Advertisement

ಬಂದ್ ಜಟಾಪಟಿ, ಆರೋಪದ ಬಗ್ಗೆ ವಾಟಾಳ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು

05:52 PM Jan 24, 2018 | Team Udayavani |

ಬೆಂಗಳೂರು:ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯ ಸರ್ಕಾರಿ ನೌಕರರ ಸಂಘ, ಲಾರಿ ಚಾಲಕರ ಸಂಘ, ರಾಜ್ಯ ಫಿಲ್ಮ್ ಛೇಂಬರ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

Advertisement

ಬುಧವಾರ ಸಂಜೆ ಹೋರಾಟಗಾರರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್, ಸಾರ್ವಜನಿಕರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಬಂದ್ ಮಾಡಿಸುತ್ತಿಲ್ಲ. ಕಳೆದ 3 ವರ್ಷಗಳಿಂದ ಗದಗ, ನವಲಗುಂದ ಭಾಗದ ರೈತರು ಗಾಂಧಿ ಮಾದರಿಯ ಸತ್ಯಾಗ್ರಹದ ರೀತಿಯಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಯಾರೊಬ್ಬರೂ ಅವರ ಸಮಸ್ಯೆಯನ್ನು ಕೇಳಿಲ್ಲ.

ಪ್ರಧಾನಿಯವರು ಕೆಲವು ಬಾರಿ ಕರ್ನಾಟಕ ಬಂದಾಗಲೂ ಅವರ ಪಕ್ಷದವರೂ ಕೂಡಾ ಗಮನಕ್ಕೆ ತಂದಿಲ್ಲ. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸುತ್ತಾರೆಂದು ಬಿಜೆಪಿಯವರು ಭರವಸೆ ನೀಡಿದ್ರೆ ನಾಳೆಯ ರಾಜ್ಯ ಬಂದ್ ಹಾಗೂ ಫೆ.4ರ ಬಂದ್ ವಾಪಸ್ ಪಡೆಯುತ್ತೇವೆ ಎಂದರು.

ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಅಲ್ಲ, ಸಾರ್ವಜನಿಕ ಬಂದ್ ಇದು. ಬಂದ್ ವಿಚಾರದಲ್ಲಿ ಯಾವುದೇ ರಾಜಕೀಯ, ಪಿತೂರಿ ಬೇಡ. ಕನ್ನಡ ನಾಡು, ನುಡಿ, ಜಲ, ಭಾಷೆ ವಿಚಾರದಲ್ಲಿ ಒಂದಾಗಿರಬೇಕು. ಸಾರ್ವಜನಿಕರು ಬೆಂಬಲ ನೀಡಬೇಕೆಂದು ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಮಾಡಿಕೊಂಡರು.

ಮೈಸೂರಿನಲ್ಲಿ ಬಂದ್ ಗೆ ವಿರೋಧ:

Advertisement

ನಾಳೆಯ ಕರ್ನಾಟಕ ಬಂದ್ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ವಿರೋಧ ವ್ಯಕ್ತಪಡಿಸಲಾಗಿದೆ. ಬಂದ್ ಹೆಸರಿನಲ್ಲಿ ಮೈಸೂರಿನ ಪರಂಪರೆ ಹಾಳು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಬಂದ್ ಇಲ್ಲ:

ಮಹದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದರೂ ಕೂಡಾ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬಂದ್ ವಿಚಾರವಾಗಿ ಯಾವ ಸಂಘಟನೆಗಳೂ ಸಂಪರ್ಕಿಸಿಲ್ಲ ಎಂದರು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ನಾಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಯಾವುದೇ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ ಎಂದು ವರದಿ ತಿಳಿಸಿದೆ.

ಶಿವಮೊಗ್ಗಕ್ಕಿಲ್ಲ ಬಂದ್ ಬಿಸಿ:

ನಾಳೆಯ ಬಂದ್ ಗೆ ಶಿವಮೊಗ್ಗದಲ್ಲಿ ಯಾವುದೇ ಬೆಂಬಲ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿದೆ. ನಾಳೆ ಎಂದಿನಂತೆ ಬಸ್ ಸಂಚಾರ ಇರಲಿದೆ. ಆಟೋ, ಬಸ್, ಕೆಎಸ್ ಆರ್ ಟಿಸಿ ಬಸ್ ಸಂಚರಿಸಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next