Advertisement
ಮಹದಾಯಿ, ಕಳಸಾ-ಬಂಡೂರಿ ನಾಲಾ ವಿಚಾರವಾಗಿ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆಯಾದರೂ, ನಿರೀಕ್ಷಿತ ಫಲ ದೊರೆತಿಲ್ಲ. ಮಹದಾಯಿ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಪಕ್ಷಗಳ ಶಾಸಕರು, ಸಂಸದರು ಸಂಘಟಿತ ಧ್ವನಿ ಮೊಳಗಿಸಲು ಮುಂದಾಗಿರುವುದು, ಆಶಾದಾಯಕ ಬೆಳವಣಿಗೆಯಾಗಿದೆ.
Related Articles
Advertisement
ವಿಧಾನ ಪರಿಷತ್ತು ವಿಪಕ್ಷ ನಾಯಕ ಎಸ್. ಆರ್. ಪಾಟೀಲ, ಪರಿಷತ್ತು ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ, ಶ್ರೀನಿವಾಸ ಮಾನೆ ಪಾಲ್ಗೊಂಡಿದ್ದರು. ಎಸ್.ವಿ. ಸಂಕನೂರು, ಅರುಣ ಶಹಾಪುರ, ಹನುಮಂತ ನಿರಾಣಿ, ಎಸ್.ಎಲ್.
ಘೋಕ್ಲೃಕರ, ಆರ್.ಬಿ. ತಿಮ್ಮಾಪುರ, ವಿವೇಕರಾವ್ ಪಾಟೀಲ, ಸನೀಲಗೌಡ ಪಾಟೀಲ, ಮಹಾಂತೇಶ ಕೌಟಗಿಮಠ ಗೈರು ಹಾಜರಾಗಿದ್ದರು. ಮಹದಾಯಿ ವಿಷಯವಾಗಿ ಶಾಸಕರು ಹಾಗೂ ಸಂಸದರು ಪಕ್ಷಭೇದ ಮರೆತು ಒಗ್ಗಟ್ಟಿನ ಮಂತ್ರಕ್ಕೆ ಮುಂದಾಗಿದ್ದು, ಇದು ನಿರಂತರತೆ ಹೊಂದಬೇಕಾಗಿದೆ. ಮೇಲಿಂದ ಮೇಲೆ ಸಭೆಗಳು ನಡೆದು ಇನ್ನಷ್ಟು ಸ್ಪಷ್ಟತೆಗೆ ಬರಬೇಕಾಗಿದೆ. ಎಲ್ಲಿಯೂ ಪಕ್ಷ ರಾಜಕೀಯ, ರಾಜಕೀಯ ಲಾಭ-ನಷ್ಟ ಸೇರದೆ ರಾಜ್ಯ-ರೈತರ ಹಿತ ಮೊದಲು ಎಂಬುದು ಗಟ್ಟಿಗೊಳ್ಳಬೇಕಾಗಿದೆ. ಸಭೆಗೆ ಬಾರದಿರುವ ಜನಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ತಮ್ಮ ಹಾಜರಾತಿ ತೋರಿಸುವ ಮೂಲಕ ಸಂಘಟಿತ ಯತ್ನಕ್ಕೆ ಬಲ ಹೆಚ್ಚಿಸಬೇಕಾಗಿದೆ.
ಸೂಕ್ಷ್ಮ ವಿಚಾರ: ಮಹದಾಯಿ ಕೇವಲ ಸುಲಭವಾಗಿ ಇಲ್ಲವೆ ಜನಪ್ರತಿನಿಧಿಗಳ ಒಂದೆರಡು ಸಭೆಗಳಿಂದ ಇತ್ಯರ್ಥಗೊಳ್ಳುವುದಲ್ಲ ಎಂಬುದು ಸ್ಪಷ್ಟ. ಇದೊಂದು ಅಂತಾರಾಜ್ಯ ವಿವಾದವಾಗಿದೆ. ಕಾನೂನು ಸಮರವೂ ಚಾಲ್ತಿಯಲ್ಲಿರುವುದರಿಂದ ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಎಚ್ಚರಿಕೆ ಹೆಜ್ಜೆ ಇರಿಸಬೇಕಾಗಿದೆ. ಸಮಯಾವಕಾಶವು ಅಗತ್ಯವಾಗಿದೆ ಎಂಬುದು ಹಲರ ಅಭಿಪ್ರಾಯ.
ಹುಬ್ಬಳ್ಳಿಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚು ನಡೆದ ಚರ್ಚೆಯಲ್ಲಿ ಎಲ್ಲಿಯೂ ಪಕ್ಷ ರಾಜಕೀಯ ಸುಳಿದಾಟ, ಪರಸ್ಪರ ಕಾಲೆಳೆಯುವ ಯತ್ನಗಳು ನಡೆಯದೆ, ಮುಕ್ತ ಮನಸ್ಸಿನೊಂದಿಗೆ ಮಹದಾಯಿಗೆ ತಾರ್ಕಿಕ ಅಂತ್ಯ ಕಾಣಿಸುವುದು ಹೇಗೆ ಎಂಬುದರ ಬಗ್ಗೆಯೇ ಚರ್ಚೆ ನಡೆಯಿತು. ಮೂರು ಪಕ್ಷಗಳ ಜನಪ್ರತಿನಿಧಿಗಳ ಒಟ್ಟು ಆಶಯ ಹೇಗಾದರೂ ಮಾಡಿ ಮಹದಾಯಿ ನೀರಿನ ಪಾಲು ಪಡೆಯುವುದಾಗಿತ್ತು ಎಂದು ಹೇಳಲಾಗುತ್ತಿದೆ.
ಮುಖ್ಯವಾಗಿ ಕಾನೂನು ಹಾಗೂ ತಾಂತ್ರಿಕ ವಿಚಾರವಾಗಿ ಏನೆಲ್ಲಾ ಹೋರಾಟಕ್ಕೆ ಮುಂದಾಗಬೇಕು. ಹಿಂದಿನ ಕೆಲವೊಂದು ಲೋಪಗಳನ್ನು ಹೇಗೆ ಸರಿಪಡಿಸಿ, ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಯಾವ ಹೆಜ್ಜೆಗಳನ್ನಿರಿಸಬೇಕೆಂದು ಕಾನೂನು ತಜ್ಞರ ಸ್ಪಷ್ಟ ಸಲಹೆ ಪಡೆಯುವ ಬಗ್ಗೆಯೇ ಹೆಚ್ಚು ಒತ್ತು ನೀಡಲಾಯಿತು. ವಿಷಯ ಸೂಕ್ಷ್ಮವಾಗಿದ್ದರಿಂದ, ಕೇಂದ್ರಕ್ಕೆ ಮನವರಿಕೆ ಹಾಗೂ ರಾಜ್ಯದ ಹಿತಕ್ಕೆ ಪೂರಕ ಯತ್ನಗಳಿಗೆ ಒಂದಿಷ್ಟು ಕಾಲಾವಕಾಶದ ಅಗತ್ಯ ಇದೆ ಎಂಬುದಕ್ಕೆ ಸಭೆಯ ಹಾಜರಿದ್ದ ಎಲ್ಲ ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.
ಮಹದಾಯಿ ವಿಚಾರದಲ್ಲಿ ಸಂಘಟಿತ ಧ್ವನಿಯೊಂದಿಗೆ ಹಲವಾರು ಹೆಜ್ಜೆಗಳನ್ನು ಇರಿಸಬೇಕಾಗಿದೆ. ಅದಕ್ಕೆ ಪೂರಕವಾಗಿ ರಾಜಕೀಯವಾಗಿ ಒಗ್ಗಟ್ಟಿನ ನಿಲುವಿನ ಮೊದಲ ಹೆಜ್ಜೆ ಇರಿಸಿಯಾಗಿದೆ.
-ಅಮರೇಗೌಡ ಗೋನವಾರ