Advertisement
ಮಹದಾಯಿ ನೀರು ವಿಚಾರವಾಗಿ ಕರ್ನಾಟಕ ಹಾಗೂ ಗೋವಾ ನಡುವೆ ಹಲವು ದಶಕಗಳ ವಿವಾದವಿತ್ತು. ನ್ಯಾ| ಜೆ.ಎಂ.ಪಾಂಚಾಲ ನೇತೃತ್ವದ ನ್ಯಾಯಾಧಿಕರಣ ನೀರು ಹಂಚಿಕೆ ತೀರ್ಪು ನೀಡಿದೆ. ಈ ಬಗ್ಗೆ ಕರ್ನಾಟಕ ಸುಪ್ರೀಂಕೋರ್ಟ್‌ಗೆ ಆಕ್ಷೇಪ ಅರ್ಜಿ ಸಲ್ಲಿಸಿದೆಯಾದರೂ ಹಂಚಿಕೆಯಾದ ನೀರು ಬಳಕೆಗೆ ಯಾವುದೇ ಅಡ್ಡಿ ಇಲ್ಲ.
Related Articles
Advertisement
ಹಂಚಿಕೆಯಾದ ನೀರು ಎಷ್ಟು?: 2010ರಲ್ಲಿ ರಚನೆಗೊಂಡಿದ್ದ ನ್ಯಾ| ಜೆ.ಎಂ.ಪಾಂಚಾಲ ನೇತೃತ್ವದ ಮಹದಾಯಿ ನ್ಯಾಯಾಧಿಕರಣ ಸುಮಾರು 8 ವರ್ಷಗಳ ನಂತರ ಅಂದರೆ, 2018ರ ಆಗಸ್ಟ್‌ನಲ್ಲಿ ಮಹದಾಯಿ ನದಿ ನೀರು ಹಂಚಿಕೆ ತೀರ್ಪು ನೀಡಿತ್ತು. ನ್ಯಾಯಾಧಿಕರಣ ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು.
ಇದರಲ್ಲಿ 5.5 ಟಿಎಂಸಿ ಅಡಿ ನೀರು ಮುಂಬೈ ಕರ್ನಾಟಕ ಭಾಗಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ, 8.2 ಟಿಎಂಸಿ ಅಡಿ ನೀರು ವಿದ್ಯುತ್ ಉತ್ಪಾದನೆಗೆಂದು ಹಂಚಿಕೆ ಮಾಡಿತ್ತು. ಕಳಸಾದಿಂದ 1.12 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ, ಗೋವಾಕ್ಕೆ 24 ಟಿಎಂಸಿ ಅಡಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ.
ರಾಜ್ಯ ಸರ್ಕಾರದ ಜವಾಬ್ದಾರಿ: ಮಹದಾಯಿ ನ್ಯಾಯಾಧಿಕರಣದ ತೀರ್ಪಿನಂತೆ ನೀರು ಬಳಕೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಕಾಮಗಾರಿ ಕೈಗೊಳ್ಳುವ ಮಹತ್ವದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಲಿದೆ. ಕಳಸಾ ಕೆನಾಲ್‌ಗೆ ಡ್ಯಾಂ ನಿರ್ಮಾಣ, ಬಂಡೂರಿ ನಾಲಾದಿಂದ ನೀರು ಪಡೆಯಲು ಅಗತ್ಯ ಕಾಮಗಾರಿ ಆರಂಭಿಸುವುದು ಸೇರಿದಂತೆ ಹಲವು ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ.
ಕಾಲಮಿತಿಯಲ್ಲಿ ಕಾಮಗಾರಿ ಕೈಗೊಂಡರೂ ಇದು ಪೂರ್ಣಗೊಳ್ಳಲು ಕನಿಷ್ಠ ಒಂದೂವರೆಯಿಂದ ಎರಡು ವರ್ಷ ಬೇಕು ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಿದರೂ, ರಾಜ್ಯದಲ್ಲಿನ ಸದ್ಯದ ರಾಜಕೀಯ ಅಸ್ಥಿರತೆಯಲ್ಲಿ ಸರ್ಕಾರ ಯಾವ ರೀತಿ ಈ ಕಾಮಗಾರಿಗೆ ಆದ್ಯತೆ ನೀಡಲಿದೆ ಎಂಬ ಪ್ರಶ್ನೆ ಕಾಡತೊಡಗಿದೆ.
ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಮುಂದಾಗಿರುವುದು ಮಹತ್ವದ ಹೆಜ್ಜೆ. ಬಾಗಲಕೋಟೆ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಮಹದಾಯಿ ನೀರು ಪ್ರಯೋಜನಕಾರಿ ಆಗಲಿದೆ. ಅಧಿಸೂಚನೆ ಹೊರಬಿದ್ದ ನಂತರ ರಾಜ್ಯ ಸರ್ಕಾರ ವಿಳಂಬ ತೋರದೆ ಕೂಡಲೇ ಯುಧ್ದೋಪಾದಿಯಲ್ಲಿ ಕಾಮಗಾರಿ ಕೈಗೊಂಡು ನೀರು ಬಳಕೆಗೆ ಮುಂದಾಗಬೇಕು. -ಸಂಗಮೇಶ ನಿರಾಣಿ, ಸಂಚಾಲಕ, ಉಕ ಸಮಗ್ರ ನೀರಾವರಿ ಹೋರಾಟ ಸಮಿತಿ ಮಹದಾಯಿ ಕುರಿತಾಗಿ ಕೇಂದ್ರ ಅಧಿಸೂಚನೆ ಹೊರಡಿಸಲಿದೆ ಎಂಬ ಸುಳಿವು ಸಿಕ್ಕಿದೆ. ನ್ಯಾಯಾಧಿಕರಣ 13.5ಟಿಎಂಸಿ ಅಡಿ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದರೂ ವಾಸ್ತವಿಕವಾಗಿ ನಮಗೆ ಸಿಗುವ ನೀರು 3.9 ಟಿಎಂಸಿ ಅಡಿಯಷ್ಟು ಮಾತ್ರ. ಇಷ್ಟು ನೀರಾದರೂ ನವಿಲುತೀರ್ಥ ಜಲಾಶಯಕ್ಕೆ ಸೇರಿದರೆ ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧ ಕಡೆ ಕುಡಿಯುವ ನೀರಿಗೆ ಬಳಕೆಯಾಗುತ್ತಿದ್ದ ಜಲಾಶಯದಲ್ಲಿನ ನೀರು ಕೃಷಿ ಬಳಕೆಗೆ ಸಿಗುವಂತಾಗಲಿದೆ.
-ಶಂಕರ ಅಂಬಲಿ, ಮಹದಾಯಿ ಹೋರಾಟಗಾರ * ಅಮರೇಗೌಡ ಗೋನವಾರ