Advertisement

Lok Sabha Elections; ರಾಜ್ಯದಲ್ಲಿ ಅಮಿತ್‌ ಶಾ ಭಾರೀ ಸಂಚಲನ

11:06 PM Apr 02, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆ ಅನಂತರ ಇದೇ ಮೊದಲ ಬಾರಿಗೆ ಒಂದು ದಿನದ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್‌ ಶಾ, ಬಿಜೆಪಿ-ಜೆಡಿಎಸ್‌ ನಾಯಕರ ಸಭೆ ನಡೆಸಿ ಸಮನ್ವಯ ಸಾಧಿಸಿದ್ದು ಒಂದೆಡೆಯಾದರೆ, ಬಿಕ್ಕಟ್ಟು ಉದ್ಭವಿಸಿದ್ದ 6 ಜಿಲ್ಲೆಗಳ ಕೋರ್‌ ಕಮಿಟಿ ಸಭೆ ನಡೆಸಿ ಅಸಮಾಧಾನ ಶಮನಗೊಳಿಸುವಲ್ಲೂ ಯಶಸ್ವಿಯಾದರು.

Advertisement

ಇನ್ನೊಂದೆಡೆ ವಿಕಸಿತ ಭಾರತಕ್ಕಾಗಿ ಅರಮನೆ ಮೈದಾನದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮೋದಿ ಸರಕಾರದ ಸಾಧನೆಗಳ ಬಣ್ಣನೆ, ಯುಪಿಎ ಅವಧಿಯ ಭ್ರಷ್ಟಾಚಾರದ ಖಂಡನೆ, ಕರ್ನಾಟಕಕ್ಕೆ ಯುಪಿಎ-ಎನ್‌ಡಿಎ ಸರಕಾರ ಕೊಟ್ಟ ಕೊಡುಗೆಗಳ ತುಲನೆಯ ಜತೆಗೆ ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧವೂ ವಾಗ್ಧಾಳಿ ನಡೆಸಿದರು.

ಮತ್ತೊಂದೆಡೆ ಡಾ| ಸಿ.ಎನ್‌. ಮಂಜುನಾಥ್‌ ಸ್ಪರ್ಧಿಸಿರುವ ಬೆಂಗಳೂರು ಗ್ರಾ.ಲೋಕಸಭಾ ಕ್ಷೇತ್ರದ ಚನ್ನಪಟ್ಟಣದ ಮಂಗಳಾವರ ಗ್ರಾಮದಿಂದ ರೋಡ್‌ ಶೋ ನಡೆಸಿದರು. ಒಟ್ಟಾರೆ ಒಂದು ದಿನ ಭೇಟಿಯಲ್ಲಿ ಎರಡು ಸಭೆ, ಒಂದು ಸಮಾವೇಶ ಮತ್ತು ರೋಡ್‌ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಬೇಸಗೆ ಬಂದರೆ ವಿದೇಶಕ್ಕೆ
ಹಾರುವ ರಾಹುಲ್‌ ಬಾಬಾ
ಪ್ರಧಾನಿ ಮೋದಿ ಅವರೊಂದಿಗೆ ನಾನೂ 23 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಕೋಟ್ಯಂತರ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಕೆಲಸ ಆಗಿದೆ. ಹುಡುಕಿದರೂ ಒಂದು ಪೈಸೆಯ ಭ್ರಷ್ಟಾಚಾರವೂ ಸಿಗುವುದಿಲ್ಲ. ಇದೊಂದು ಉತ್ತಮ ಉದಾಹರಣೆ. ಕಾಂಗ್ರೆಸಿನವರು ಹಾಗಲ್ಲ. ಅಧಿಕಾರ ಸಿಕ್ಕಾಗೆಲ್ಲಾ ಭ್ರಷ್ಟಾಚಾರ ಮಾತ್ರವಲ್ಲ, ಏನು ಬೇಕಿದ್ದರೂ ಮಾಡುತ್ತಾರೆ. ಆದರೆ ಜನರ ಸೇವೆ ಮಾಡಲು ಮನಸ್ಸು ಮಾತ್ರ ಮಾಡುವುದಿಲ್ಲ. ಮೋದಿ ಒಂದು ದಿನವೂ ರಜೆ ಪಡೆದಿಲ್ಲ ಎಂದರು. ರಾಹುಲ್‌ ಬಾಬಾ ಬೇಸಗೆ ಬಂದರೆ ಸಾಕು ವಿದೇಶಕ್ಕೆ ಹಾರಿ ಕಾಂಗ್ರೆಸ್‌ ಎಲ್ಲಿದೆ ಎಂದು ಹುಡುಕುತ್ತಾರೆ. ಇಂಡಿಯಾ ಒಕ್ಕೂಟದ ಸದಸ್ಯರು ಆಗಾಗ ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ಎನ್ನುತ್ತಾರೆ. ಏಕೆ? ಏನಾಗಿದೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ? ಭ್ರಷ್ಟಾಚಾರಿಗಳನ್ನು ಉಳಿಸಬೇಕಾ? ನಿಮ್ಮ ಸಂಸದರ ಮನೆಗಳಲ್ಲಿ ಕೋಟ್ಯಂತರ ರೂಪಾಯಿ ಸಿಗುತ್ತದೆಯಲ್ಲ, ಅದೆಲ್ಲ ಎಲ್ಲಿಂದ ಬಂತು? ಇವರನ್ನು ಜೈಲಿನಲ್ಲಿ ಇಡಬೇಕಾ? ಬೇಡವಾ? ಎಂದು ಅಮಿತ್‌ ಶಾ ಪ್ರಶ್ನೆ ಹಾಕಿದರು.

ಹೆದರಿ ರಾಮಮಂದಿರ ಉದ್ಘಾಟನೆ ನಿರಾಕರಿಸಿದರು
50 ವರ್ಷಗಳಿಂದ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ನಮ್ಮ ಸರಕಾರ 10 ವರ್ಷದಲ್ಲಿ ಪೂರೈಸಿದೆ. ಬಡವರು, ದಲಿತರು, ಅವಕಾಶ ವಂಚಿತರು, ಆದಿವಾಸಿಗಳಿಗೆ ಆದ್ಯತೆ ಕೊಟ್ಟಿದೆ. ಕಾಶ್ಮೀರದಲ್ಲಿ 370ನೇ ವಿಧಿ ತೆಗೆದರೆ ರಕ್ತದ ಕೋಡಿ ಹರಿಯುತ್ತದೆ ಎಂದು ಸಂಸತ್ತಿನಲ್ಲಿ ರಾಹುಲ್‌ ಎಚ್ಚರಿಸಿದ್ದರು. ಆದರೆ ಒಂದು ಕೂದಲೂ ಕೊಂಕದಂತೆ 370ನೇ ವಿಧಿಯನ್ನು ರದ್ದುಪಡಿಸಿದ್ದೇವೆ. ಸಿಎಎಯನ್ನು ವಿರೋಧಿಸಿದರು. ಅದನ್ನೂ ಜಾರಿಗೊಳಿಸಿದ್ದೇವೆ. ಯುಪಿಎ ಸರಕಾರ ಇದ್ದಾಗ ಎಲ್ಲೆಲ್ಲಿಂದಲೋ ಬಂದು ಬಾಂಬ್‌ ಎಸೆದು ಹೋಗುತ್ತಿದ್ದರು. ಇದನ್ನೆಲ್ಲ ಮರೆತಿರಬಹುದು. ಪಾಕಿಸ್ಥಾನದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಆತಂಕವಾದಿಗಳ ಹೆಡೆಮುರಿ ಕಟ್ಟಿದ್ದೇವೆ. ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸಿಗರನ್ನು ಆಹ್ವಾನಿಸಿದರೆ, ಮತಬ್ಯಾಂಕ್‌ಗೆ ಹೆದರಿ ಆಹ್ವಾನ ನಿರಾಕರಿಸಿದರು. ಭಾರತವೀಗ ಜಗತ್ತಿನ 5ನೇ ಪ್ರಬಲ ಆರ್ಥಿಕತೆಯ ರಾಷ್ಟ್ರವಾಗಿದೆ. ಇಷ್ಟೇ ಸಾಕಾ? 3ನೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಬೇಕಿದೆ. ಮಹಾನ್‌ ಭಾರತಕ್ಕಾಗಿ ಮೋದಿ ಗೆಲ್ಲಬೇಕು ಎಂದು ಅಮಿತ್‌ ಶಾ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next