Advertisement
ಸಂಸ್ಕೃತ ಶಬ್ದ ಪಿತೃ ಪಿತ ಏಕವಚನ, ಪಿತರಃ ಬಹುವಚನೀಯ. ಪಿತ ಅಂದರೆ ತಂದೆ. ಪಿತರಃ, ನಮ್ಮ ಎಲ್ಲ ಪೂರ್ವಜರ ಪರಂಪರೆ. ಪಿತೃಲೋಕದಲ್ಲಿ ಇರುವವರು. ಸಾಂವತ್ಸರಿಕ ಶ್ರಾದ್ಧದಲ್ಲಿ ಮೂರು ತಲೆಮಾರು, ತಂದೆ, ಅಜ್ಜ, ಮುತ್ತಜ್ಜ ಇವರಿಗೆ ಪಿಂಡ ಪ್ರದಾನ ಮಾಡುವುದು ವಿಧಿ. ಪಿತೃಗಳು ಶ್ರಾದ್ಧಾದಿ ತರ್ಪಣಗಳನ್ನು ಕಾಯುತ್ತಿರುತ್ತಾರೆ ಎಂದು ನಂಬಿಕೆ. ಆ ದಿನಗಳಂದು ಪಿತೃಗಳು ಪಶುಪಕ್ಷಿ ರೂಪದಲ್ಲೋ ಅಥವಾ ಬ್ರಾಹ್ಮಣರೂಪಿಯಾಗಿಯೋ ಬಂದು ಆಹಾರವನ್ನು ಸ್ವೀಕರಿಸುತ್ತಾರೆ. ಪಿತೃಗಳಿಗೆ ಶ್ರಾದ್ಧ, ತರ್ಪಣಾದಿಗಳನ್ನು ನೀಡದಿದ್ದರೆ, ಹೇಗೆ ಮುಂದಿನ ಪದವಿಯನ್ನು ಗಳಿಸಲಾರರು ಎಂಬ ಅರ್ಜುನನ ವಿಷಾದ ಭ.ಗೀ ಯಲ್ಲಿ ಉಲ್ಲೇಖಗೊಂಡಿದೆ. –
– ವರ್ಣ ಸಾಂಕರ್ಯವು ಕುಲಘಾತಕರನ್ನು ಮತ್ತು ಕುಲವನ್ನೂ ನರಕಕ್ಕೆ ಕೊಂಡೊಯ್ಯುತ್ತದೆ. ಲುಪ್ತವಾದ ಪಿಂಡ ಮತ್ತು ತರ್ಪಣಾದಿಗಳಿಂದ ಅರ್ಥಾತ್ ಶ್ರಾದ್ಧ ಮತ್ತು ಪಿತೃತರ್ಪಣಗಳಿಂದ ವಂಚಿತರಾದ ಇವರ ಪಿತೃಗಳು ಕೂಡಾ ಅಧೋಗತಿಯನ್ನು ಪಡೆಯುತ್ತಾರೆ. ಜೀವಾತ್ಮನು ಶರೀರವನ್ನು ತ್ಯಜಿಸಿದ ಬಳಿಕ ದೇವಯಾನ (ಬ್ರಹ್ಮಲೋಕ) ಅಥವಾ ಪಿತೃಯಾನ (ಚಂದ್ರಲೋಕ) ದಲ್ಲಿ ಸಂಚರಿಸುತ್ತಾನೆ ಎಂದು ಉಪನಿಷದ್ ಮತ್ತು ಭ.ಗೀತೆಯಲ್ಲಿ ತಿಳಿಸಿದೆ. ಪಿತೃಲೋಕದಲ್ಲಿ ಗತಿಸಿಹೋದ ನಮ್ಮ ಪೂರ್ವಜರು ನೆಲೆಸುತ್ತಾರೆ ಎಂದು ಹೇಳುತ್ತದೆ ಋಗ್ವೇದ. ಅದು ಪಿತೃಯಾನದಲ್ಲಿರುವ ಒಂದು ತಂಗುದಾಣ ಎಂದು ಬೃಹದಾರಣ್ಯಕ ಉ.ನಿ ಉಲ್ಲೇಖ.
Related Articles
Advertisement
ಮಹಾಲಯ: ಮಹಾ ಅಂದರೆ ಶ್ರೇಷ್ಠ ಅಥವಾ ದೊಡ್ಡದಾದ. ಲಯ – ನಾಶ. ದೇವ ದಾನವರ ನಡುವೆ ನಡೆದ ಘೋರ ಯುದ್ಧದಲ್ಲಿ ಅಪಾರ ಸಂಖ್ಯೆಯಲ್ಲಿ, ದೇವತೆಗಳು ಋಷಿಗಳು ದಾನವರ ಕೈಯಿಂದ ಮಡಿದರು. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ಅವಧಿಯಲ್ಲಿ ಈ ಯುದ್ಧ ನಡೆದಿತ್ತು ಎಂದು ಒಂದು ಕಥೆ. ಮಹಾನಾಶ. ಮಹಾಲಯ! ದೇವತೆಗಳು ಮತ್ತು ಋಷಿಗಳು ಬೇರಾರೂ ಅಲ್ಲ, ನಮ್ಮ ಪೂರ್ವಜರೇ.
ಗೋದಾನ – ಸೇವೆ: ಗಾವೋ ಮೇ ಮಾತರ ಸರ್ವ ಪಿತರಾcಪಿ ಗೋವೃಷಃ ಎನ್ನುವಂತೆ ಗೋವು ಸಮಸ್ತ ಮಾನವರಿಗೂ ತಾಯಿ, ವೃಷಭ ತಂದೆ. ಪಿತೃಪಕ್ಷದಲ್ಲಿ ಗತಿಸಿಹೋದ ನಮ್ಮ ಪೂರ್ವಜರನ್ನು ಸ್ಮರಿಸಿದಂತೆಯೇ ಜೀವಂತ ಮಾತಾಪಿತೃಗಳಾದ ನಮ್ಮ ಗೋವುಗಳ ದಾನ, ಸೇವೆಯನ್ನು ಮಾಡಿ ಋಣಸಂದಾಯವನ್ನು ಮಾಡುವ ಚಿಂತನೆ. ಪಿಂಡಪ್ರದಾನ, ತರ್ಪಣದಂತೆಯೇ ಪಿತೃಪಕ್ಷದಲ್ಲಿ ಗೋದಾನ, ಸೇವೆಯೂ ಅತ್ಯಂತ ಪುಣ್ಯಪ್ರದ, ಫಲಪ್ರದ.
– ಜಲಂಚಾರು ರಘುಪತಿ ತಂತ್ರಿ, ಉಡುಪಿ