Advertisement

“ಮಹಾ’ಮಳೆಗೆ ಸಿಲುಕಿದ ರೈಲು!

09:40 AM Jul 29, 2019 | mahesh |

ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಸಾವಿರಕ್ಕೂ ಹೆಚ್ಚು ಜನರಿದ್ದ ರೈಲೊಂದು ಸಿಲುಕಿದ್ದ ಘಟನೆ ನಡೆದಿದೆ.ಶುಕ್ರವಾರ ರಾತ್ರಿಯಿಂದೀಚೆಗೆ ವಾಣಿಜ್ಯ ನಗರಿಯಲ್ಲಿ ಸುರಿದ ಧಾರಾಕಾರ ಮಳೆಯ ಪ್ರಭಾವವಿದು. ಮಳೆಯಿಂದ ಉಂಟಾದ ಪ್ರವಾಹದಿಂದ ರೈಲು ಹಳಿಯು ಸಂಪೂರ್ಣ ಜಲಾವೃತವಾದ ಕಾರಣ ರಾತ್ರಿ ಮುಂಬಯಿಯಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲು ರತ್ನಗಿರಿಯ ಬದ್ಲಾಪುರದಲ್ಲಿ ಸಿಲುಕಿಕೊಂಡಿತು. ರೈಲು ನಿಂತಾಗ ಅದರಲ್ಲಿದ್ದ 9 ಗರ್ಭಿಣಿಯರು ಸಹಿತ1,050 ಪ್ರಯಾಣಿಕರು ಅತಂತ್ರ ಸ್ಥಿತಿಗೆ ತಲುಪಿದರು. ರೈಲಲ್ಲೇ ಉಳಿಯಲೂ ಆಗದೆ, ಕೆಳಗಿಳಿದು ಹೋಗಲೂ ಆಗದೆ ಸುಮಾರು 17 ಗಂಟೆಗಳನ್ನು ಆತಂಕದಲ್ಲೇ ಕಳೆದರು. ಕೊನೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಹಿತ ಹಲವು ಏಜೆನ್ಸಿಗಳು ನಡೆಸಿದ ಕಾರ್ಯಾಚರಣೆಯ ಫ‌ಲವಾಗಿ, ಎಲ್ಲ 1,050 ಮಂದಿಯೂ ಸುರಕ್ಷಿತವಾಗಿ ವಾಪಸಾದರು. ರಕ್ಷಣೆಗಾಗಿ ಎರಡು ಸೇನಾ ಹೆಲಿಕಾಪ್ಟರ್‌ ಹಾಗೂ ಎನ್‌ಡಿಆರ್‌ಎಫ್ನ 6 ಬೋಟ್‌ಗಳನ್ನು ಬಳಸಲಾಗಿತ್ತು. 17 ಗಂಟೆಗಳ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿದ ರಕ್ಷಣಾ ತಂಡದ ಕಾರ್ಯಕ್ಕೆ ಗೃಹ ಸಚಿವ ಅಮಿತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

9 ಗರ್ಭಿಣಿಯರು
ರೈಲಿನಲ್ಲಿ 9 ಮಂದಿ ಗರ್ಭಿಣಿಯರು ಹಾಗೂ ಒಂದು ತಿಂಗಳ ಹಸುಗೂಸು ಕೂಡ ಪ್ರಯಾಣಿಸುತ್ತಿತ್ತು. ಮೊದಲಿಗೆ ಇವರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕರೆತಂದ ಎನ್‌ಡಿಆರ್‌ಎಫ್ ಸಿಬಂದಿ, ನಂತರ ಉಳಿದ ಪ್ರಯಾಣಿಕರನ್ನು ರಕ್ಷಿಸಿತು.

ವಿಶೇಷ ರೈಲು ವ್ಯವಸ್ಥೆ
ರೈಲಿನಲ್ಲಿ ಸಿಲುಕಿದ್ದವರ ರಕ್ಷಣೆ ಬಳಿಕ ಅವರನ್ನು ಕೊಲ್ಹಾಪುರಕ್ಕೆ ಕರೆದೊಯ್ಯಲೆಂದೇ ಸರಕಾರವು ವಿಶೇಷ ರೈಲಿನ ವ್ಯವಸ್ಥೆ ಮಾಡಿತ್ತು. 19 ಬೋಗಿಗಳ ವಿಶೇಷ ರೈಲು ಕಲ್ಯಾಣ್‌ನಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಕೊಲ್ಹಾಪುರಕ್ಕೆ ತೆರಳಿತು.

ಜನಜೀವನ ತತ್ತರ
ಶುಕ್ರವಾರ ರಾತ್ರಿಯಿಂದೀಚೆಗೆ ಮುಂಬಯಿ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆ, ರೈಲು, ವಿಮಾನ ಸಂಚಾರಕ್ಕೂ ತೊಂದರೆಯಾಗಿದ್ದು, 11 ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ರವಿವಾರ ಬೆಳಗ್ಗೆ ಧಾರಾಕಾರ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮನೆಗಳಿಂದ ಹೊರಬರದಂತೆ ನಾಗರಿಕರಿಗೆ ಸೂಚಿಸಲಾಗಿದೆ.

ಮುಂಗಾರಿಗೆ 3 ದೇಶಗಳಲ್ಲಿ 600 ಬಲಿ
ಪ್ರಸಕ್ತ ವರ್ಷ ಮುಂಗಾರಿನ ಅಬ್ಬರದಿಂದಾಗಿ ಭಾರತ, ಬಾಂಗ್ಲಾದೇಶ, ನೇಪಾಲ ಮತ್ತು ಮ್ಯಾನ್ಮಾರ್‌ನಲ್ಲಿ ಸುಮಾರು 600 ಮಂದಿ ಸಾವಿಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ ಮಾಹಿತಿ ನೀಡಿದೆ. ವರುಣನ ಆರ್ಭಟದ ಪರಿಣಾಮ 2.50 ಕೋಟಿ ಜನ ನಿರ್ವಸಿತರಾಗಿದ್ದಾರೆ ಎಂದೂ ಹೇಳಿದೆ. ಭಾರತದಲ್ಲಿ ಅಸ್ಸಾಂ, ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಮಳೆ, ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಈ ರಾಜ್ಯಗಳಿಗೆ ಯುನಿಸೆಫ್ ಎಲ್ಲ ರೀತಿಯ ನೆರವು ನೀಡುತ್ತಿದೆ. ಇಲ್ಲಿ 43 ಲಕ್ಷ ಮಕ್ಕಳು ಸೇರಿದಂತೆ ಸುಮಾರು ಒಂದು ಕೋಟಿ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್‌ ಅವರ ಉಪ ವಕ್ತಾರ ಫ‌ರ್ಹಾನ್‌ ಹಖ್‌ ಹೇಳಿದ್ದಾರೆ.

Advertisement

ಮುಂಬಯಿ-ಗೋವಾ ಹೆದ್ದಾರಿ ಬಂದ್‌
ರತ್ನಗಿರಿ ಜಿಲ್ಲೆಯ ಜಗ್‌ಬುದಿ ನದಿಯಲ್ಲಿ ಪ್ರವಾಹ ಉಂಟಾದ ಕಾರಣ ಮಹಾರಾಷ್ಟ್ರದಲ್ಲಿನ ಮುಂಬಯಿ – ಗೋವಾ ರಾಷ್ಟ್ರೀಯ ಹೆದ್ದಾರಿಯನ್ನು ಶನಿವಾರ ಬೆಳಗ್ಗಿನಿಂದಲೇ ಬಂದ್‌ ಮಾಡಲಾಗಿದೆ. ಶುಕ್ರವಾರ ರಾತ್ರಿಯಿಂದೀಚೆಗೆ ಧಾರಾಕಾರ ಮಳೆ ಸುರಿದ ಕಾರಣ, ಥಾಣೆ, ರಾಯYಡ ಮತ್ತು ರತ್ನಗಿರಿ ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ನದಿಯು ಉಕ್ಕಿ ಹರಿದು, ನೀರು ಹೆದ್ದಾರಿಗೆ ಹರಿದು ಬಂದ ಕಾರಣ, ಸಂಚಾರ ಸ್ಥಗಿತಗೊಳಿಸಲಾಯಿತು.

ಮಳೆಯಿಂದಾಗಿ ಗೋಚರತೆ ಪ್ರಮಾಣ ಕ್ಷೀಣಿಸಿರುವ ಕಾರಣ, ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸದಂತೆ ನಾಗರಿಕರಿಗೆ ಸೂಚನೆ

ಕಲ್ಯಾಣ್‌ನ ಕಟ್ಟಡವೊಂದರ ಮೇಲೆ ರಕ್ಷಣೆಗಾಗಿ ಕಾದಿದ್ದ 9 ಮಂದಿಯ ರಕ್ಷಿಸಿದ ವಾಯುಪಡೆ ಎಂಐ-17 ಕಾಪ್ಟರ್‌

ನಾಸಿಕ್‌ ಜಿಲ್ಲೆಯ ತ್ರ್ಯಂಬಕೇಶ್ವರದಲ್ಲಿ 24 ಗಂಟೆಗಳಲ್ಲಿ 140 ಮಿ.ಮೀ. ಮಳೆ.

ಅಸ್ಸಾಂನಲ್ಲಿ ಮಳೆ, ಪ್ರವಾಹ ಸಂಬಂಧಿ ಘಟನೆಗಳಿಗೆ ಬಲಿಯಾದವರ ಸಂಖ್ಯೆ 81ಕ್ಕೇರಿಕೆ

ಪ್ರವಾಹ ಪೀಡಿತ ಅಸ್ಸಾಂಗೆ ಉತ್ತರಾಖಂಡ ಸರಕಾರದಿಂದ 5 ಕೋ.ರೂ. ನೆರವು

ಅಸ್ಸಾಂ ಸಂತ್ರಸ್ತರಿಗೆಂದು 10 ಸಾವಿರ ಬೇಯಿಸದ ಆಹಾರ ಪ್ಯಾಕೆಟ್‌ಗಳು, 100 ಫ್ಯಾಮಿಲಿ ಕಿಟ್‌ಗಳು, 300 ಪ್ಯಾಕೆಟ್‌ ಮಿಲ್ಲೆಟ್‌ ನ್ಯೂಟ್ರಿಯಾ ಬಾರ್‌ಗಳನ್ನು ಕಳುಹಿಸುವುದಾಗಿ ಅಂತಾರಾಷ್ಟ್ರೀಯ ಹಸಿವು ನಿವಾರ ಸಂಸ್ಥೆ ದಿ ರೈಸ್‌ ಅಗೈನ್ಸ್‌ ಹಂಗರ್‌ ಇಂಡಿಯಾ ಘೋಷಣೆ

ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮಳೆಯಿಂದಾಗಿ ಭೂಕುಸಿತ- 82ರ ವೃದ್ಧೆ ಸಾವು, ವ್ಯಕ್ತಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next