ಮಹಾಲಿಂಗಪುರ: ಸಕ್ಕರೆ ಕಾರ್ಖಾನೆಯಲ್ಲಿ ಲೆಕ್ಕಾಧಿಕಾರಿ ಹುದ್ದೆ ತೊರೆದು ನರ್ಸರಿಯಲ್ಲಿದ್ದ ಆಸಕ್ತಿಯನ್ನೇ ಉದ್ಯಮವನ್ನಾಗಿಸಿಕೊಂಡು ಯಶಸ್ಸು ಕಂಡಿದ್ದಾರೆ ನವೋದ್ಯಮಿ ರಾಜಾರಮೀಜ್ ಡಾಂಗೆ.
ಎಂಬಿಎ ಮುಗಿದ ಮೇಲೆ ಗೆಳೆಯರೊಟ್ಟಿಗೆ ಬೆಂಗಳೂರಿನಲ್ಲಿ ವಾಟರ್ ಹೀಟರ್ ಕಂಪನಿ ಆರಂಭಿಸಿದ ರಾಜಾರಮೀಜ್ ಮನೆಯ
ಪರಿಸ್ಥಿತಿಯಿಂದ ಮಹಾಲಿಂಗಪುರಕ್ಕೆ ಹಿಂತಿರುಗಿ ಸಮೀಪದ ಸಕ್ಕರೆ ಕಾರ್ಖಾನೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಸೇರಿದರು.ನಂತರ ಲೆಕ್ಕಾ ಧಿಕಾರಿ ಹುದ್ದೆ ಬಡ್ತಿ ಪಡೆದು ನೌಕರಿ ಮಾಡುತ್ತಲೇ ಆನ್ ಲೈನ್‌ನಲ್ಲಿ ಇಂಡಿಯನ್ ಹಾರಿಕಲ್ಚರ್ ಟೆಕ್ನಾಲಜಿ ವಿವಿಯಲ್ಲಿ ಗಾರ್ಡನಿಂಗ್ ಮತ್ತು ಲ್ಯಾಂಡ್‌ಸ್ಕೇಪ್ ಕೋರ್ಸ್ ಮುಗಿಸಿದರು.
ಟೆರೆಸ್ ಗಾರ್ಡನಿಂಗ್ ಪದ್ಧತಿ ಮೂಲಕ ಮನೆಯಲ್ಲಿ ಇರುವಷ್ಟೇ ಜಾಗದಲ್ಲಿ ಗಿಡಗಳನ್ನು ಬೆಳೆಸಲು ಮುಂದಾದ ರಾಜಾರಮೀಜ್ ಸ್ವಲ್ಪ ಪ್ರಮಾಣದಲ್ಲಿ ಯಶಸ್ಸೂ ಕಂಡರು. ತಮ್ಮಲ್ಲಿನ ಪ್ರತಿಭೆ, ಕ್ರಿಯಾಶೀಲತೆ ಹಾಳಾಗಬಾರದೆಂದು ನಿಶ್ಚಯಿಸಿ ನೌಕರಿ ತೊರೆದು “ಹ್ಯಾಪಿ ಹೋಮ್’ ಹೆಸರಿನಲ್ಲಿ ಸಣ್ಣ ಉದ್ಯಮ ಆರಂಭಿಸಿದರು. ಕೃಷಿ ಆಸಕ್ತರಿಗೆ ಅಗತ್ಯ ಮಾಹಿತಿ ನೀಡಿ ಆಕರ್ಷಿತರಾಗಿದ್ದಾರೆ. ಇಂದಿನ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ.
ಮನೆಯ ಒಳಾಂಗಣ, ಹೊರಾಂಗಣ ವಿನ್ಯಾಸಕ್ಕೆ ತರಿಸುವ ವಸ್ತುಗಳನ್ನು ಇರಿಸಲು ಜಾಗದ ಕೊರತೆಯಿಂದ ಮಹಾಲಿಂಗಪುರ-ಬೆಳಗಲಿ ರಸ್ತೆ ಯಲ್ಲಿ ಬಾಡಿಗೆ ರೂಪದಲ್ಲಿ 20 ಗುಂಟೆ ಜಮೀನಿನಲ್ಲಿ ನರ್ಸರಿ ಆರಂಭಿಸಲು ನಿರ್ಧರಿಸಿ ತಾರಸಿಯಲ್ಲಿದ್ದ ಸಸಿಗಳನ್ನು ನರ್ಸರಿಗೆ ವರ್ಗಾಯಿಸಿದರು. “ಹ್ಯಾಪಿ ಹೋಮ್’ ಹೆಸರಿನ ಈ ನರ್ಸರಿಯಲ್ಲಿ 130ಕ್ಕೂ ಹೆಚ್ಚು ಸಸ್ಯಗಳನ್ನು ಇಟ್ಟು ಮಾರುತ್ತಿದ್ದಾರೆ.
ಇವರ “ಹ್ಯಾಪಿ ಹೋಮ್’ನಲ್ಲಿ ಬೋನ್ಸಾಯ್ ಗಿಡಗಳು, ಹೂವಿನ ಗಿಡಗಳು, ಕ್ಯಾಕ್ಟಸ್, ಸಕ್ಯೂಲೆಂಟ್ ಗಿಡಗಳು, ಅಲಂಕಾರಿಕ ಸಸ್ಯಗಳು, ಹ್ಯಾಂಗಿಂಗ್ ಗಿಡಗಳು, ಹಣ್ಣಿನ ಗಿಡಗಳು, ಮಣ್ಣಿನ ಕಲಾಕೃತಿಗಳು, ಮನಿ ಪ್ಲಾಂಟ್, ಅಲೋವೆರಾ, ಆರ್ಕಿಡ್, ಜತ್ರೋಪಾ, ಔಷಧ ಸಸ್ಯಗಳು ಇವೆ. ಪತ್ನಿ ಕೃಷಿ ಅಧಿಕಾರಿ, ತಂದೆ ನಿವೃತ್ತ ಶಿಕ್ಷಕ, ತಾಯಿ ಅಧ್ಯಾಪಕಿಯಾಗಿದ್ದು, ಇವರಿಗೆ ಅಗತ್ಯ ಪ್ರೋತ್ಸಾಹ ನೀಡುತ್ತಿದ್ದಾರೆ.
ನರ್ಸರಿಯಲ್ಲಿ ಸಸ್ಯ ಅಭಿವೃದ್ಧಿ ಮಾಡುವ ಯೋಚನೆ ಇದೆ. ಇದರಿಂದ ಸ್ಥಳೀಯವಾಗಿ ಹಾಗೂ ಕಡಿಮೆ ದರದಲ್ಲಿ ಸಸ್ಯಗಳು ಲಭ್ಯವಾಗಲಿವೆ. ಜನರಿಗೆ ಸಸ್ಯಗಳ ಬಗ್ಗೆ ಆಸಕ್ತಿ ಇದೆ. ಆದರೆ ನಿರ್ವಹಣೆ ಮಾಡುವ ಮಾಹಿತಿ ಕೊರತೆ ಇದೆ. ಅದನ್ನು ನರ್ಸರಿಯಲ್ಲಿ ನೀಡಲಾಗುತ್ತಿದೆ.
*ರಾಜಾರಮೀಜ್ ಡಾಂಗೆ, ನವೋದ್ಯಮಿ.