Advertisement

‘ಮಹಾಭಾರತ’ ಧಾರವಾಹಿಯ ನಟ ಸತೀಶ್ ಕೌಲ್ ಕೋವಿಡ್‍ ಸೋಂಕಿಗೆ ಬಲಿ

05:14 PM Apr 10, 2021 | Team Udayavani |

ಲುಧಿಯಾನ: ಕಿರುತೆರೆಯ ಹಾಗೂ ಬೆಳ್ಳಿ ತೆರೆಯಲ್ಲಿ ಮಿಂಚಿದ್ದ ಹಿರಿಯ ನಟ ಸತೀಶ್ ಕೌಲ್ ಇಂದು (ಏಪ್ರಿಲ್ 10) ನಿಧನರಾಗಿದ್ದಾರೆ. ಮಹಾಮಾರಿ ಕೋವಿಡ್‍-19 ಸೋಂಕಿಗೆ ಕೌಲ್ ಬಲಿಯಾಗಿದ್ದಾರೆ.

Advertisement

74 ವರ್ಷ ವಯಸ್ಸಿನ ಸತೀಶ್ ಅವರಿಗೆ ಕಳೆದ ಆರು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಪಾಸಿಟಿವ್ ಸೋಂಕು ತಗುಲಿರುವುದು ದೃಢ ಪಟ್ಟಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಸತೀಶ್ ಕೌಲ್ ಅವರ ಸಹೋದರಿ ಸತ್ಯದೇವಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಸತೀಶ್ ಅವರು ಅದ್ಬುತ ಕಲಾವಿದ. ಅವರ ಕಲಾತ್ಮಕ ಅಭಿನಯಕ್ಕೆ ಸಾಕ್ಷಿಯಾಗಿದ್ದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರವಾಹಿ. ಬಿ.ಆರ್.ಚೋಪ್ರಾ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಈ ಧಾರವಾಹಿಯಲ್ಲಿ ಸತೀಶ್ ಅವರು ಇಂದ್ರನ ಪಾತ್ರಕ್ಕೆ ಜೀವ ತುಂಬಿದ್ದರು.

‘ಸರಸ್ವತಿ ಇದ್ದ ಕಡೆ ಲಕ್ಷ್ಮೀ ನೆಲೆಸುವುದಿಲ್ಲ’ ಎನ್ನುವ ಮಾತು ಕಲೆಯನ್ನೇ ನಂಬಿಕೊಂಡಿದ್ದ ಸತೀಶ್ ಅವರ ಜೀವನದಲ್ಲಿ ಸತ್ಯವಾಗಿತ್ತು. ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಈ ನಟ ಕೊನೆಯ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುವಂತಾಯಿತು. ಕಳೆದ ವರ್ಷ ಔಷಧ ಖರಿದೀಸಲೂ ಇವರು ಪರಿತಪಿಸುವಂತಾಯಿತು. ಅಂದು ಇವರು ಚಿತ್ರರಂಗದ ನೆರವು ನಿರೀಕ್ಷಸಿದ್ದರು.

ಸತೀಶ್, 2011 ರಲ್ಲಿ ಪಂಜಾಬ್‍ನಿಂದ ಮುಂಬೈಗೆ ಬಂದು ಅಭಿನಯ ತರಬೇತಿ ಶಾಲೆ ತೆರೆದರು. ಆದರೆ, ಅದು ಕೈ ಹಿಡಿಯಲಿಲ್ಲ. ತಮ್ಮ ಹುಟ್ಟೂರಿನಲ್ಲಿ ಸ್ವಂತ ಮನೆ ಹೊಂದುವ ಕನಸು ಕಂಡಿದ್ದ ಸತೀಶ್, ಅದಕ್ಕಾಗಿ ಬಣ್ಣದ ಬದುಕು ನಂಬಿಕೊಂಡಿದ್ದರು. ಇಳಿವಯಸ್ಸಿನಲ್ಲಿಯೂ ಸಿನಿಮಾಗಳ ಅವಕಾಶಕ್ಕೆ ಎದುರು ನೋಡುತ್ತಿದ್ದರು. ನನ್ನಲ್ಲಿ ಅಭಿನಯದ ಕಿಚ್ಚು ಇನ್ನೂ ಇದೆ. ಯಾರಾದರೂ ಅವಕಾಶ ನೀಡಿದರೆ, ಅದು ಎಂತಹದೇ ಪಾತ್ರವಾಗಿದ್ದರೂ ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next