“ಕವಿರತ್ನ ಕಾಳಿದಾಸ’, “ಮಯೂರ’, “ಬಬ್ರುವಾಹನ’ ಮೊದಲಾದ ಹತ್ತಾರು ಮಹಾಕಾವ್ಯಗಳು ಸಿನಿಮಾ ರೂಪದಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಗಿರುವುದನ್ನು ನೀವು ನೋಡಿದ್ದೀರಿ. ಈಗ ಅಂಥದ್ದೇ ಚಿತ್ರಗಳನ್ನು ನೆನಪಿಸುವ ಮತ್ತೂಂದು “ಮಹಾಕಾವ್ಯ’ ತೆರೆಗೆ ಬರುತ್ತಿದೆ. ಅಂದಹಾಗೆ, ಈ ಚಿತ್ರದ ಹೆಸರೇ “ಮಹಾಕಾವ್ಯ’. ಹೌದು, ಪಂಪನ “ಶಾಂತಿನಾಥ ಪುರಾಣ’, ರನ್ನನ “ಗದಾಯುದ್ದ’ ಮತ್ತು ಪೊನ್ನನ “ಶಕ್ತಿ ಪುರಾಣ’ದ ಕೆಲ ಪ್ರಮುಖ ಭಾಗಗಳನ್ನು ಆಯ್ದುಕೊಂಡು ಜೊತೆಗೆ ಸುಮಾರು 38 ಇತರೆ ಕಾವ್ಯ ಪದ್ಯಗಳನ್ನು ಬಳಸಿಕೊಂಡು “ಮಹಾಕಾವ್ಯ’ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಸದ್ಯ “ಮಹಾಕಾವ್ಯ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಮುಂದಿನ ಶುಕ್ರವಾರ ಬಿಡುಗಡೆಯಾಗುತ್ತಿದೆ.
1964ರಲ್ಲಿ ಡಾ. ರಾಜಕುಮಾರ್ ಅಭಿನಯದ “ಶಿವಲಿಂಗ ಮಹಾತ್ಮೆ’ ಚಿತ್ರಕ್ಕೆ ಕ್ಲಾಪ್ ಬಾಯ್ ಆಗುವ ಮೂಲಕ ಚಿತ್ರರಂಗ ಪ್ರವೇಶಿಸಿದ ಬಳಿಕ ಗುಬ್ಬಿ ವೀರಣ್ಣ ಅವರೊಂದಿಗೆ ರಂಗಭೂಮಿ ಯಲ್ಲಿ ಸಾಕಷ್ಟು ವರ್ಷಗಳ ಕೆಲಸ ಮಾಡಿದ್ದ ಶ್ರೀ ದರ್ಶನ್ “ಮಹಾಕಾವ್ಯ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
1995 ರಲ್ಲಿ ಶ್ರೀ ದರ್ಶನ್ ನಿರ್ದೇಶನದ “ಎದ್ದಿದೆ ಗದ್ದಲ’ ಎನ್ನುವ ಚಿತ್ರವನ್ನು ನಿರ್ಮಿಸಿದ್ದ “ಎಸ್‌ಆರ್‌ಕೆ ಪಿಕ್ಚರ್’ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. “ಮಹಾಕಾವ್ಯ’ ಚಿತ್ರದಲ್ಲಿ ನಿರ್ದೇಶಕ ಶ್ರೀ ದರ್ಶನ್ ದುಯೋರ್ಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರನ್ನನಾಗಿ ರಾಮಕೃಷ್ಣ, ಪಂಪನಾಗಿ ರವಿಭಟ್ ಹಾಗೂ ಪೊನ್ನನಾಗಿ ಪುರುಷೋತ್ತಮ್ ಕಣಗಾಲ್ ಅಭಿನಯಿಸಿದ್ದಾರೆ.
ಉಳಿದಂತೆ ಶ್ರೀಜಯನಾಗಿ ವಲ್ಲಭ್ ಸೂರಿ, ಬಾಹುಬಲಿ ಮಂತ್ರಿ ಪಾತ್ರದಲ್ಲಿ ಗಣೇಶ್ ರಾವ್ ಕೇಸರ್ಕರ್, ಶಾಂತಿಗೌಡ ಬಾಹುಬಲಿ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಅನಂತ ವೇಲು, ಪ್ರದೀಪ್, ಗಿರೀಶ್, ಲಕ್ಷ್ಮೀ ಭಟ್, ಆಶಾ ನಾಗೇಶ್, ಅರವಿಂದ್, ಚೆಲುವರಾಜ್ ಮುಂತಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಿರಿಯ ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಪುತ್ರ ಪುರುಷೊತ್ತಮ್ ಕಣಗಾಲ್ ಸುಮಾರು 58 ಗ್ರಂಥಗಳ ಅಧ್ಯಯನ ನಡೆಸಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. “ಮಹಾಕಾವ್ಯ’ ಚಿತ್ರಕ್ಕೆ ಮನೋರಂಜನ್ ಪ್ರಭಾಕರ್ ಸಂಗೀತ, ಸಂಗೀತ ರಾಜ ಹಿನ್ನಲೆ ಸಂಗೀತ ಮತ್ತು ಮುತ್ತುರಾಜ್ ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ.
32 ದಿನಗಳ ಕಾಲ “ಮಹಾಕಾವ್ಯ’ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದಲ್ಲಿ ಬರುವ ಸುಮಾರು 52 ನಿಮಿಷಗಳ ಗ್ರಾಫಿಕ್ಸ್ ಕೆಲಸಕ್ಕೆ ಸುಮಾರು ಆರು ತಿಂಗಳು ಸಮಯ ತೆಗೆದುಕೊಳ್ಳಲಾಗಿದೆಯಂತೆ. 2.20 ನಿಮಿಷ ಅವಧಿಯ ಈ ಚಿತ್ರವನ್ನು ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನುತ್ತದೆ ಚಿತ್ರತಂಡ. ವಿತರಕ ಶ್ರೀಧರ್ ‘ಮಹಾಕಾವ್ಯ’ ಚಿತ್ರದ ವಿತರಣೆಯ ಹೊಣೆ ವಹಿಸಿಕೊಂಡಿದ್ದು,ಚಿತ್ರ ಮುಂದಿನ ಶುಕ್ರವಾರ ರಾಜ್ಯಾ ದ್ಯಂತ ಸುಮಾರು 40 ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ.