತಿರುವಾಗಲೇ ಈ ಮೊದಲು ರಬಕವಿ-ಬನಹಟ್ಟಿ ತಾಲೂಕಿಗೆ ಸೇರ್ಪಡೆಯಾಗಿದ್ದ ಮಹಾಲಿಂಗಪುರ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳನ್ನು ನೂತನ ತೇರದಾಳ ತಾಲೂಕಿಗೆ ಸೇರ್ಪಡೆ ಮಾಡಿದ್ದ 2022ರ ಏಪ್ರೀಲ್‍ನಲ್ಲಿ ತಾಲೂಕು ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿ, ತೇರದಾಳ ತಾಲೂಕಿಗೆ ಸೇರಿಸಿದ್ದನ್ನು ವಿರೋಧಿಸಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿಯೇ ಉಳಿಸಿಕೊಂಡು ಮಹಾಲಿಂಗಪುರ ತಾಲೂಕಿಗಾಗಿ ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಲಾಯಿತು.
ಅಭೂತಪೂರ್ವ ಬೆಂಬಲ :
ಕಳೆದ ಏಪ್ರೀಲ್ 14ರಂದು ಪ್ರಾರಂಭವಾದ ತಾಲೂಕು ಹೋರಾಟಕ್ಕೆ ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ 14 ಗ್ರಾಮಗಳ ಜನತೆಯು ಪಕ್ಷಾತೀತ ಮತ್ತು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪಕ್ಷಗಳ ಹಾಲಿ, ಮಾಜಿ ಶಾಸಕರು, ಸಚಿವರು, ಪಕ್ಷದ ಮುಖಂಡರು ಹೋರಾಟ ವೇದಿಕೆಗೆ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಕಳೆದ ಸೆಪ್ಟೆಂಬರ್ 15ರಂದು ತಾಲೂಕು ಹಾರಾಟ ವೇದಿಕೆ ಹಾಗೂ ಸರ್ವಪಕ್ಷಗಳ ನಿಯೋಗದಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲೇ ಸಿಹಿಸುದ್ದಿ ನೀಡುವ ಭರವಸೆ ಕೊಟ್ಟಿರುವ ಕಾರಣ, ಮಹಾಲಿಂಗಪುರ ತಾಲೂಕು ಹೋರಾಟವು 200 ದಿನಗಳ ನಂತರವು ಮುಂದುವರೆಯಲಿದೆ.
ಜನಪ್ರತಿನಿಧಿಗಳ ಮೇಲೆ ಹೆಚ್ಚಿದ ಒತ್ತಡ :
ಈಗಾಗಲೇ ತಾಲೂಕು ಹೋರಾಟ 200 ದಿನಗಳನ್ನು ಪೂರೈಸಿದ್ದು ಮತ್ತು ಇನ್ನು 5-6 ತಿಂಗಳಲ್ಲೇ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿರುವ ಕಾರಣ, ಅಂತಿಮವಾಗಿ 2023ರ ಫೆಬ್ರುವರಿ ತಿಂಗಳಲ್ಲಿ ನಡೆಯಬಹುದಾದ ಚುನಾವನೆಯ ಬಜೆಟ್ ಅಧಿವೇಶನದಲ್ಲಿಯಾದರೂ, ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಮಹಾಲಿಂಗಪುರ ಪಟ್ಟಣವನ್ನು ಶತಾಯಗತಾಯ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕಾದ ಬಹುದೊಡ್ಡ ಜವಾಬ್ದಾರಿ, ಒತ್ತಡ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ, ಮುಧೋಳ ಶಾಸಕರು, ಸಚಿವರಾದ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ ಅವರ ಹೆಗಲ ಮೇಲಿದೆ.
-ಚಂದ್ರಶೇಖರ ಮೋರೆ