Advertisement

ಹೆತ್ತವರ ಸಮಾಧಿ ಪಕ್ಕ ಮಹದೇವ ಪ್ರಸಾದ್‌ ಲೀನ

10:01 AM Jan 05, 2017 | Team Udayavani |

ಹಾಲಹಳ್ಳಿ (ಚಾಮರಾಜನಗರ): ಮಂಗಳವಾರ ಹಠಾತ್‌ ನಿಧನರಾದ ಸಹಕಾರ, ಸಕ್ಕರೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಎಸ್‌. ಮಹದೇವಪ್ರಸಾದ್‌ ಅಂತ್ಯಕ್ರಿಯೆ ಅವರ ಹುಟ್ಟೂರು ಹಾಲಹಳ್ಳಿಯ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಸಂಪ್ರದಾಯದಂತೆ ಬುಧವಾರ ಸಂಜೆ ನೆರವೇರಿತು.

Advertisement

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪುತ್ರ ಗಣೇಶ ಪ್ರಸಾದ್‌ ಅವರು ಅಂತಿಮ ವಿಧಿ-ವಿಧಾನ ಪೂರೈಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಬಹುತೇಕ ಸದಸ್ಯರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,
ಶೋಭಾ ಕರಂದ್ಲಾಜೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದು, ಅಗಲಿದ ಚೇತನಕ್ಕೆ ಅಂತಿಮ ಗೌರವ ಸಲ್ಲಿಸಿದರು. ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸದಸ್ಯರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ 
ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಚಿವರ ತೋಟದ ಮನೆಯಲ್ಲಿ ಅಂತ್ಯಕ್ರಿಯೆ:
ಚಿಕ್ಕಮಗಳೂರಿನಿಂದ ಮೈಸೂರು, ಗುಂಡ್ಲುಪೇಟೆ ಮೂಲಕ ಮಂಗಳವಾರ ಮಧ್ಯರಾತ್ರಿ 12.15ರ ವೇಳೆಗೆ ಹಾಲಹಳ್ಳಿಗೆ ಆಗಮಿಸಿದ ಪಾರ್ಥಿವ ಶರೀರವನ್ನು, ಊರಿನ ಮಧ್ಯೆ ಇರುವ ಸಚಿವರ ಹಳೆಯ ಮನೆಯಲ್ಲಿ ಇರಿಸಲಾಯಿತು. ಬಳಿಕ, ಬುಧವಾರ ಬೆಳಗ್ಗೆ 9 ಗಂಟೆ ವೇಳೆಗೆ ಗ್ರಾಮದ ಎಚ್‌.ಎನ್‌. ಶ್ರೀಕಂಠಶೆಟ್ಟಿ ಸಮುದಾಯ ಭವನದ ಪಕ್ಕ 1 ಎಕರೆ ಜಾಗದಲ್ಲಿ ಪೆಂಡಾಲ್‌ ಹಾಕಿ, ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಮಧ್ಯಾಹ್ನ 1.20ರ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. 

ಮಧ್ಯಾಹ್ನ 1.30ರ ವೇಳೆಗೆ ಹಾಲಹಳ್ಳಿಯಿಂದ ಒಂದೂವರೆ ಕಿ.ಮೀ.ದೂರದಲ್ಲಿರುವ ಅವರ ತೋಟದ ಮನೆ, ಬೊಗ್ಗನಪುರ ತೆಂಗಿನ ನರ್ಸರಿ ಫಾರಂಗೆ ಮೃತದೇಹ ತರಲಾಯಿತು. ವೀರಶೈವ ಸಂಪ್ರದಾಯದ ಪ್ರಕಾರ ಮೊದಲಿಗೆ ಮೃತದೇಹಕ್ಕೆ ಸ್ನಾನ ಮಾಡಿಸಲಾಯಿತು. ಬಳಿಕ, ಅಲಂಕೃತ ಕುರ್ಚಿಯಲ್ಲಿ ಪಾರ್ಥಿವ ಶರೀರವನ್ನು ಕುಳ್ಳಿರಿಸಿ, ಅಲ್ಲಿಂದ ಅರ್ಧ ಕಿ.ಮೀ.ದೂರದ ಸಮಾಧಿ ಸ್ಥಳಕ್ಕೆ ವಾದ್ಯ, ತಮಟೆಯೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಅವರ ಪುತ್ರ ಗಣೇಶಪ್ರಸಾದ್‌ ಬೆಂಕಿಯ ಕಟ್ಟಿಗೆ ಹಿಡಿದು ಮೃತದೇಹದ ಮುಂದೆ ಸಾಗಿದರು. ಮೆರವಣಿಗೆಯುದ್ದಕ್ಕೂ ಅಭಿಮಾನಿಗಳಿಂದ ಜೈಕಾರಗಳು ಮೊಳಗಿದವು.

ಬಳಿಕ, ಮಹದೇವಪ್ರಸಾದ್‌ ಅವರ ತಂದೆ ಎಚ್‌. ಎನ್‌.ಶ್ರೀಕಂಠಶೆಟ್ಟಿ ಹಾಗೂ ತಾಯಿ ವೀರಮ್ಮ ಅವರ ಸಮಾಧಿ ಬಳಿ ನಿರ್ಮಿಸಲಾಗಿದ್ದ ಗುಂಡಿ ಬಳಿ ಮೃತದೇಹ ಇರಿಸಲಾಯಿತು. ಈ ವೇಳೆ, ಸರ್ಕಾರದ ಪರವಾಗಿ ಅಗಲಿದ ನಾಯಕನಿಗೆ ಅಂತಿಮ ಗೌರವ ಸಲ್ಲಿಸಲಾಯಿತು.   

Advertisement
Advertisement

Udayavani is now on Telegram. Click here to join our channel and stay updated with the latest news.

Next