Advertisement
ಚೆನ್ನೈನಿಂದ 58 ಕಿ.ಮೀ. ದೂರದಲ್ಲಿ, ಕಾಂಚೀಪುರಂ ಜಿಲ್ಲೆಯಲ್ಲಿರುವ ಮಹಾಬಲಿಪುರಂ, ಪಲ್ಲವ ವಾಸ್ತು- ಶಿಲ್ಪಕಲೆಗಳ ತವರೂರು. ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಇಲ್ಲಿ ನೆಲೆ ನಿಂತಿದ್ದರಿಂದ ಈ ಸ್ಥಳಕ್ಕೆ “ಮಹಾಬಲಿಪುರಂ’ ಎಂಬ ಹೆಸರು ಬಂತು ಎನ್ನುತ್ತದೆ, ಪುರಾಣ. “ಮಹಾಮಲ್ಲ’ ಎಂಬ ಬಿರುದು ಹೊತ್ತ ಪಲ್ಲವ ದೊರೆ 1ನೇ ನರಸಿಂಹವರ್ಮನಿಂದಾಗಿಯೂ, ಈ ಹೆಸರು ಬಂದಿರಬಹುದು ಎನ್ನುತ್ತದೆ, ಇತಿಹಾಸ. ಮೊದಲ ಸಹಸ್ರಾಬ್ಧಿಯಿಂದಲೇ ರೋಮ್, ಚೀನಾಗಳ ಸಂಪರ್ಕ ಹೊಂದಿದ್ದ ಈ ರೇವುಪಟ್ಟಣ, 7- 8ನೇ ಶತಮಾನದಲ್ಲಿ ಉತ್ತುಂಗವನ್ನು ತಲುಪಿತ್ತು. ಇದೇ ವೇಳೆ, ಇಲ್ಲಿ ನಿರ್ಮಾಣವಾದ ಸುಮಾರು 40 ಶಿಲಾರಚನೆಗಳು, ಪಲ್ಲವರ ಆಳ್ವಿಕೆಯ ಸಮೃದ್ಧಿ ಧಾರ್ಮಿಕತೆ, ಕಲಾಪ್ರೇಮಗಳಿಗೆ ಸಾಕ್ಷಿಯಾಗಿ, ಈ ಕಾಲಕ್ಕೂ ವಿಸ್ಮಯಗಳಾಗಿವೆ.
Related Articles
Advertisement
ವರಾಹ- ಭೂದೇವಿಯ ಶೃಂಗಾರ: ವಿಶಾಲಬಂಡೆಯನ್ನು ಗುಹೆಯ ಹಾಗೆ ಕೊರೆದು ಮಾಡಿದ ದೇಗುಲಗಳು ಇಲ್ಲಿದ್ದು, ಅವುಗಳ ಎದುರಿಗೆ ಸಿಂಹಗಳ ತಲೆಯನ್ನು ಆಧರಿಸಿ ನಿಂತ ಕಂಬಗಳನ್ನು ಹೊಂದಿರುವ ಮುಖಮಂಟಪಗಳಿವೆ. ವರಾಹ ಮಂಟಪ, ತ್ರಿಮೂರ್ತಿ ಮಂಟಪ, ದುರ್ಗಾ ಮಂಟಪ, ಕೃಷ್ಣ ಮಂಟಪ, ಪಾಂಡವರ ಮಂಟಪಗಳು ಪ್ರಮುಖವಾದವು. ವರಾಹ ಮಂಟಪದಲ್ಲಿ, ಭೂದೇವಿಯನ್ನು ಹಿರಣ್ಯಾಕ್ಷನ ಸೆರೆಯಿಂದ ಪಾರುಮಾಡಿ, ಆಕೆಯನ್ನು ತೊಡೆಯ ಮೇಲೆ ಇರಿಸಿಕೊಂಡು ಧೀರನಂತೆ ನಿಂತಿರುವ ವರಾಹನ ವಿಗ್ರಹ ಆಕರ್ಷಕ. ವರಾಹ ತನ್ನ ಮೂತಿಯಿಂದ ಭೂದೇವಿಯ ಸ್ತನಗಳನ್ನು ಸ್ಪರ್ಶಿಸುತ್ತಿದ್ದರೆ, ಭೂದೇವಿ ಸ್ತ್ರೀ ಸಹಜ ನಾಚಿಕೆಯಿಂದ ತಲೆಯನ್ನು ಅರೆ ತಗ್ಗಿಸಿ ತನ್ನನ್ನು ರಕ್ಷಿಸಿದ ಪತಿಯನ್ನು ಪ್ರೇಮ ಕೃತಜ್ಞತೆಗಳಿಂದ ನೋಡುತ್ತಿದ್ದಾಳೆ. ಇಲ್ಲಿನ ಶಿಲ್ಪ ರಚನೆಗಳು, ಅಜಂತಾದ ಚಿತ್ರಗಳನ್ನು ನೆನಪಿಸುವಂತಿವೆ.
ಮಹಿಷನ ಸೋಲಿನ ಚಿತ್ರಣ: ಮಹಾಬಲಿಪುರಂನ ಮೇರುಕೃತಿಗಳೆಂದೇ ಕರೆಯಲ್ಪಡುವ ಮಹಿಷಾಸುರ ಮರ್ದಿನಿಯ ಹಾಗೂ ಅನಂತಶಯನನ ಭಿತ್ತಿಶಿಲ್ಪಗಳು ದುರ್ಗಾಮಂಟಪದಲ್ಲಿವೆ. ಕೋಣನ ತಲೆಯ ಮಹಾಕಾಯ ಮಹಿಷನು ಗದೆಯನ್ನು ತಿರುವುತ್ತಾ ಅಕ್ರಮಣ ಮಾಡಲು ಸಿದ್ಧನಾಗಿ ನಿಂತಿದ್ದಾನೆ. ಅವನಿಗೆದುರಾಗಿ, ಚಿಕ್ಕವಳಾದರೂ ರಾಕ್ಷಸನ ಗಾತ್ರದಿಂದ ಸ್ವಲ್ಪವೂ ಧೃತಿಗೆಡದೆ, ದೇವಿಯು ಸಿಂಹವಾಹನೆಯಾಗಿ, ವೀರಾವೇಶದಿಂದ ಧನುಸ್ಸನ್ನು ಹಿಡಿದು ರಣರಂಗದಲ್ಲಿ ಮುನ್ನುಗ್ಗುತ್ತಿದ್ದಾಳೆ. ದೇವಿಯ ಅನುಯಾಯಿಗಳು ಕುಬ್ಜರಾಗಿದ್ದರೂ ದೇವಿಯ ಹಿಂದೆ ಮುಂದೆ ಆತ್ಮವಿಶ್ವಾಸದಿಂದ ಹೋರಾಡುತ್ತಿದ್ದಾರೆ. ಯುದ್ಧವೆಂಬುದು ಆಟವೇನೋ ಎಂಬಂತೆ ಉತ್ಸಾಹದಲ್ಲಿ ನಲಿಯುತ್ತಿದ್ದಾರೆ. ಆದರೆ, ಮಹಿಷನ ಸೈನಿಕರು ದೈಹಿಕವಾಗಿ ಬಲಶಾಲಿಗಳಾಗಿದ್ದರೂ ಬಾಣದ ಮಳೆಗೆ ಹಿಂಜರಿಯುತ್ತಿರುವಂತೆ ತೋರಿಸಲಾಗಿದೆ.
ಕೃಷ್ಣನ ಸಾಹಸಗಳು…: ಕೃಷ್ಣಮಂಟಪದ ಗೋವರ್ಧನಗಿರಿಧಾರಿಯ ವಿಶಾಲಶಿಲ್ಪ ಅತ್ಯದ್ಭುತ. ಎಡ ಅಂಗೈಯಲ್ಲಿ ಪರ್ವತವನ್ನು ಎತ್ತಿ ಹಿಡಿದಿರುವ ಕಿಶೋರ ಕೃಷ್ಣನ ಸುತ್ತ ಗೋವುಗಳು, ಗೋಪ- ಗೋಪಿಯರು ನೆರೆದಿದ್ದಾರೆ. ಅವರೆಲ್ಲ ಬೆರಗಿನಿಂದ ಕೃಷ್ಣನ ಸಾಹಸವನ್ನು ನೋಡುತ್ತಿದ್ದಾರೆ. ಪರ್ವತದಡಿ ಆಶ್ರಯ ಪಡೆದವರಲ್ಲಿ, ತಲೆಯ ಮೇಲೆ ಗಡಿಗೆಯನ್ನಿಟ್ಟುಕೊಂಡಿರುವ ಗೋಪಿಕೆ, ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡಿರುವ ಗೋಪಾಲ, ಹಾಲು ಕರೆಯುತ್ತಾ ಇರುವ ಗೌಳಿ, ಗೋಪನೊಬ್ಬನ ಹೆಗಲ ಮೇಲೆ ಕೈಹಾಕಿ ನಿಂತಿರುವ ಬಲರಾಮ, ಕೊಳಲನೂದುತ್ತಾ ಇರುವ ಗೊಲ್ಲಬಾಲನಿಗೆ, ಅದನ್ನು ನಿಲ್ಲಿಸಲು ಹೇಳುತ್ತಾ ಇರುವ ಪುಟ್ಟ ಮಗುವಿನ ತಾಯಿ… ಇವುಗಳ ಚಿತ್ರಣ ಅನನ್ಯ.
ಪಾಶುಪತಾಸ್ತ್ರಕ್ಕೆ ಅರ್ಜುನನ ತಪಸ್ಸು: ಮಹಾಬಲಿಪುರಂನ ಶಿಲ್ಪಗಳಲ್ಲಿ ಅತಿ ಪ್ರಸಿದ್ಧವಾದದ್ದು 90 ಅಡಿ ಉದ್ದ, 43 ಅಡಿ ಅಗಲ ಹಾಗು 30 ಅಡಿ ಎತ್ತರದ ಬಂಡೆಯ ಮೇಲೆ ಕಡೆದಿರುವ ಗಂಗಾವತರಣದ ಶಿಲ್ಪ. ಕೆಲವರ ಪ್ರಕಾರ, ಅರ್ಜುನ ಪಾಶುಪತಾಸ್ತ್ರ ಗಳಿಸಲು ಶಿವನನ್ನು ಕುರಿತು ಮಾಡುತ್ತಾ ಇರುವ ತಪಸ್ಸು. ಕೃತಿಯ ವಿಷಯ ಏನೆಂದು ನಿರ್ಧರಿಸುವುದು ಕಷ್ಟವಾದರೂ, ಇದು ಅತ್ಯಂತ ನಯನ ಮನೋಹರ. ಶಿಲ್ಪಶಾಸ್ತ್ರವನ್ನು ಅಧ್ಯಯನಿಸುವವರಿಗೆ, ಇದೊಂದು ಅದ್ಭುತ ಪಾಠಶಾಲೆಯೇ ಸರಿ.
ಕೃಷ್ಣನ ಬೆಣ್ಣೆಮುದ್ದೆ!?: ಇಲ್ಲಿನ ತ್ರಿಮೂರ್ತಿ ಗುಹಾಲಯದ ಬಳಿ ಜಾರುಬಂಡೆಯ ಮೇಲೆ 6 ಮೀಟರ್ ಎತ್ತರ, 5 ಮೀಟರ್ ಅಗಲವಿರುವ ಬೃಹತ್ ಬಂಡೆಯೊಂದು ಕೇವಲ ಒಂದು ಮೀಟರ್ ತಳದ ಮೇಲೆ, ಇನ್ನೇನು ಉರುಳಿ ಬೀಳುವಂತೆ ಸಾವಿರಾರು ವರ್ಷಗಳಿಂದ ನಿಂತಿದೆ. ಜನ ಇದಕ್ಕೆ ಪ್ರೀತಿಯಿಂದ, “ಕೃಷ್ಣನ ಬೆಣ್ಣೆಮುದ್ದೆ’ ಎಂದು ಹೆಸರಿಟ್ಟಿದ್ದಾರೆ. ಮಹಾಬಲಿಪುರಂನ ಮಾನವ ನಿರ್ಮಿತ ಕಲಾದ್ಭುತಗಳಷ್ಟೇ, ಈ ಪ್ರಕೃತಿಯ ವಿಸ್ಮಯವೂ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ.
* ರಾಜೇಶ್ ಶ್ರೀವತ್ಸ, ಹೈದರಾಬಾದ್