Advertisement
ಧರಣಿ ವಾಪಸ್ ಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನವಿಗೆ ಹೋರಾಟಗಾರರು ಸ್ಪಂದಿಸದೆ ಇದ್ದರೂ ಬುಧವಾರ ಬೆಳಗ್ಗೆ ಪಾದಯಾತ್ರೆ ಮೂಲಕ ರಾಜಭವನ, ಮುಖ್ಯಮಂತ್ರಿಗಳ ಕಚೇರಿ, ಚುನಾವಣ ಆಯೋಗ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಬುಧವಾರದ ಪಾದಯಾತ್ರೆ ಕುರಿತು ರೈತ ಮುಖಂಡ ವೀರೇಶ್ ಸೊರಬದಮಠ ಮಾಹಿತಿ ನೀಡಿದರು.
Related Articles
Advertisement
ಮತ್ತೂಂದೆಡೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರನಟರಾದ ಚೇತನ್, ನೆನಪಿರಲಿ ಪ್ರೇಮ್, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಸೇರಿದಂತೆ ಚಿತ್ರರಂಗದ ಹಲವರು, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜ್ಯಕ್ಕೆ ಕೂಡಲೇ ಮಹಾದಾಯಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಶ್ರೀರಾಮಸೇನೆ ಸಹಿತ ಹಲವು ಸಂಘಟನೆಗಳ ಪ್ರಮುಖರು ಆಗ್ರಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕೈ ನಾಯಕರ ವಿರುದ್ಧ ಬಿಎಸ್‌ವೈ ಆಕ್ರೋಶ: ಮಹಾದಾಯಿ ವಿವಾದ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ನಡವಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ಮಹಾದಾಯಿ ಹೋರಾಟಗಾರರನ್ನು ಭೇಟಿ ಮಾಡಿದ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ವಿವಾದ ಶಮನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲಿನ ಮುಖ್ಯಮಂತ್ರಿಗಳು ಮಾತುಕತೆಗೆ ಒಪ್ಪಿದರೂ ಗೋವಾ ಕಾಂಗ್ರೆಸ್ ನಾಯಕರಿಗೆ ಹೇಳಿ ಪ್ರತಿಭಟನೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಹೀಗಾಗಿ ಮಾತುಕತೆಗೆ ಹಿನ್ನಡೆಯಾಗಿದೆ ಎಂದು ಆಪಾದಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ: ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿರುವ ರೀತಿಯಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲು ಬಿಜೆಪಿ ಕೋರ್‌ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ರಾಜಕೀಯವಾಗಿಯೇ ಕಾಂಗ್ರೆಸ್‌ಗೆ ತಿರುಗೇಟು ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ ಕಾಂಗ್ರೆಸ್‌ನ ದ್ವಿಮುಖ ನೀತಿ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ, ರಾಜ್ಯದ ಜನತೆಯ ಹಿತಾಸಕ್ತಿ ಕಾಪಾಡಲು ಬದ್ಧ ಎಂಬ ಬಗ್ಗೆ ಚರ್ಚೆ ನಡೆಸಿದೆ.ಪರೀಕ್ಷೆಗಳು ಮುಂದೂಡಿಕೆ: ಬಂದ್ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಕರ್ನಾಟಕ ರಾಜ್ಯ ಕಾನೂನು ವಿವಿ ಪರೀಕ್ಷೆಗಳನ್ನು ಡಿ.31ಕ್ಕೆ ಮುಂದೂಡಲಾಗಿದೆ. ಇನ್ನು ಕವಿವಿ 3ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಜ. 7ಕ್ಕೆ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪರೀಕ್ಷೆಗಳನ್ನು ಡಿ. 29 ಮತ್ತು ಜ. 8ರಂದು ನಡೆಸಲಾಗುತ್ತದೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಬುಧವಾರದ ಬದಲಿಗೆ ಸ್ನಾತಕ ಪದವಿ (ಯುಜಿ) ಪರೀಕ್ಷೆಗಳನ್ನು ಡಿ. 28ರಂದು ಹಾಗೂ ಸ್ನಾತಕೋತ್ತರ ಪದವಿ (ಪಿಜಿ) ಪರೀಕ್ಷೆಗಳನ್ನು ಡಿ. 2ರಂದು ನಡೆಸಲಾಗುತ್ತದೆ. ಇಂದು “ಉತ್ತರ’ ಬಂದ್
ಮಹಾದಾಯಿ ವಿವಾದ ಸಂಬಂಧ ಬುಧವಾರ ಉ. ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ಗೆ ನೂರಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಬೆಂಬಲ ನೀಡಿವೆ. ಮುಂಜಾಗ್ರತೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಅಕ್ಕಮಹಾದೇವಿ ವಿವಿ, ಕವಿವಿ, ಕಾನೂನು ವಿವಿ ಹಾಗೂ ವಿಟಿಯು ಪರೀಕ್ಷೆ ಮುಂದೂಡಲಾಗಿದೆ. ಮಹಾದಾಯಿ ವ್ಯಾಪ್ತಿಯ ಧಾರವಾಡ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಂದ್ ನಡೆಯಲಿದೆ.