Advertisement
ಮಹಾ ಕುಂಭಮೇಳ -2025ರ ಸಲುವಾಗಿ “ನಂದಿನಿ’ ಯುಎಚ್‌ಟಿ ಗುಡ್‌ಲೈಫ್ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಕೆಎಂಎಫ್ ಈಗ ಚಾಯ್ ಪಾಯಿಂಟ್ ಜತೆಗೆ ಪಾಲುದಾರಿಕೆ ಹೊಂದಿರುವುದಾಗಿ ಘೋಷಣೆ ಮಾಡಿದೆ. ಚಾಯ್ ಪಾಯಿಂಟ್ ಭಾರತದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿದೆ. ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಪಾನೀಯ ಮಾರಾಟ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ಈ ಸಹಯೋಗದ ಭಾಗವಾಗಿ ಚಾಯ್ ಪಾಯಿಂಟ್ ಕುಂಭ ಮೇಳದ ಸಂಕೀರ್ಣದಲ್ಲಿ 10 ಮಳಿಗೆ ತೆರೆಯಲಾಗಿದೆ. ಈ ಮಳಿಗೆಗಳ ಮೂಲಕ ಒಂದು ಕೋಟಿ ಕಪ್‌ಗಳಿಗಿಂತಲೂ ಹೆಚ್ಚು ಚಹಾವನ್ನು ತಯಾರಿಸಿ ಒದಗಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅತಿ ಹೆಚ್ಚು ಕಪ್ ಚಹಾವನ್ನು ಮಾರಾಟ ಮಾಡಿ ಗಿನ್ನೆಸ್ ದಾಖಲೆ ಸ್ಥಾಪಿಸುವ ಗುರಿ ಹೊಂದಲಾಗಿದೆ. ಚಹಾದ ಜತೆ ಚಾಯ್ ಪಾಯಿಂಟ್ ಮಳಿಗೆಗಳಲ್ಲಿ ಸಿಹಿ ಉತ್ಪನ್ನ, ಮಿಲ್ಕ್ ಶೇಕ್ ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಈ ಪಾಲುದಾರಿಕೆ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಉತ್ತರ ಭಾಗದ ರಾಜ್ಯಗಳಿಗೂ ವಿಸ್ತರಿಸುವುದು ಮತ್ತು ರಾಷ್ಟ್ರವ್ಯಾಪಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿದೆ. ಇದು ಕೆಎಂಎಫ್ ಬದ್ಧತೆ ಹಾಗೂ ಸಮರ್ಪಣೆ ಮನೋಭಾವ ಸಾರಿದಂತಾಗುತ್ತದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಚಾಯ್ ಪಾಯಿಂಟ್ ಕೆಎಂಎಫ್ ನಂದಿನಿ ಉತ್ಪನ್ನದ ದೀರ್ಘಾವಧಿಯ ಗ್ರಾಹಕರಾಗಿರುವುದಲ್ಲದೆ ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಎಚ್‌ಟಿ ಗುಡ್‌ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನಿರ್ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.
Related Articles
Advertisement