ಸಾಗರ: ಗಣಪತಿ ಜಾತ್ರೆ ಸಂದರ್ಭದಲ್ಲಿ ದರ್ಶನಕ್ಕೆ ಇರಿಸುತ್ತಿದ್ದ ಸ್ವರ್ಣ ಗಣಪತಿ ದರ್ಶನವನ್ನು ಏ. 12ರ ಮಂಗಳವಾರ ರಾತ್ರಿ 8 ಗಂಟೆವರೆಗೂ ವಿಸ್ತರಿಸಲಾಗಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಮಹಾಗಣಪತಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಜಾತ್ರೋತ್ಸವ ಸಮಿತಿ ಸಂಚಾಲಕರ ಜೊತೆ ಚರ್ಚೆ ನಡೆಸಿ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಸ್ವರ್ಣಗಣಪತಿ ದರ್ಶನ 5 ದಿನಗಳ ಕಾಲ ಮಾತ್ರ ಭಕ್ತರಿಗೆ ಸಿಗುತಿತ್ತು. ಈ ವರ್ಷದಿಂದ ಭಕ್ತಾದಿಗಳ ಅಪೇಕ್ಷೆ ಮತ್ತು ಮನವಿ ಮೇರೆಗೆ ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ ಎಂದರು.
ಈ ವರ್ಷ ಗಣಪತಿ ಜಾತ್ರೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ. ಪ್ರತಿದಿನ ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಜನದಟ್ಟಣೆ ಜಾಸ್ತಿ ಇರುವುದರಿಂದ ಸಾಕಷ್ಟು ಭಕ್ತರಿಗೆ ಸ್ವರ್ಣ ಗಣಪತಿ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಭಕ್ತಾದಿಗಳ ಕೋರಿಕೆಯನ್ನು ಸರ್ಕಾರ, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಅವರು ಸಹ ಒಪ್ಪಿಗೆ ಸೂಚಿಸಿದ್ದು, ಜಾತ್ರಾ ಸಮಿತಿ ಸಂಚಾಲಕರು, ಸದಸ್ಯರ ಜೊತೆ ಚರ್ಚೆ ನಡೆಸಿ ಸ್ವರ್ಣ ಗಣಪತಿ ಮೂರ್ತಿ ದರ್ಶನವನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.
ಜಾತ್ರೋತ್ಸವ ಸಂದರ್ಭದಲ್ಲಿ ನಡೆಯುವಂತೆ ಪ್ರತಿದಿನ ಅನ್ನ ಸಂತರ್ಪಣೆ, ವಿಶೇಷ ಪೂಜೆ ಇರುತ್ತದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೋಮವಾರ ಮತ್ತು ಮಂಗಳವಾರ ವಿಸ್ತರಿಸುವ ಉದ್ದೇಶ ಹೊಂದಿದೆ. ಭಕ್ತಾದಿಗಳು ಎಂದಿನಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಗಣೇಶ್ ಪ್ರಸಾದ್, ಬಿ.ಎಚ್.ಲಿಂಗರಾಜ್, ಪ್ರಮುಖರಾದ ಲೋಕನಾಥ್ ಬಿಳಿಸಿರಿ, ಈಶ್ವರ್, ಆನಂದ್ ಜನ್ನೆಹಕ್ಲು, ಯು.ಎಚ್.ರಾಮಪ್ಪ, ಪ್ರಧಾನ ಅರ್ಚಕ ನವೀನ್ ಜೋಯ್ಸ್ ಇನ್ನಿತರರು ಹಾಜರಿದ್ದರು.