Advertisement

ಹೇ ರುದ್ರ !

12:30 AM Mar 03, 2019 | |

ಗೀತ-ನೃತ್ಯಗಳಿಗೆ ಸೊಗಸಾಗಿ ಒದಗಿಬರಬಲ್ಲ ರಚನೆ; ಆದಿತಾಳದಲ್ಲಿ, ರಾಗಮಾಲಿಕೆಗಳ ರೂಪದಿಂದ ಹಾಡಿ, ಕುಣಿದು ಶಿವನನ್ನೂ ಸಹೃದಯಶಿವರನ್ನೂ ರಂಜಿಸಲು ವಿಪುಲಾವಕಾಶವಿರುವ ಸಾಂಪ್ರದಾಯಿಕ ಪ್ರಬಂಧ.

Advertisement

ಮತ್ತೂಮ್ಮೆ ಮಹಾಶಿವರಾತ್ರಿ ಬಂದಿದೆ. ಎಲ್ಲೆಡೆ ಶಿವಾರಾಧನೆಯ ಸಡಗರ. ಶಿವ ಎಂದರೆ ಯಾರು? ಅವನನ್ನು ಹೇಗೆ ಕಲ್ಪಿಸಿಕೊಳ್ಳಬೇಕು, ಹೇಗೆ ಆರಾಧಿಸಬೇಕೆಂಬುದನ್ನು ನಮ್ಮ  ಪ್ರಾಚೀನ ಋಷಿಗಳು ವಿವರಿಸಿದ್ದಾರೆ. ಇದಕ್ಕಾಗಿಯೇ ಆವಿಷ್ಕತವಾದದ್ದು  ಮಹಾನ್ಯಾಸ- ಲಘುನ್ಯಾಸ ಸಹಿತವಾದ  ರುದ್ರಾಧ್ಯಾಯ. ಇದರಲ್ಲಿ  ಶಿವಾರ್ಚನೆಯ ವಿಧಿ-ವಿಧಾನಗಳ  ಸವಿಸ್ತಾರ ನಿರೂಪಣೆ ಇದೆ. ಇದರಿಂದ ಶಿವಪೂಜೆಗೊಂದು ಶಿಸ್ತು, ಶಾಸ್ತ್ರೀಯತೆ ಒದಗಿಬಂದಿದೆ. ರುದ್ರಾಧ್ಯಾಯ ಯಜುರ್ವೇದಕ್ಕೆ ಸೇರಿದ್ದರೂ ಎಲ್ಲ ವೇದಗಳಿಗೂ ಸಮಾನವಾಗಿದೆ. ರುದ್ರಮಂತ್ರಗಳನ್ನು  ಶಿವಾರ್ಚನೆಯಲ್ಲಿ ಮಾತ್ರವಲ್ಲ ; ವಿಷ್ಣುಸಂಬಂಧಿ ಪೂಜೆಗಳಲ್ಲೂ ಪಠಿಸುತ್ತಾರೆ.      

    ರುದ್ರ ಎಂದರೆ  ಉಗ್ರರೂಪಿ. ಕೋಪ ಅಧಿಕವಾಗಿ ಹಾರಾಡುವನನ್ನು  ರೌದ್ರಾವತಾರ ತಾಳಿದ ಎಂದು ಹೇಳುವುದು ರೂಢಿಯಲ್ಲಿದೆ. ಇದು ಸಾಮಾನ್ಯ ಅರ್ಥವಾದರೂ ರುದ್ರ ಶಬ್ದಕ್ಕೆ ಶಾಸ್ತ್ರೀಯವಾದ ಅರ್ಥ ಬೇರೆಯೇ ಇದೆ.
ಜಗತ್ತಿನ ಅಳುವನ್ನು ತಡೆಯುವವನೇ ರುದ್ರ ! ರುದಂ ದ್ರಾವಯತಿ ಇತಿ ರುದ್ರಃ ಎಂಬುದು ಭಾಷ್ಯಕಾರರ ವಿವರಣೆ. 
ಅಳುತ್ತಲೇ ಹುಟ್ಟಿ ಅಳುತ್ತ- ಅಳಿಸುತ್ತ ಅಳಿಯುವ ನಾವು, ಅಳುವಿನ ವಿರುದ್ಧ ಹೋರಾಡುವ ಆತ್ಮಶಕ್ತಿಯನ್ನು ರುದ್ರನಿಂದ ಪಡೆಯಬೇಕೆಂಬುದು ರುದ್ರಾರ್ಚನೆಯ ಉದ್ದೇಶವೆನ್ನಬಹುದು.    

    ವರ್ಷಕ್ಕೊಮ್ಮೆ ಬರುವ  ಮಹಾಶಿವರಾತ್ರಿ ಶಿವಭಕ್ತರಿಗೆ ಅಪೂರ್ವ ಪರ್ವ. ಇದನ್ನು ವ್ರತವಾಗಿ ಆಚರಿಸುವವರಿ¨ªಾರೆ. ಹೃದಯದ ಕತ್ತಲೆಯನ್ನು ಕಳೆದುಕೊಂಡು ಬೆಳಕ(ಶಿವ)ನ್ನು  ತುಂಬಿಕೊಳ್ಳುವ ಅವಕಾಶ.   

     ಶಿವನಿಗೆ ಈಶ್ವರ, ಶಂಕರ, ಶಂಭು ಮುಂತಾದ ಸೌಮ್ಯನಾಮಗಳಿರುವಂತೆ ರುದ್ರ ಎಂಬ ಉಗ್ರ ನಾಮವೂ ಪ್ರಸಿದ್ಧವಾಗಿದೆ. ಆದರೆ  ರುದ್ರ ಎಂಬ ಶಬ್ದವನ್ನು ಕೇಳಿ ಬೆಚ್ಚಬೇಕಾಗಿಲ್ಲ. ರುದ್ರ ಎಂದರೆ ರೌದ್ರರೂಪವುಳ್ಳವನೆಂಬ ಅರ್ಥ ರೂಢಿಯಲ್ಲಿದೆಯಾದರೂ ಈ ಪದ ಮೂಲತಃ ಘೋರ, ಉಗ್ರ ಇತ್ಯಾದಿ ಅರ್ಥದಲ್ಲಿಲ್ಲ. 

Advertisement

    ರುದ್ರ ಎಂದರೆ ಉಗ್ರ ಎಂದಿಟ್ಟುಕೊಂಡರೂ ಸದಾ ಶಾಂತನಾಗಿರುವ ಶಿವ ಹಾಗೆ ರುದ್ರ (ಉಗ್ರ)ನಾಗುವ ಸಂದರ್ಭಗಳೇ ಬೇರೆ. ಶಿವನಿಗೆ ಘೋರ-ಅಘೋರ ರೂಪಗಳಿರುವುದು ರುದ್ರಾಧ್ಯಾಯದಲ್ಲೂ  ಉÇÉೇಖಗೊಂಡಿದೆ. 

    ಪ್ರಸ್ತುತ- ರುದ್ರ ಶಬ್ದಕ್ಕೆ ಪರಮಾತ್ಮನ ಜಗತ್ಕಾರುಣ್ಯವನ್ನು ಸಾರುವ ಅತ್ಯಂತ ಆಪ್ತವಾದ ಅರ್ಥವಿದೆ. 
     ರುದ್ರನು  ನಿರಾಕಾರ ಪರಬ್ರಹ್ಮಸ್ವರೂಪನೇ ಆಗಿದ್ದರೂ  ಕಾಲಕ್ರಮದಲ್ಲಿ ಅವನನ್ನು ವಿವಿಧ ಆಕಾರದಲ್ಲಿ ಅದರಲ್ಲೂ ವಿಶೇಷವಾಗಿ ಲಿಂಗರೂಪದಲ್ಲಿ ಪೂಜಿಸುವ ಪದ್ಧತಿ ಬೆಳೆದು ಬಂದಿರಬೇಕು. 

    ರುದ್ರ ಶಬ್ದಕ್ಕೆ ರುತ್‌ (ರೋಧಿಕಾ) ತದ್ವಾನ್‌ ರುದ್ರಃ -ಅಂದರೆ ಪಾಪಗಳನ್ನು ತಡೆಯುವವನು ಎಂಬ ಅರ್ಥವೂ ಇದೆ.  ಅಮಂಗಲವನ್ನು ದೂರಮಾಡುವವನು (ಅಶುಭದ್ರಾವಕ) ಮಹಾತೇಜಸ್ವಿ, ಜ್ಞಾನದಾಯಕ, ಓಂಕಾರಸ್ವರೂಪ, ವೇದಪ್ರತಿಪಾದ್ಯ  ಮುಂತಾದ ಅರ್ಥಗಳೂ ಇವೆ.  

    ಲೌಕಿಕವಾಗಿ ಹೇಳುವುದಾದರೆ- ರೌದ್ರವೇ (ಕೋಪತಾಪ-ಉಗ್ರತ್ವ) ಅಪರಾಧಗಳಿಗೆ, ಮನುಷ್ಯನ ಶಾಂತಿ-ನೆಮ್ಮದಿ ಕೆಡುವುದಕ್ಕೆ   ಮೂಲಕಾರಣ. ಅದನ್ನು ತಡೆಯುವ ಶಕ್ತಿ ಅಂದರೆ ರೋಧಕ ಶಕ್ತಿಯ ಅಗತ್ಯವಿದೆ. ರುದ್ರ ಅಂಥ ಶಕ್ತಿಯನ್ನು ಕೊಟ್ಟು ನಮ್ಮನ್ನು ಸುಮನಸ್ಕರನ್ನಾಗಿಸುವವನಾಗಿದ್ದಾನೆ.  ಶಿವೋ ನಃ ಸುಮನಾ ಭವ | ಸೌಮನಸಶ್ಚ ಮೇ ಇತ್ಯಾದಿಯಾಗಿ ರುದ್ರಮಂತ್ರದಲ್ಲಿ ಪ್ರಾರ್ಥಿಸಲಾಗಿದೆ.  

    ಪಶು-ಪಕ್ಷಿ-ಪ್ರಾಣಿ- ನೆಲ-ಜಲ ಸೇರಿದಂತೆ ಸಮಸ್ತ ಭೂತಜಗತ್ತನ್ನು  ಸುಖ-ಶಾಂತಿ, ಸೌಹಾರ್ದದಿಂದ ಇರುವಂತೆ ಮಾಡು ಎಂಬ ಉದಾತ್ತ ಪ್ರಾರ್ಥನೆ ರುದ್ರಮಂತ್ರದಲ್ಲಿದೆ. ಇದು ಎಲ್ಲರ ಕ್ಷೇಮಕ್ಕಾಗಿ ಪ್ರಾರ್ಥನೆ. 

    ರುದ್ರನ ಉಗ್ರತೆಯನ್ನು ಶಮನಗೊಳಿಸಿ ಅವನಿಂದ ನಮಗೆ  ಬೇಕಾದುದನ್ನು ಪಡೆಯುವ ಸ್ತೋತ್ರರೂಪದ ಮಂತ್ರಗಳು ರುದ್ರಾಧ್ಯಾಯದ ಪ್ರಾರಂಭದಲ್ಲೇ ಬರುತ್ತದೆ. ಇವು  ನಮನ ಪ್ರಧಾನ ಮಂತ್ರಗಳಾದ್ದರಿಂದ  ಇದಕ್ಕೆ ರುದ್ರನಮಕವೆಂದೂ,  ಬೇಕಾದುದನ್ನು ದಯಪಾಲಿಸಬೇಕೆಂದು ಕೇಳುವ ಮಂತ್ರಗಳನ್ನು ರುದ್ರಚಮಕವೆಂದೂ  ಕರೆಯಲಾಗಿದೆ. 

ಹೇ ರುದ್ರ,  ನಿನ್ನ ಕೋಪಕ್ಕೆ ನಮಸ್ಕಾರ, ನಿನ್ನ  ಬಾಣಕ್ಕೆ, ಬಿಲ್ಲಿಗೆ  ನಮಸ್ಕಾರ ….! (ನಮಸ್ತೇ ರುದ್ರ ಮನ್ಯವೇ, ಉತೋತ ಇಷವೇ ನಮಃ | ನಮಸ್ತೇ ಅಸ್ತು ಧನ್ವನೇ…)  ಎಂಬ ವಾಕ್ಯದಿಂದ ರುದ್ರಾಧ್ಯಾಯ ಪ್ರಾರಂಭವಾಗುತ್ತದೆ. 
ವೇದೋಕ್ತ ಸಸ್ವರ ರುದ್ರತ್ರಿಶತೀ ಅಂದರೆ ಮುನ್ನೂರು ನಾಮಗಳುಕೂಡ ರುದ್ರಾಧ್ಯಾಯದ  ಕೊಡುಗೆ.   

    ಮಂಗಲಮೂರ್ತಿಯ (ಶಿವ) ಆರಾಧನೆಯಿಂದ ಮಾತ್ರ  ಮಂಗಲವುಂಟಾಗುವುದು ಸಾಧ್ಯ. ರುದ್ರಾಧ್ಯಾಯಕ್ಕೆ ಮೊದಲು ಪಠಿಸುವ ಮಹಾನ್ಯಾಸ, ಲಘುನ್ಯಾಸಗಳಲ್ಲಿ ನಮ್ಮೊಳಗೆ ಶಿವನನ್ನು ಆವಾಹಿಸಿಕೊಳ್ಳುವ ಅಂಗನ್ಯಾಸ-ಕರನ್ಯಾಸಾದಿ ಮಂತ್ರಗಳಿರುವುದನ್ನು ಗಮನಿಸಬಹುದು. ಇಲ್ಲಿ ನಾವು ದೇಹೋ ದೇವಾಲಯಃ ಪ್ರೋಕೊ¤à ಜೀವೋ ದೇವಃ ಸದಾಶಿವಃ ಎಂಬ ಮಾತನ್ನು ಸ್ಮರಿಸಿಕೊಳ್ಳಬಹುದು. ಪೂಜಕ ತನ್ನನ್ನು ತಾನು ಶುದ್ಧೀಕರಿಸಿಕೊಳ್ಳಬೇಕೆಂಬುದೇ ಮುಖ್ಯ ತಾತ್ಪರ್ಯ. 

ರುದ್ರಾಧ್ಯಾಯದ ಮಹತ್ವ  
    ಶಿವನ ಸರ್ವವ್ಯಾಪಕತೆಯನ್ನು ಭಾವಿಸಿಕೊಂಡು, ಆ ಅದ್ಭುತ ಶಕ್ತಿಯನ್ನು ಆರಾಧಿಸಲು ಶ್ರೀರುದ್ರಾಧ್ಯಾಯವೆಂಬ ಮಂತ್ರಸಾಹಿತ್ಯದಲ್ಲಿ  ಹೇಳಿರುವ  ವಿಧಿ- ವಿಧಾನಗಳಿಂದಲೇ ಪ್ರಸಿದ್ಧ ಶಿವಾಲಯಗಳಲ್ಲಿ ಅಭಿಷೇಕ ಪೂಜೆ ನೆರವೇರುತ್ತದೆ. 
     ಮಹಾಶಿವರಾತ್ರಿಯಂದು ನಾಲ್ಕು ಯಾಮಗಳಲ್ಲೂ ಈ ಮಂತ್ರಗಳಿಂ ದಲೇ  ಅಭಿಷೇಕ ಪೂಜೆ ನೆರವೇರುತ್ತದೆ. ಓಂ ನಮಶ್ಶಿವಾಯ  ಎಂಬ ಪವಿತ್ರ ಶಿವಪಂಚಾಕ್ಷರ ಮಂತ್ರವೂ ಈ ಸಾಹಿತ್ಯದ ಕೊಡುಗೆಯೇ ಆಗಿದೆ.      ಪರಿಶುದ್ಧ ಮನಸ್ಸಿನಿಂದ, ಪರಿಶುದ್ಧ ಉಚ್ಚಾರಣೆಯೊಂದಿಗೆ  ಅಂದರೆ ಸ್ವರಾಕ್ಷರಾದಿಗಳು ಸ್ವಲ್ಪವು ಲೋಪವಾಗದಂತೆ ರುದ್ರಮಂತ್ರವನ್ನು ಪಠಿಸಿದರೆ ಖಂಡಿತವಾಗಿಯೂ ಈಪ್ಸಿತಸಿದ್ಧಿಯಾಗುತ್ತದೆಂದು ಮಂತ್ರದ್ರಷ್ಟಾರರು ಅಭಯ ನೀಡಿ¨ªಾರೆ. 

ಇದರಲ್ಲಿ ಪ್ರತಿ ಅಕ್ಷರವೂ ಮಂತ್ರವೆಂಬ ಎಚ್ಚರಿಕೆ ಬೇಕು. ಅಮಂತ್ರಮಕ್ಷರಂ ನಾಸ್ತಿ ! ರುದ್ರಹೋಮದಲ್ಲೂ ರುದ್ರಾಧ್ಯಾಯದ ಮಂತ್ರಗಳನ್ನೇ  ಬಳಸುತ್ತಾರೆ.     
ಆರಾಧನೆಯ ಮೂಲ ಉದ್ದೇಶವನ್ನು ಅರ್ಥೈಸಿಕೊಂಡು ಪೂಜಿಸುವ ನಿಜವಾದ ಭಕ್ತಿ-ಭಾವ ಸಹಿತರಾದ ಶಿವಭಕ್ತರಿಗೆ ಇದೊಂದು ಅಮೃತಕ್ಷಣ.  ವಿಷ್ಣು ಅಲಂಕಾರಪ್ರಿಯನಾಗಿದ್ದರೆ,  ಶಿವ ಅಭಿಷೇಕಪ್ರಿಯ ಎಂಬ ಉಕ್ತಿಗನುಗುಣವಾಗಿ  ಶಿವಾರ್ಚನೆಯಲ್ಲಿ ಅಭಿಷೇಕಕ್ಕೆ ಪ್ರಾಶಸ್ತ್ಯ.  

ಸಿ. ಎ. ಭಾಸ್ಕರ ಭಟ್ಟ

ನಟರಾಜ-ನವರಸ
ಚತುರಾಭಿನಯಭಾವನ  ರಸಾಯನ! 
ಚತುರಭಿನಯಜೀವನ  ಜನಾವನ ! || ಪ ||
ಸುಂದರಿ ಮಧುರಾನಗರಿಯ ನಾಯಿಕೆ 
ಬಂದೊಲಿದಳಲಾ ನಿನ್ನ ಬಳಿ
ಮಂದಹಾಸಮಾಧುರ್ಯದ ವಿಧಿಯೇ! 
ಸುಂದರೇಶ! ಶೃಂಗಾರಭರ ! || 1 ||
ವೈರಿಭಯಂಕರ ! ತ್ರಿಪುರಲಯಂಕರ ! 
ಶೂರಗಜಾಸುರದಾರಣ !
ಚಾರುಸಂಗರವಿಹಾರ ! ಶಂಕರ ! 
ವೀರವರ್ಯ! ವಿನತಾರ್ಯ ! || 2 ||
ದಕ್ಷನ ಯಾಗದೆ ಮಡಿಯೆ ಮಡದಿ ಬಾ-
ಷ್ಪಾಕ್ಷನಾದೆಯಲ ಶೋಕಹತ !
ದೀûಾಕಲ್ಪಿತಮೃಕಂಡುನಂದನ-
ರûಾ! ಕರುಣಾಕಲಿತ! || 3 ||
ಲೋಕಮೋಹಕರಮೋಹಿನಿಯ ನವಾ-
ಲೋಕನವಿಸ್ಮಿತ! ಸುಸ್ಮಿತನೇ !  
ಸ್ವೀಕರಿಸುತೆ ಹರಿಯನು ಮಣಿಕಂಠನ
ಪ್ರಾಕಟಪಡಿಸಿದ ಸುಮಹಾದ್ಭುತ! || 4 ||
ಪಾರ್ವತಿಯ ತಪಃಪರೀಕ್ಷೆಗೆಂದೇ
ಶರ್ವ! ನೋಂತ ಪರಿಹಾಸಪರ!
ಪರ್ವಾಯಿತಲಘುಲೀಲ! ಪೇಶಲ!
ಸರ್ವದಾ ಹಾಸ್ಯಹೇವಾಕ! || 5 ||
ಭಸ್ಮಾಸುರನಿಂದಂಜುವ ಚದುರೇ!
ವಿಸ್ಮಯಾವಹಭಯಾನಕನೇ!
ಆ ಸ್ಮರನ ಮಹಾಘಸ್ಮರನಾಗಿಯು-
ಮಸ್ಮಯಮೂರ್ತಿಯೆ! ಶ್ರಿತಕೀರ್ತಿಯೇ! || 6 ||
ಕ್ಷೀರಸಾಗರವ ಕಡೆವ ಕಾಲದೊಳು
ಸಾರಿದ ರತ್ನಗಳೆಲ್ಲವನೂ
ದೂರವಿಡುವ ಭೋಗಜುಗುಪ್ಸಿತನೇ!
ಧೀರ! ದಿವ್ಯಬೀಭತ್ಸಭರ! || 7 ||
ಕ್ಷುದ್ರಮನೋವೈಕಲ್ಯದ ಮಾರನ
ಮುದ್ರಿಪ ನೊಸಲಿನ ಕ‌ಣ್ಣವನೇ!
ವಿದ್ರಾವಿಸಿಯುಂ ವಿನತರ ಪೊರೆಯುವ 
ರೌದ್ರಮೂರ್ತಿ! ಶಿವತಾಸ್ಫೂರ್ತಿ! || 8 ||
ಶಾಂತ! ನಿಜಾತ್ಮನಿಯಂತ್ರಿತ! ಯಮಿಜನ-
ಚಿಂತನವಟತರುಮೂಲಸ್ಥಿತ!
ಅಂತರಂಗಸಂವೇದ್ಯಮೌನವಾ-
ಕ್ಕಾಂತ! ಕೃತಾಂತಹತರ ಪೊರೆಯೈ || 9 ||

ಶತಾವಧಾನಿ ಆರ್‌. ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next