Advertisement

ಮಹದಾಯಿ ಹೋರಾಟಗಾರರೇ ಜೋಶಿ ಸೋಲಿಸ್ತಾರೆ

11:44 AM Apr 21, 2019 | pallavi |

ಧಾರವಾಡ: ಮಹದಾಯಿ ಯೋಜನೆ ಜಾರಿಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅಡ್ಡಗಾಲು ಹಾಕಿದ್ದು, ಅವರ ಈ ತಪ್ಪಿಗಾಗಿ ಕ್ಷೇತ್ರದ ಜನ ಮತ್ತು ಮಹದಾಯಿ ಹೋರಾಟಗಾರರು ಅವರನ್ನು ಚುನಾವಣೆಯಲ್ಲಿ ಸೋಲಿಸುವುದು ನಿಶ್ಚಿತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ಕಳಸಾ-ಬಂಡೂರಿ, ಮಹದಾಯಿ ನಾಲಾ ಜೋಡಣೆ ವಿಷಯದಲ್ಲಿ ಜೋಶಿ ಅವರು ಸುಳ್ಳು ಹೇಳುತ್ತಾ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರ ಸರಕಾರದ ಮೇಲೆ ಯಾವುದೇ ರೀತಿ ಒತ್ತಡ ತರುವ ಕೆಲಸ ಮಾಡಲಿಲ್ಲ. ಈಗ ನ್ಯಾಯಾಧೀಕರಣ ತೀರ್ಪು ನೀಡಿದ ಬಳಿಕವೂ ನೀರು ಬಳಕೆ ಮಾಡಲು ಕೇಂದ್ರ ಅಧಿಸೂಚನೆ ಹೊರಡಿಸದೇ ಇರುವುದಕ್ಕೆ ಜೋಶಿ ಅವರೇ ಕಾರಣ. ಮಹದಾಯಿ ವ್ಯಾಪ್ತಿಗೆ ಬರುವ
ನಾಲ್ಕು ಜಿಲ್ಲೆಗಳ ಸಂಸದರ ಕೊಡುಗೆ ಏನಿಲ್ಲ. ಈ ಸತ್ಯ ಅರಿತಿರುವ ಮಹದಾಯಿ ಹೋರಾಟಗಾರರು ಮತ್ತು ಜನರು ಜೋಶಿ ವಿರುದ್ಧ ಈ ಚುನಾವಣೆಯಲ್ಲಿ ಮತ ಹಾಕಲಿದ್ದಾರೆ ಎಂದರು.

ಕಳೆದ 20 ವರ್ಷಗಳಿಂದ ಹು-ಧಾ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಿಂದ ಅವಳಿನಗರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಬಿಜೆಪಿ ಆಡಳಿತದ ಕಾರ್ಯವೈಖರಿಯಿಂದ ಜನ ಬೇಸತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸಿಎಂ ಸೂಚನೆ: ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಲೇಬೇಕು ಎಂದು ಸಿಎಂ ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ದಿಸೆಯಲ್ಲಿ ಜೆಡಿಎಸ್‌ ನಾಯಕರು ಗಂಭೀರವಾಗಿ ಪರಿಗಣಿಸಿ, ಬೂತ್‌ ಮಟ್ಟದಲ್ಲಿ ಪ್ರಚಾರ ನಡೆಸಿದ್ದೇವೆ. ಜೆಡಿಎಸ್‌ ಬೆಂಬಲದಿಂದ 1ರಿಂದ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ವಿನಯ ಕುಲಕರ್ಣಿ ಆಯ್ಕೆಯಾಗಲಿದ್ದಾರೆ. ಅವರ ಗೆಲುವಿನಲ್ಲಿ ಜೆಡಿಎಸ್‌ ಬಹುದೊಡ್ಡ ಪಾತ್ರ ವಹಿಸಲಿದೆ ಎಂದರು.

ಸಿಎಂ ಕುಮಾರಸ್ವಾಮಿ ಅವರ ತಾಯಿ ಎಂದಿಗೂ ರಾಜಕಾರಣಕ್ಕೆ ಬರಲ್ಲ. ಆ ಮಹಾತಾಯಿ ಬಗ್ಗೆ ಶೆಟ್ಟರ ಮಾತನಾಡಿದ್ದಾರೆ ಅಂತ ಶೆಟ್ಟರ ತಾಯಿ ಬಗ್ಗೆ ನಾವೂ ಮಾತನಾಡಲು ಆಗಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ ಎಂದು ತಿಳಿಸಿದರು.

Advertisement

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕೊಡುಗೆ ಏನಿಲ್ಲ. ಬರೀ ಬೇರೊಬ್ಬರ ಅಲೆಯಿಂದ ಆರಿಸಿ ಬಂದಿದ್ದಾರೆ ಹೊರತು ತಮ್ಮ ಸ್ವಯಂ ಬಲದಿಂದ ಅಲ್ಲ. ಧರ್ಮಗಳ ನಡುವೆ ಒಡಕು ತಂದು ಅದರಲ್ಲಿ ರಾಜಕಾರಣ ಮಾಡುತ್ತಾ ಬಂದಿರುವ ಜೋಶಿ ಅವರಿಗೆ ಈ ಬಾರಿ ಯಾವುದೇ ಅಲೆ ಇಲ್ಲವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next