ಹೊಸದಿಲ್ಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದದ ಸಂಬಂಧದ ಜೆ.ಎಂ.ಪಾಂಚಾಲ ನೇತೃತ್ವದ ಮಹದಾಯಿ ನ್ಯಾಯ ಮಂಡಳಿ ಅಂತಿಮ ತೀರ್ಪನ್ನು ಇಂದು ಮಂಗಳವಾರ ಸಂಜೆ 4 ಗಂಟೆಗೆ ಹೊರ ಹಾಕಲಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನ್ಯಾಯ ಮಂಡಳಿ ನೀರನ್ನು ಹಂಚಿ ತೀರ್ಪು ಪ್ರಕಟಿಸಲಿದ್ದು ಭಾರೀ ಕುತೂಹಲ ಮೂಡಿಸಿದೆ. ತೀರ್ಪಿನ ಕುರಿತಾಗಿ ಧಾರವಾಡ ಭಾಗದ ರೈತ ಹೋರಾಟಗಾರರು ಕಾತರರಾಗಿದ್ದಾರೆ.
ಮಹದಾಯಿಯಲ್ಲಿಯ 200 ಟಿಎಂಸಿ ಅಡಿ ನೀರಿನಲ್ಲಿ ಕೇವಲ 9 ಟಿಎಂಸಿ ಅಡಿ ನೀರನ್ನು ಗೋವಾ ಬಳಸಿಕೊಳ್ಳುತ್ತಿದೆ. ಇನ್ನುಳಿದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಕರ್ನಾಟಕದಲ್ಲಿ ಹರಿಯುವ 45 ಟಿಎಂಸಿ ಅಡಿ ನೀರಿನ ಪೈಕಿ ನಾವು 14.98 ಟಿಎಂಸಿ ಅಡಿ ನೀರನ್ನು ಕೇಳುತ್ತಿದ್ದೇವೆ ಎಂದು ಕರ್ನಾಟಕ ವಾದ ಮಂಡನೆ ಮಾಡಿತ್ತು.
ನಮ್ಮ ಪಾಲು ಸಿಗುವ ವಿಶ್ವಾಸ ; ಸಿಎಂ
ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ನಮ್ಮ ಪಾಲು ಸಿಗಬೇಕಲ್ಲ. ಪಾಲು ಸಿಗುವ ವಿಶ್ವಾಸವಿದೆ. ತೀರ್ಪಿನಲ್ಲಿ ಅನ್ಯಾಯವಾದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.