ಮುಂಬಯಿ: ಅಧಿಕಾರ ವಹಿಸಿ ಒಂದು ತಿಂಗಳ ಬಳಿಕ ಸಂಪುಟ ವಿಸ್ತರಣೆ ಮಾಡಿದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ. ಕಾಂಗ್ರೆಸ್ ಶಾಸಕರು ಸಚಿವ ಸ್ಥಾನ ಸಿಗಲಿಲ್ಲವೆಂದು ತಕರಾರು ತೆಗೆದ ಬಳಿಕ, ಶಿವಸೇನೆಯ ಏಕೈಕ ಮುಸ್ಲಿಂ ಶಾಸಕ ಅಬ್ದುಲ್ ಸತ್ತಾರ್ ಸಂಪುಟ ದರ್ಜೆಯ ಸ್ಥಾನ ಸಿಗಲಿಲ್ಲ ಎಂದು ಮುನಿಸಿ ಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಹಲವು ವರದಿಗಳು ಹೇಳಿವೆ. ಆದರೆ ಶಿವಸೇನೆ ಈ ಅಂಶವನ್ನು ನಿರಾಕರಿಸಿದೆ.
ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನಲ್ಲಿದ್ದ ಅವರು ಆ ಪಕ್ಷಕ್ಕೆ ರಾಜೀನಾಮೆ ನೀಡಿ, ಶಿವಸೇನೆಗೆ ಸೇರ್ಪಡೆಯಾಗಿ ಔರಂಗಾಬಾದ್ ಜಿಲ್ಲೆಯ ಸಿಲ್ಲೋದ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ರಾಜೀನಾಮೆ ವರದಿ ನಿರಾಕರಿಸಿರುವ ಶಿವಸೇನೆ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ, ಸತ್ತಾರ್ ರಾಜೀನಾಮೆ ನೀಡಿಲ್ಲ ಮತ್ತು ನೀಡಿದರೆ ಸ್ವೀಕರಿಸುವುದೂ ಇಲ್ಲ ಎಂದಿದ್ದಾರೆ. ಪಕ್ಷದ ಮತ್ತೂಬ್ಬ ನಾಯಕ ಸಂಜಯ ರಾವತ್ ಮಾತನಾಡಿ, ಸತ್ತಾರ್ ರಾಜೀನಾಮೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ತಲುಪಿಯೇ ಇಲ್ಲ. ಇದೆಲ್ಲ ಆಧಾರ ರಹಿತ ವರದಿಗಳು ಎಂದಿದ್ದಾರೆ.
ಇನ್ನೊಂದೆಡೆ, ಸಚಿವ ಸ್ಥಾನ ಸಿಗಲಿಲ್ಲ ಎಂದು ಅತೃಪ್ತಿ ಗೊಂಡಿರುವ ಕಾಂಗ್ರೆಸ್ ಶಾಸಕ ಕೈಲಾಶ್ ಗೋರಂತ್ಯಾಲ್, ಪಕ್ಷದ ಹಲವು ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ತಾವು ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.
ವಿಳಂಬವಾಗಲಿದೆ: ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರಕಾರ ಕೆಲವು ಹೊಸ ಖಾತೆಗಳನ್ನು ಸೃಷ್ಟಿಸುವ ಇರಾದೆಯಲ್ಲಿದೆ. ಹೀಗಾಗಿ, ಪ್ರಮಾಣ ವಚನ ಸ್ವೀಕರಿಸಿರುವ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗಲಿದೆ ಎಂದು ಎನ್‌ಸಿಪಿ ಮುಖ್ಯ ವಕ್ತಾರ, ಸಚಿವ ನವಾಬ್ ಮಲಿಕ್ ಶನಿವಾರ ತಿಳಿಸಿದ್ದಾರೆ. ಸೋಮವಾರ ಈ ಬಗ್ಗೆ ಎಲ್ಲವೂ ನಿರ್ಧಾರವಾಗಲಿದೆ ಎಂದಿದ್ದಾರೆ.