Advertisement

ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಳಿ ರೋಗ: ಅಡಿ‌ಕೆ ಕೃಷಿಕರಿಗೆ ಆತಂಕ

09:54 AM Sep 14, 2019 | Team Udayavani |

ಕಾಸರಗೋಡು: ಬಿರುಸಿನ ಬಿರುಗಾಳಿ ಮಳೆಯಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಮಹಾಳಿರೋಗ ವ್ಯಾಪಕವಾಗಿ ಹರಡುತ್ತಿದೆ. ಇದು ಜಿಲ್ಲೆಯ ಅಡಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದ್ದು, ತೀವ್ರ ಸಂಕಷ್ಟಕ್ಕೆ ಗುರಿಪಡಿಸಿದೆ. ಮಹಾಳಿ ರೋಗದಿಂದಾಗಿ ಅಡಿಕೆ ಕೃಷಿಕರ ಆರ್ಥಿಕ ಬೆನ್ನೆಲುಬನ್ನು ಮುರಿಯುವಂತೆ ಮಾಡಿದೆ.

Advertisement

ಭಾರೀ ಮಳೆಯಿಂದಾಗಿ ಅಡಕೆ ತೋಟಗಳಲ್ಲಿ ನೀರು ತುಂಬಿಕೊಂಡು ತೇವಾಂಶ ಹೆಚ್ಚಾಗುತ್ತಿರುವುದೇ ಮಹಾಳಿ ರೋಗ ಹರಡಲು ಪ್ರಮುಖ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಆಗಸ್ಟ್‌ ತಿಂಗಳ ಕೊನೆಯಲ್ಲಿ ಮಳೆಯ ಬಿರುಸು ಕ್ಷೀಣಿಸಿ ಆಕಾಶ ಶುಭ್ರಗೊಳ್ಳುತ್ತದೆ. ಆದರೆ ಈ ವರ್ಷ ಸಿಂಹಮಾಸ ಆರಂಭಗೊಂಡು ಅಧ್ರರ್ ತಿಂಗಳು ಕಳೆದರೂ ಧಾರಾಕಾರ ಮಳೆ ಸುರಿಯುವಿಕೆ ಇನ್ನೂ ಮುಂದುವರಿ ಯುತ್ತದೆ. ಈ ಕಾರಣದಿಂದ ಮಹಾಳಿ ರೋಗ ಹೆಚ್ಚಾಗಲು ಕಾರಣ ಎಂದು ಹಿರಿಯ ಅನುಭವಿ ಅಡಿಕೆ ಬೆಳಗಾರರು ಸಂಕಷ್ಟ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಗೊಂಡು ಉರಿ ಬಿಸಿಲಿಗೆ ಎಕ್ರೆಗಟ್ಟಲೆ ಅಡಿಕೆ ತೋಟಗಳು ಕರಟಿ ಹೋಗಿ ಅದೂ ಅಡಿಕೆ ಬೆಳೆಗಾರರನ್ನು ಭಾರೀ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಆದರೂ ಅದನ್ನೆಲ್ಲಾ ಸಹಿಸಿ ಅತ್ಯಂತ ಶ್ರಮಪಟ್ಟು ಕೃಷಿಕರು ತಮ್ಮ ಅಡಿಕೆ ತೋಟಗಳನು ್ನ ಸಂರಕ್ಷಿಸುತ್ತಾ ಬಂದಿದ್ದಾರೆ. ಆದರೆ ಕಳೆದ ವರ್ಷಕ್ಕಿಂತ ಭಿನ್ನವಾಗಿ ಈ ವರ್ಷ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮಹಾಳಿ ರೋಗ ಹರಡಲು ದಾರಿ ಮಾಡಿಕೊಟ್ಟಿದೆ.

ಮಹಾಳಿರೋಗ ಬಾಧಿಸಿ ಅಡಿಕೆ ಮರದಿಂದ ಎಳತು ಅಡಕೆಗಳು ಉದುರುತ್ತಿವೆ. ಇದರಿಂದ ಅಡಕೆ ಬೆಳಗಾರರು ಏನು ಮಾಡಬೇಕೆಂದು ದಾರಿ ತೋಚದೆ ಕಂಗಾಲಾಗಿದ್ದಾರೆ. ಇದೇ ಸಂದರ್ಭದಲ್ಲಿ ಬೆಳೆನಾಶಗೊಂಡ ತಮಗೆ ನಷ್ಟ ಪರಿಹಾರ ಒದಗಿಸಬೇಕೆಂಬ ಬೇಡಿಕೆಯನ್ನು ಅಡಿಕೆ ಬೆಳೆಗಾರರು ಮುಂದಿಟ್ಟಿದ್ದಾರೆ.

ಈ ವರ್ಷದ ವಿಪರೀತ ಗಾಳಿ ಮಳೆಯು ಅಡಿಕೆ ಬೆಳೆಗಾರರ ಪಾಲಿಗೆ ಹೆಚ್ಚಿನ ನಷ್ಟವನ್ನುಂಟು ಮಾಡಿದೆ.

Advertisement

ಕಳೆದ ಒಂದು ದಶಕದಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ವಿವಿಧ ಕಾರಣಗಳಿಂದ ಅಡಿಕೆ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹಲವು ಕಾರಣಗಳಿಂದ ಅಡಿಕೆ ಬೆಳೆ ನಾಶದತ್ತ ಸಾಗುತ್ತಿದೆ. ಇದರಿಂದ ಅಡಿಕೆ ಬೆಳೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕೃಷಿಕ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿಗೆ ತಲುಪಿದ್ದಾರೆ. ಇದೀಗ ಅಡಿಕೆ ಧಾರಣೆ ಚೆನ್ನಾಗಿದ್ದರೂ, ವಿವಿಧ ರೋಗಗಳಿಂದ ಅಡಿಕೆ ಇಳುವರಿ ಕುಸಿದಿದ್ದು. ಉತ್ತಮ ಧಾರಣೆಯಿದ್ದರೂ ಪ್ರಯೋಜನವಿಲ್ಲದಂತಾಗಿದೆ.

ಕಾಸರಗೋಡು ಜಿಲ್ಲೆಯ ಅಡಿಕೆ ಬೆಳೆಗಾರರ ಬಗ್ಗೆ ಕೇರಳ ಸರಕಾರವು ಗಮನಹರಿಸದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿವೆ. ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಕೂಡ ಈ ಕುರಿತು ಗಾಢ ಮೌನಕ್ಕೆ ಶರಣಾಗಿರುವುದು ಅಡಿಕೆ ಕೃಷಿಕರನ್ನು ರೊಚ್ಚಿಗೇಳುವಂತೆ ಮಾಡಿದೆ. ಅತ್ಯಂತ ಕಷ್ಟಪಟ್ಟು ತಾಳ್ಮೆ ವಹಿಸಿ ವರ್ಷದ 12 ತಿಂಗಳುಗಳ ಕಾಲ ಶ್ರಮದಿಂದ ದುಡಿದು ಸಲಹಿದ ಅಡಿಕೆ ಫಸಲಿಗೆ ಮಹಾಳಿ ರೋಗ ಹರಡಿ ಕೃಷಿಕರ ಇಡೀ ವಾರ್ಷಿಕ ಆದಾಯಕ್ಕೆ ಬಹುದೊಡ್ಡ ಪೆಟ್ಟು ಬೀಳುವಂತೆ ಮಾಡಿದೆ. ಇನ್ನಾದರೂ ಸರಕಾರವು ಈ ಬಗ್ಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next