Advertisement
ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ರಾಜಕೀಯ ಪ್ರತಿಷ್ಠೆ, ಲಾಭ-ನಷ್ಟದ ಲೆಕ್ಕಾಚಾರದ ಸುಳಿಗೆ ಸಿಲುಕಿ ನಲುಗುವಂತಾಗಿದೆ. ಚುನಾವಣೆಗಳು ಬಂದಾಗಲೊಮ್ಮೆ ಆಸೆ ಗರಿಗೆದರುತ್ತಿದೆಯಾದರೂ, ಯೋಜನೆಯಡಿ ಹನಿ ನೀರು ದೊರೆಯದೆ ಜನ ಕಣ್ಣೀರಿಡುವಂತಾಗಿದೆ.
Related Articles
Advertisement
ಮಹದಾಯಿ ನೀರು ಹಂಚಿಕೆ ನ್ಯಾಯಾಧಿಕರಣದಿಂದಲೇ ಇತ್ಯರ್ಥವಾಗಲಿ ಎಂಬ ಗೋವಾದ ಪಟ್ಟಿನಿಂದ, ಕೇಂದ್ರ ಸರಕಾರ 2010ರಲ್ಲಿ ನ್ಯಾ|ಜೆ.ಎಂ.ಪಾಂಚಾಲ ನೇತೃತ್ವದಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸಿತ್ತು. ಈ ನ್ಯಾಯಾ ಧಿಕರಣ 2018ರ ಆಗಸ್ಟ್ 14ರಂದು ತೀರ್ಪು ನೀಡಿ, ಕರ್ನಾಟಕಕ್ಕೆ ಒಟ್ಟಾರೆ 13.07 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು. ಗೋವಾ ಅದಕ್ಕೂ ಕೊಂಕು ತೆಗೆದಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ ಜಾವಡೇಕರ್ ಅವರು 2019ರ ಅಕ್ಟೋಬರ್ 17ರಂದು ಕಳಸಾ-ಬಂಡೂರಿ ನಾಲಾ ಯೋಜನೆ ಕುಡಿಯುವ ನೀರಿನ ಉದ್ದೇಶದ್ದಾಗಿದ್ದು, ಇದಕ್ಕೆ ಪರಿಸರ ಇಲಾಖೆ ಅನುಮತಿ ಅಗತ್ಯವಿಲ್ಲ ಎಂಬ ಪತ್ರ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ತೋರಿದ ಗೋವಾ, ಕೇಂದ್ರದ ಮೇಲೆ ಒತ್ತಡ ತಂದು ಬುಧವಾರ (ಡಿ.18) ಒಪ್ಪಿಗೆ ತಡೆಯೊಡ್ಡುವಂತೆ ಮಾಡಿದೆ.
ಮಹದಾಯಿ ವಿಚಾರದಲ್ಲಿ ಎನ್‌ಡಿಎ ಸರಕಾರ ಎರಡು ಬಾರಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದರೆ, ಈ ಹಿಂದೆ ಗೋವಾದಲ್ಲಿನ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕರ್ನಾಟಕಕ್ಕೆ ಮಹದಾಯಿ ಹನಿ ನೀರು ನೀಡುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ರಾಜಕೀಯ ಪ್ರತಿಷ್ಠೆ, ಲಾಭ-ನಷ್ಟಕ್ಕೆ ಸಿಲುಕಿದ ಮಹದಾಯಿ ಹಲವು ದಶಕಗಳಿಂದ ನರಳುತ್ತಿದೆ. ಮಹದಾಯಿ, ಕಳಸಾ ಬಂಡೂರಿ ಹೋರಾಟ ಮಾಡಿದವರಲ್ಲಿ ಅನೇಕರು ಅಧಿಕಾರದಲ್ಲಿದ್ದಾರೆ. ಆದರೆ ಸತತ ಮೂರ್‍ನಾಲ್ಕು ವರ್ಷಗಳಿಂದ ಹೋರಾಟ ಮಾಡಿ, ಲಾಠಿ ಏಟು ತಿಂದು, ಜೈಲು ಸೇರಿ, ಕೋರ್ಟ್‌ಗೆ ಅಲೆದಾಡುತ್ತಿರುವ ರೈತರು, ಹೋರಾಟಗಾರರು ರಾಜಕೀಯ ಚದುರಂಗದಾಟದಿಂದ ಭ್ರಮನಿರಸನಗೊಂಡಿದ್ದಾರೆ.
ರಾಜಕೀಯ ಪ್ರತಿಷ್ಠೆ, ಲಾಭ-ನಷ್ಟ ಬದಿಗಿರಿಸಿ, ರಾಜ್ಯದ ಹಿತ, ಕುಡಿಯುಲು ಹಾಗೂ ಕೃಷಿಗೆ ನೀರೊದಗಿಸಲು ಸಂಘಟಿತ ಯತ್ನ ತೋರಬೇಕಿದೆ.
ಕೇಂದ್ರದಿಂದ ಅಧಿಸೂಚನೆ ಹೊರಡಿಸಲು, ಕೇಂದ್ರ ನೀಡಿದ ಒಪ್ಪಿಗೆ ಮುಂದುವರಿಸಲು ಒತ್ತಡದ ಮೂಲಕ, ರಾಜ್ಯದ ರೈತರು ಹಾಗೂ ಜನರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ.