Advertisement
ಈಶ್ವರನನ್ನು ಪೂಜಿಸುವುದಕ್ಕೆ ಚತುರ್ದಶಿ ತಿಥಿಯು ಶ್ರೇಷ್ಠವಾದದು. ಅದರಲ್ಲೂ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ರಾತ್ರಿಯು ಪರಮೇಶ್ವರನ ಪೂಜೆಗೆ ಪ್ರಶಸ್ತ ವಾದುದು. ಸಾಮಾನ್ಯವಾಗಿ ರಾತ್ರಿಯು ಅಮಂಗಲಕರ ವಾದುದು ಎಂಬುದು ನಮ್ಮೆಲ್ಲರ ಭಾವನೆಯಾಗಿದೆ. ಆದರೆ ಈ ಮಾಘಮಾಸದ ಕೃಷ್ಣ ಪಕ್ಷದ ಚತುರ್ದಶಿಯ ರಾತ್ರಿಯು ಶಿವರಾತ್ರಿಯಾಗಿದೆ. ಶಿವ ಅಂದರೆ ಮಂಗಲ ಎಂದರ್ಥ. ಆದ್ದರಿಂದ ಶಿವರಾತ್ರಿ ಅಂದರೆ ಮಂಗಳಕರವಾದ ರಾತ್ರಿ ಎಂದರ್ಥವಾಗುತ್ತದೆ. ಶಿವ ಪುರಾಣದಲ್ಲಿ ತಿಳಿಸಿದಂತೆ ಈ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ರಾತ್ರಿಯಲ್ಲಿಯೇ ಶಿವ-ಗಿರಿಜೆಯರ ಕಲ್ಯಾಣವು ನಡೆದಿರುವುದರಿಂದ ಅದನ್ನು ಹೀಗೆ “ಶಿವರಾತ್ರಿ’ ಎಂಬುದಾಗಿ ಪರಿಗಣಿಸಿದ್ದಾರೆ.
Related Articles
Advertisement
ಹೀಗೆ ಗಿರಿಜಾಕಲ್ಯಾಣ ನಡೆದ ರಾತ್ರಿಯೇ ಈ ಮಹಾಶಿವರಾತ್ರಿಯಾಗಿದೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯೇ ಶಿವರಾತ್ರಿ. ಶಿವ- ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಅಂದು ರಾತ್ರಿ ದೇವಾನುದೇವತೆಗಳೆಲ್ಲರೂ ಜಾಗ ರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆಯ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ತನ್ನ ಮರುಮದುವೆಯ ದಿನವಾಗಿ ರುವುದರಿಂದ ಶಿವನಿಗೆ ಈ ಶಿವರಾತ್ರಿಯು ಅತ್ಯಂತ ಪ್ರಿಯವಾದ ದಿನವಾಗಿದೆ. ಹೀಗಾಗಿ ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತಹ ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎಂಬುದಾಗಿ ಶಿವಪುರಾಣದಲ್ಲಿ ತಿಳಿಸಲಾಗಿದೆ.
ಅಭಿಷೇಕ, ಶಿವನ ಆರಾಧನೆಯಲ್ಲಿ ಅತ್ಯಂತ ಪ್ರಮುಖವಾದ ಸ್ಥಾನ ಪಡೆದಿದೆ. ಶಿವಲಿಂಗಕ್ಕೆ ಶುದ್ಧವಾದ ಜಲ, ಹಾಲಿನಿಂದ ಅಭಿಷೇಕ ಮಾಡಿ, ಬಿಲ್ವಪತ್ರೆ, ತುಂಬೆ ಹೂ, ಎಕ್ಕದ ಹೂ, ಕಣಗಿಲೆ ಹೂವುಗಳನ್ನು ಅರ್ಪಿಸಿ ಪೂಜೆ ನೆರವೇರಿಸಬೇಕು. ಇನ್ನು ಮಹಾ ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆಗೆ ವಿಶೇಷ ಮಹತ್ವವಿದೆ. ಪ್ರತೀದಿನ ಸೇವಿಸುವ ಆಹಾರವನ್ನು ತ್ಯಜಿಸಿ ಸಂಪೂರ್ಣವಾಗಿ ನಿರಾಹಾರರಾಗಿ ಉಪವಾಸವನ್ನಾಚರಿಸಬೇಕು. ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಅಲ್ಪ ಫಲಾಹಾರವನ್ನು ಸೇವಿಸಿ ಉಪವಾಸ ವ್ರತವನ್ನು ಕೈಗೊಳ್ಳಬಹುದಾಗಿದೆ. ಇನ್ನು ಶಿವರಾತ್ರಿಯ ದಿನ ರಾತ್ರಿ ನಿದ್ದೆಯನ್ನು ತೊರೆದು, ರಾತ್ರಿಯಿಡೀ ಎಚ್ಚರವಿದ್ದು, ಶಿವಧ್ಯಾನ, ಶಿವಚಿಂತನೆ ಮತ್ತು ಶಿವನಾಮ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗರಣೆ ಆಚರಿಸಬೇಕು. ಇವೆರಡನ್ನೂ ಶ್ರದ್ಧೆಯಿಂದ ಆಚರಿಸಿದ್ದೇ ಆದಲ್ಲಿ ಶಿವರಾತ್ರಿಯ ನಮ್ಮ ವ್ರತ ಪರಿಪೂರ್ಣಗೊಳ್ಳುತ್ತದೆ ಮತ್ತು ಇದರಿಂದ ಪರಶಿವನು ತೃಪ್ತನಾಗುತ್ತಾನೆ ಎಂಬುದು ಪ್ರತೀತಿ.
ಒಂದು ವೇಳೆ ತ್ರಯೋದಶಿಯ ದಿನವೇ ಸೂರ್ಯಾಸ್ತವಾದ ಬಳಿಕ ನಾಲ್ಕು ಗಳಿಗೆಗಳಲ್ಲಿಯೇ ಚತುರ್ದಶಿ ತಿಥಿ ಬಂದರೆ ಅಂದೇ ಶಿವರಾತ್ರಿಯನ್ನು ಆಚರಿಸಬೇಕು ಎಂಬುದಾಗಿ ನಮ್ಮ ತಿಥಿ ನಿರ್ಣಯದ ಗ್ರಂಥಗಳಲ್ಲಿ ತಿಳಿಸಲಾಗಿದೆ. ಹೀಗಾಗಿ ಈ ವರ್ಷ ಚತುರ್ದಶಿ ತಿಥಿಯು ಮಾರ್ಚ್ 9ರ ಶನಿವಾರದಂದು ಇದ್ದರೂ ಕೂಡ ಆ ಚತುರ್ದಶಿ ತಿಥಿಯು ತ್ರಯೋದಶಿಯ ದಿನದಂದೇ ಅಂದರೆ ಮಾರ್ಚ್ 8ರ ಶುಕ್ರವಾರ ರಾತ್ರಿ 07.44 ಗಂಟೆಯಿಂದಲೇ ಆರಂಭವಾಗುವುದರಿಂದ ಅಂದೇ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ.
ಶಿವರಾತ್ರಿಯಂದು ನಿದ್ದೆ ಮಾಡದೇ ಎಚ್ಚರದಿಂದ (ಜಾಗರಣೆ) ಇದ್ದು ಶಿವನ “ಪಂಚಾಕ್ಷರೀ’ ಮಂತ್ರವನ್ನು ಪಠಿಸುತ್ತಾ ಇರಬೇಕು ಎಂಬುದಾಗಿ ಶಾಸ್ತ್ರ ಹೇಳುತ್ತದೆ. “ಪಂಚಾ ಕ್ಷರೀ ಮಂತ್ರ’ ಎಂದರೆ ಬೇರೆ ಏನೂ ಅಲ್ಲ , “ನಮಃ ಶಿವಾಯ’ ಎಂಬ ಐದು ಅಕ್ಷರಗಳಿರುವ ಶಬ್ದವೇ ಪಂಚಾಕ್ಷರೀ ಮಂತ್ರ ವಾಗಿದೆ. ಇದನ್ನೇ ಕೆಲವರು “ಓಂ ನಮಃ ಶಿವಾಯ’ ಎನ್ನುತ್ತಾರೆ. ಆದರೆ ಆಗ ಅದು ಆರು ಅಕ್ಷರಗಳ ಷಡಕ್ಷರಿಯಾಗುತ್ತದೆ ಅಷ್ಟೇ. ಆದರೂ ಪರವಾಗಿಲ್ಲ , ಅದೂ ಕೂಡ ತಪ್ಪಲ್ಲ.
ಈ ಪಂಚಾಕ್ಷರೀ ಮಂತ್ರವನ್ನು ಜಪಿಸುವುದರಿಂದ ಪಂಚ ಮಹಾ ಪಾಪಗಳಾದ ಬ್ರಹ್ಮಹತ್ಯೆ (ಬ್ರಾಹ್ಮಣರನ್ನು ಕೊಂದ ಪಾಪ), ಸುರಾಪಾನ, ಸ್ವರ್ಣಸ್ತೇಯ (ಚಿನ್ನ ಕದ್ದ ಪಾಪ), ಗುರುಪತ್ನಿà ಸಂಗ ಹಾಗೂ ಈ ನಾಲ್ಕು ಪಾಪಗಳನ್ನು ಮಾಡಿದ ಪಾಪಿಗಳ ಸಂಗದಿಂದ ದೊರೆತ ಪಾಪ ಇವೆಲ್ಲವೂ ನಿವಾರಣೆಯಾಗುತ್ತವೆ. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ ಹಾಗೂ ಚರ್ಮಗಳು ಶುದ್ಧವಾಗಿ ಪಾವನವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
-ಹರಿಕೃಷ್ಣ ಹೊಳ್ಳ, ಬ್ರಹ್ಮಾವರ