ಪಣಜಿ: ಕಳಸಾ-ಬಂಡೂರಿ ಅಣೆಕಟ್ಟು ಯೋಜನೆ ಕುರಿತು ಕರ್ನಾಟಕ ಸಲ್ಲಿಸಿದ ಡಿಪಿಆರ್‌ಗೆ ಅನುಮತಿ ದೊರೆತಂದಿನಿಂದ ಗೋವಾ ಸರಕಾರಕ್ಕೆ ನಿದ್ದೆ ಹತ್ತಿಲ್ಲ. ಪ್ರತತೀ ದಿನವೂ ಮಹದಾಯಿ ವಿಚಾರದಲ್ಲಿ ಒಂದಿಲ್ಲೊಂದು ಅಪಸ್ವರ ಎತ್ತುತ್ತಲೇ ಇದೆ. ಅದರ ಮುಂದಿನ ಭಾಗವಾಗಿ ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಗೋವಾ ಸರಕಾರ ಮುಂದಾಗಿದೆ.
ಬುಧವಾರ ರಾತ್ರಿ 7.30ಕ್ಕೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ನಿಯೋಗವು ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮಹದಾಯಿ ವಿಚಾರದ ಕುರಿತು ಮಾತುಕತೆ ನಡೆಸಲಿದೆ. ಈ ನಿಯೋಗದಲ್ಲಿ ಸಿಎಂ ಸಾವಂತ್ ಅವರೊಂದಿಗೆ ಶ್ರೀಪಾದ್ ನಾಯ್ಕ, ರಾಮಕೃಷ್ಣ ಧವಳೀಕರ್ ಮತ್ತು ವಿನಯ್ ತೆಂಡೂಲ್ಕರ್ ಅವರೂ ತೆರಳಲಿದ್ದಾರೆ. ಕರ್ನಾಟಕದ ವಿಸ್ತೃತ ಯೋಜನ ವರದಿ(ಡಿಪಿಆರ್)ಗೆ ನೀಡಿರುವ ಅನುಮತಿಯನ್ನು ವಾಪಸ್ ಪಡೆಯುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.
ಇದೇ ವೇಳೆ ಮಂಗಳವಾರ ಪಣಜಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಮಹದಾಯಿ ಬಚಾವೋ ಅಭಿಯಾನದ ಸದಸ್ಯರೊಂದಿಗೆ ಸಭೆ ನಡೆಸಿದ್ದ ಸಿಎಂ ಸಾವಂತ್, ಕಳಸಾ-ಬಂಡೂರಿ ಅಣೆಕಟ್ಟು ಯೋಜನೆಯ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೇಳಿದ್ದರು.