ಮಹಾಲಿಂಗಪುರ: ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊರೊನಾ ವೈರಸ್ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.
ಗುರುವಾರ ಪುರಸಭೆಯ ಸಭಾಭವನದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಪಟ್ಟಣದ ಔಷಧ ವ್ಯಾಪಾರಸ್ಥರು, ಪೆಟ್ರೋಲ್ ಪಂಪ್ ಮಾಲೀಕರು, ಕಿರಾಣಿ ವರ್ತಕರು ಮತ್ತು ಫರ್ಟಿಲೈಸರ್ ವ್ಯಾಪಾರಸ್ಥರ ಸರಣಿ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಿಂಗಪುರದಲ್ಲಿ ಸಂಪೂರ್ಣ ಲಾಕ್‌ಡೌನ್ ಯಶಸ್ವಿಗಾಗಿ ಎಲ್ಲ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ನಿಗದಿತ ಸಮಯದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕು ಎಂದು ವಿನಂತಿಸಿದರು.
ವ್ಯಾಪಾರಸ್ಥರು ಮತ್ತು ಅಧಿಕಾರಿಗಳು ಚರ್ಚೆ ನಡೆಸಿ ಅಂತಿಮವಾಗಿ ಶುಕ್ರವಾರ ಏ. 10ರಿಂದ ಮಹಾಲಿಂಗಪುರದಲ್ಲಿ ತುರ್ತು ವಾಹನ ಸವಾರರ ಅನುಕೂಲಕ್ಕಾಗಿ ಬೆಳಗ್ಗೆ 6ರಿಂದ 12ರವರೆಗೆ ಪೆಟ್ರೋಲ್ ಪಂಪ್ ಆರಂಭ, ಸಾರ್ವಜನಿಕರಿಗೆ ದಿನಸಿ ಖರೀದಿಗಾಗಿ ಬೆಳಗ್ಗೆ 7ರಿಂದ 11ರವರೆಗೆ ಕಿರಾಣಿ ಅಂಗಡಿಗಳ ವಹಿವಾಟಿಗೆ ಅವಕಾಶ, ರೈತರ ಅನುಕೂಲಕ್ಕಾಗಿ ಬೆಳಗ್ಗೆ 8ರಿಂದ 11ರವರೆಗೆ ಫರ್ಟಿಲೈಜರ್ ಅಂಗಡಿಗಳಲ್ಲಿ ಬೀಜ ಮತ್ತು ರಸಗೊಬ್ಬರಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.
ರೋಗಿಗಳ ಅನುಕೂಲಕ್ಕಾಗಿ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಔಷಧ ಅಂಗಡಿಗಳ ಆರಂಭಕ್ಕೆ ಅವಕಾಶ ನೀಡಲಾಯಿತು. ಜತೆಗೆ ತರಕಾರಿ ವ್ಯಾಪಾರಿಗಳು ಸಹ ಬೆಳಗ್ಗೆ 7ರಿಂದ 11ರೊಳಗೆ ಮನೆ-ಮನೆಗೆ ತೆರಳಿ ವ್ಯಾಪಾರ ಮುಕ್ತಾಯಗೊಳಿಸಲು ಸೂಚಿಸಲಾಯಿತು. ರಬಕವಿ-ಬನಹಟ್ಟಿಯ ಗ್ರೇಡ್ -2 ತಹಶೀಲ್ದಾರ್ ಎಚ್.ಬಿ.ಕಾಂಬಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಮುಖ್ಯಾ ಧಿಕಾರಿ ಬಿ.ಆರ್. ಕಮತಗಿ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ರಾಜು ಹೂಗಾರ, ವ್ಯಾಪಾರಸ್ಥರಾದ ಬಸನಗೌಡ ಗೋಲಪ್ಪನವರ, ಶ್ರೀಪಾದ ಗುಂಡಾ, ಕಿರಾಣಿ ವರ್ತಕ ಸಂಘದ ಅಧ್ಯಕ್ಷ ಅಶೋಕ ಅಂಗಡಿ, ಬಸವರಾಜ ಕಲಾದಗಿ, ಚೇತನ ಬಂಡಿ, ವೆಂಕಣ್ಣ ಗುಂಡಾ, ರಾಹುಲ ಅವರಾದಿ, ಪ್ರಕಾಶ ಮಮದಾಪುರ, ಅಲಿ ಅವಟಿ ಇದ್ದರು.